ಮೈಸೂರು: ಹತ್ತು ವರ್ಷಗಳ ಕಾಲ ಸಂಸದನಾಗಿ ಕೆಲಸ ಮಾಡಲು ಅವಕಾಶ ನೀಡಿದ ಬಿಜೆಪಿ ಪಕ್ಷಕ್ಕೆ ದ್ರೋಹ ಬಗೆಯಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಎಂಜಿ ರೋಡ್ನಲ್ಲಿರುವ ಕಚೇರಿಯಲ್ಲಿ ಕುಳಿತು ಬರೆಯುತ್ತಿದ್ದ ನನಗೆ ಟಿಕೆಟ್ ನೀಡಿ, 10 ವರ್ಷಗಳ ಕಾಲ ಸಂಸದರನ್ನಾಗಿ ಮಾಡಿದ ಬಿಜೆಪಿಗೆ ನಾನು ದ್ರೋಹ ಬಗೆಯುವುದಿಲ್ಲ. 2014 ರಲ್ಲಿ ನನಗೆ ಯಾಕೆ ಟಿಕೆಟ್ ಕೊಟ್ಟರು ಎಂದು ಬಿಜೆಪಿ ಹೈಕಮಂಡ್ ಹೇಳಿರಲಿಲ್ಲ. ನಾನು ಯಾಕೆ ಕೊಟ್ಟರಿ ಅಂತಾ ಕೇಳಿಲಿಲ್ಲ. ಈಗಲೂ ಅಷ್ಟೇ ಯಾಕೆ ಟಿಕೆಟ್ ತಪ್ಪಿಸಿದ್ದೀರಿ ಎಂದು ನಾನು ಕೇಳಿಯೂ ಇಲ್ಲ. ಅವರು ಹೇಳಿಯೂ ಇಲ್ಲ ಎಂದು ಹೇಳಿದರು.
ನನಗೆ ಸಂಸದನಾಗುವ ಅವಕಾಶ ಹಾಗೂ ರಾಜಕೀಯವಾಗಿ ಬೆಳೆಯುವ ಶಕ್ತಿ ನೀಡಿದ್ದು ಬಿಜೆಪಿ. ನನಗೆ ಪಕ್ಷ ತಾಯಿಯಿದ್ದಂತೆ, ಯಾವತ್ತೂ ತಾಯಿಗೆ ದ್ರೋಹ ಬಗೆಯುವುದಿಲ್ಲ. ಪಕ್ಷದ ಶಿಸ್ತಿನ ಶಿಪಾಯಿಯಂತೆ ಇರುತ್ತೇನೆ. ನನ್ನನ್ನು ಕೇಳಿ ಬೇರೆ ಯಾರಿಗಾದರೂ ಟಿಕೆಟ್ ಕೊಡಬೇಕೆಂದೇನೂ ಇಲ್ಲ. ನನಗೆ ಯಾವುದೇ ಸ್ಥಾನ-ಮಾನ ಬೇಕಾಗಿಲ್ಲ. ಕಳೆದ 10 ವರ್ಷದಲ್ಲಿ ಎಲ್ಲರ ನೀರೀಕ್ಷೆ ಮೀರಿ ಕೆಲಸ ಮಾಡಿದ್ದೇನೆ ಎಂದರು.