ಬಜೆಟ್‌ ಬಳಿಕ ಪ್ರತ್ಯೇಕ ರಾಷ್ಟ್ರದ ಕೂಗು ಎತ್ತಿದ ಡಿಕೆ ಸುರೇಶ್‌: ಬೆಂಡೆತ್ತಿದ “ಕಮಲ”

ಬೆಂಗಳೂರು: ಕೇಂದ್ರ ಸರ್ಕಾರದಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ ಎಂದ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅವರು, ದಕ್ಷಿಣ ಭಾರತಕ್ಕೆ ಪ್ರತ್ಯೇಕ ರಾಷ್ಟ್ರ ಕೂಗು ಎತ್ತಿದ್ದಾರೆ. ಈ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.

ಕೇಂದ್ರ ಬಜೆಟ್ ಕುರಿತು ಪ್ರತಿಕ್ರಿಯಿಸಿದ ಡಿಕೆ ಸುರೇಶ್ ಅವರು, ದಕ್ಷಿಣ ಭಾರತದ ತೆರಿಗೆ ಹಣವನ್ನು ಉತ್ತರ ಭಾರತಕ್ಕೆ ಹಂಚಿಕೆ ಮಾಡುತ್ತಿದ್ದಾರೆ. ಇದರಿಂದ ನಮಗೆ ಆರ್ಥಿಕವಾಗಿ ಅನ್ಯಾಯವಾಗುತ್ತಿದೆ ಎಂದರು.

ನಮ್ಮ ರಾಜ್ಯಗಳ ಹಣ ನಮಗೇ ಹಂಚಿಕೆಯಾಗಬೇಕಾದರೆ ಪ್ರತ್ಯೇಕ ರಾಷ್ಟ್ರದ ಕೂಗು ಅನಿವಾರ್ಯವಾಗಿದೆ. ಹೀಗಾಗಿ ದಕ್ಷಿಣ ಭಾರತಕ್ಕೆ ಪ್ರತ್ಯೇಕ ರಾಷ್ಟ್ರದ ಕೂಗು ಎತ್ತಬೇಕಾಗುತ್ತದೆ ಮತ್ತು ಮುಂದೆ ದಕ್ಷಿಣ ಭಾರತದ ರಾಜ್ಯಗಳು ಪ್ರತ್ಯೇಕ ರಾಷ್ಟ್ರದ ಕೂಗು ಎತ್ತಲಿವೆ ಎಂದು ಕಾಂಗ್ರೆಸ್ ಸಂಸದ ಹೇಳಿದ್ದಾರೆ.

ಪ್ರತ್ಯೇಕ ರಾಷ್ಟ್ರದ ಕೂಗು ಏಳುವ ಮುನ್ನವೇ ಕೇಂದ್ರ ಸರ್ಕಾರ ಈ ಸಮಸ್ಯೆಯನ್ನು ಸರಿಪಡಿಸಿಕೊಳ್ಳಬೇಕು. ದಕ್ಷಿಣ ಭಾರತದ ತೆರಿಗೆ ಹಣವನ್ನು ದಕ್ಷಿಣ ಭಾರತಕ್ಕೇ ಖರ್ಚು ಮಾಡಬೇಕು. ನಮ್ಮ ಹಣವನ್ನು ಉತ್ತರ ಭಾರತಕ್ಕೆ ಹಂಚಿಕೆ ಮಾಡಬಾರದು ಎಂದು ಡಿ.ಕೆ.ಸುರೇಶ್ ಹೇಳಿದ್ದಾರೆ.

ಡಿ.ಕೆ.ಸುರೇಶ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಡಿ.ಕೆ ಸುರೇಶ್​ ಸಂಸದರಾಗಿದ್ದು ತಮ್ಮ ಜವಾಬ್ದಾರಿ ಅರಿತು ಮಾತನಾಡಬೇಕು. ರಾಜ್ಯ ಸರ್ಕಾರ ಸಂವಿಧಾನದ 75ನೇ ವರ್ಷದ ರಥಯಾತ್ರೆ ಆಚರಣೆ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಂಸದರು ಈ ರೀತಿ ಮಾತನಾಡಿರುವುದು ಖಂಡನೀಯ. ಯಾವುದೇ ಒಬ್ಬ ಜನಪ್ರತಿನಿಧಿ ತಮ್ಮ ಸ್ಥಾನ ಅಲಂಕರಿಸುವ ಸಂದರ್ಭದಲ್ಲಿ ಸಂವಿಧಾನವನ್ನು ಮುಂದಿಟ್ಟುಕೊಂಡು ಪ್ರತಿಜ್ಞೆ ಮಾಡುತ್ತಾರೆ. ಈ ವೇಳೆ ಭಾರತದ ಅಖಂಡತೆ, ಸಾರ್ವಭೌಮತ್ವವನ್ನು ಕಾಪಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿರುವುದನ್ನ ಸುರೇಶ್ ಅವ್ರು ಮರೆತು ಹೋಗಿದ್ದಾರೆ ಎಂದು ಬೆಂಡೆತ್ತಿದ್ದಾರೆ.

Font Awesome Icons

Leave a Reply

Your email address will not be published. Required fields are marked *