ಬಿಗ್ ಬಾಸ್ 10ನೇ ಸೀಸನ್ ನಲ್ಲಿ ಸ್ನೇಕ್ ಶ್ಯಾಮ್ ಇದ್ದಾರಾ?

ಮೈಸೂರು: ಕಲರ್ಸ್ ನಲ್ಲಿ ಬಿಗ್ ಬಾಸ್ ಅ.8ರಿಂದ ಆರಂಭವಾಗುತ್ತಿದ್ದು ಯಾರೆಲ್ಲ ಸ್ಪರ್ಧಿಗಳು ಎಂಬುದು ಈಗಾಗಲೇ ಅಲ್ಲಲ್ಲಿ ಹರಿದಾಡುತ್ತಿದೆ. ಆದರೆ ಬಿಗ್ ಬಾಸ್ ಆರಂಭವಾದ ಬಳಿಕವಷ್ಟೆ ಗೊತ್ತಾಗಬೇಕಾಗಿದೆ. ಆದರೆ ಈ ಸೀಸನ್ ನಲ್ಲಿ ಮೈಸೂರಿನ ಉರಗತಜ್ಞ ಸ್ನೇಕ್ ಶ್ಯಾಮ್ ಇದ್ದಾರೆ ಎನ್ನುವುದೇ ವಿಶೇಷ.

ಮನೆಗಳಲ್ಲಿ ಪತ್ತೆಯಾಗುವ ಹಾವುಗಳನ್ನು ಹಿಡಿಯುತ್ತಾ ಸಾರ್ವಜನಿಕರಿಗೆ ಹಾವುಗಳ ಅರಿವು ಮೂಡಿಸುತ್ತಾ ಹಾವುಗಳ ರಕ್ಷಣೆ ಮಾಡುತ್ತಾ ಬಂದವರು ಸ್ನೇಕ್ ಶ್ಯಾಮ್. ಮೈಸೂರು ಮಾತ್ರವಲ್ಲದೆ, ಎಲ್ಲರಿಗೂ ಸ್ನೇಕ್ ಶ್ಯಾಮ್ ಪರಿಚಿತರಾಗಿದ್ದಾರೆ. ಇವರ ಬಗ್ಗೆ ಹೇಳಬೇಕೆಂದರೆ 1981ರಿಂದ ಹಾವುಗಳನ್ನು ಹಿಡಿದು ಕಾಡಿಗೆ ಬಿಡುವುದನ್ನು ಹವ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ. ಅವರು ಬದುಕು ನಡೆಸಲು ಮಕ್ಕಳನ್ನು ತನ್ನ ವಾಹನದಲ್ಲಿ ಶಾಲೆಗೆ ಬಿಡುವ ಕಾಯಕ ಮಾಡುತ್ತಿದ್ದರು. ನಂತರ ಮೈಸೂರು ನಗರಪಾಲಿಕೆ ಸದಸ್ಯರಾದರು. ಇದುವರೆಗೆ ಇವರು ಹಿಡಿದ ಹಾವುಗಳ ಸಂಖ್ಯೆ ಸುಮಾರು 86 ಸಾವಿರದಷ್ಟಿದೆ. ಇವತ್ತಿಗೂ ಕಷ್ಟಕಾಲದಲ್ಲಿ ಅವರ ಕೈ ಹಿಡಿದ ಆಟೋ ಡ್ರೈವರ್ ಕೆಲಸವನ್ನು ನೆನಪಿಸಿಕೊಳ್ಳುತ್ತಾರೆ.

ಸ್ನೇಕ್ ಶ್ಯಾಮ್ ಅವರಿಗೆ ಇರುವ ಹಾವಿನ ಮೇಲಿನ ಪ್ರೀತಿ ಮತ್ತು ಅವರ ವೇಷಭೂಷಣಗಳು ವಿಭಿನ್ನವಾಗಿ ಜನರನ್ನು ಆಕರ್ಷಿಸುತ್ತಿದ್ದು, ಈ ಜನಪ್ರಿಯತೆ ಅವರನ್ನು ಮೈಸೂರು ಮಹಾನಗರಪಾಲಿಕೆ ಸದಸ್ಯನನ್ನಾಗಿ ಮಾಡಿತು ಎನ್ನುವುದರಲ್ಲಿ ಎರಡು ಮಾತಿಲ್ಲ. ಹಿಂದೆ ಹಾವುಗಳನ್ನು ಮನೆಯ ಸುತ್ತಮುತ್ತ ಕಂಡಾಗ ಜನ ಭಯಭೀತರಾಗಿ ಅದನ್ನು ಹೊಡೆದು ಸಾಯಿಸಿಬಿಡುತ್ತಿದ್ದರು. ಇದನ್ನು ನೋಡುತ್ತಿದ್ದ ಶ್ಯಾಮ್ ಅವರಿಗೆ ಹಾವುಗಳ ಮಾರಣಹೋಮವನ್ನು ತಪ್ಪಿಸುವುದು ಹೇಗೆ ಎಂಬ ಚಿಂತೆ ಕಾಡಿತ್ತು. ಅಲ್ಲದೆ ಮನೆಗೆ ಬರುವ ಹಾವುಗಳನ್ನು ಹೊಡೆದು ಕೊಲ್ಲುವ ಬದಲು ಸೆರೆ ಹಿಡಿದು ಕಾಡಿಗೆ ಬಿಟ್ಟರೆ ಹೇಗೆ ಎಂಬ ಆಲೋಚನೆ ಬಂದಿತ್ತು. ಕೂಡಲೇ ಅವರು ಅದನ್ನು ಕಾರ್ಯರೂಪಕ್ಕೆ ತರಲು ಮುಂದಾದರು.

1981ರಿಂದಲೇ ಹಾವನ್ನು ಹಿಡಿದು ಕಾಡಿಗೆ ಬಿಡುವ ಕೆಲಸವನ್ನು ಅವರು ಆರಂಭಿಸಿದರೂ ಅದನ್ನು ನಮೂದಿಸುವ ಕಾರ್ಯವನ್ನು ಕೈಗೊಂಡಿದ್ದು 1997ರಲ್ಲಿ. ಅಲ್ಲಿಂದೀಚೆಗೆ ಅವರು ಹಾವು ಹಿಡಿಯಲು ಹೋಗುವ ಸಂದರ್ಭ ತಮ್ಮೊಂದಿಗೆ ರಿಜಿಸ್ಟರ್‌ನ್ನು ಹಿಡಿದುಕೊಂಡು ಹೋಗುತ್ತಾರೆ. ಹಾವು ಹಿಡಿದ ಬಳಿಕ ತಾವು ಹಿಡಿದ ಹಾವಿನ ಬಗ್ಗೆ, ಎಲ್ಲಿ ಹಿಡಿದಿದ್ದು ಎಂಬುವುದರ ಕುರಿತು ವಿವರವಾಗಿ ಬರೆದು ಸಂಬಂಧಿಸಿದವರಿಂದ ಸಹಿ ಪಡೆಯುತ್ತಾರೆ.

ಹೊಟ್ಟೆಪಾಡಿಗೆ ತನ್ನದೇ ಆದ ವೃತ್ತಿಯನ್ನು ಮಾಡುತ್ತಿರುವ ಅವರು ಪ್ರವೃತ್ತಿಯಾಗಿ ಹಾವು ಹಿಡಿಯುವ ಕಾಯಕವನ್ನು ರೂಢಿಸಿಕೊಂಡಿದ್ದಾರೆ. ಆದರೆ ಕರೆ ಬಂದ ತಕ್ಷಣ ಸ್ವಂತ ಖರ್ಚಿನಲ್ಲಿ ತೆರಳಿ ಮನೆಗಳಲ್ಲಿ ಅವಿತು ಕೊಂಡಿರುವ ಹಾವುಗಳನ್ನು ಸೆರೆಹಿಡಿಯುವುದು ಸುಲಭದ ಕೆಲಸವಲ್ಲ. ಆದರೂ ನಿಷ್ಠೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ ಇವರು ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದು ನ್ಯಾಷನಲ್ ಜಿಯೋಗ್ರಫಿ ಚಾನಲ್ ಇವರ ಸಾಕ್ಷ್ಯ ಚಿತ್ರವನ್ನು ಪ್ರಸಾರ ಮಾಡಿದೆ. ಹಲವಾರು ಸಂಘ ಸಂಸ್ಥೆಗಳು ಇವರ ಕಾರ್ಯವನ್ನು ಮೆಚ್ಚಿ ಸನ್ಮಾನಿಸಿವೆ. ಇದೀಗ ಅವರು ಬಿಗ್ ಬಾಸ್ ಗೆ ಹೋಗುತ್ತಿದ್ದು ಅಲ್ಲಿ ಹೇಗಿರುತ್ತಾರೆ? ಎಂಬುದು ಎಲ್ಲರ ಕುತೂಹಲವಾಗಿದೆ.

Font Awesome Icons

Leave a Reply

Your email address will not be published. Required fields are marked *