ಬೀದರ್‌ನಲ್ಲಿದೆ ಬೇಸಿಗೆಯ ತಂಪು ತಾಣ ಖೇರ್ಡಾ(ಬಿ) ಜಲಪಾತ

ಬಸವಕಲ್ಯಾಣ: ತಾಲ್ಲೂಕಿನ ಖೇರ್ಡಾ(ಬಿ) ಗ್ರಾಮದ ಮುಲ್ಲಾಮಾರಿ ಮೇಲ್ದಂಡೆ ಯೋಜನೆಯ ಜಲಾಶಯದ ಎದುರಿನಲ್ಲಿ ನಿರಂತರವಾಗಿ ನೀರು ಧುಮ್ಮಿಕ್ಕುವ ಜಲಪಾತವು ಬೇಸಿಗೆಯಲ್ಲಿನ ತಂಪುತಾಣವಾಗಿದ್ದು ಪ್ರತಿದಿನವೂ ನೂರಾರು ಜನರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.

ವನಭೋಜನಕ್ಕಾಗಿ ಬರುವ ಜನರು ಜಲಪಾತದ ಕೆಳಗೆ ನಿಂತು ಸ್ನಾನ ಮಾಡುತ್ತಾರೆ.

ಮಕ್ಕಳು ಸಹ ನೀರಿನಲ್ಲಿ ಕುಣಿದು ಸಂತಸಪಡುತ್ತಾರೆ. ಅಲ್ಲದೆ ರೀಲ್ಸ್ ಹಾಗೂ ಸಾಮಾಜಿಕ ಜಾಲತಾಣಕ್ಕಾಗಿ ವಿಡಿಯೋ ತಯಾರಿಸುವುದು ಮತ್ತು ಮದುವೆಪೂರ್ವದ ವಿಡಿಯೋ ಶೂಟಿಂಗ್ ಸಹ ಇಲ್ಲಿ ನಿರಂತರವಾಗಿ ನಡೆಯುತ್ತಿದೆ. ಕುಟುಂಬ ಸಮೇತ ಬರುವ ಜನರು ವಿವಿಧ ತಿಂಡಿ ತಿನಿಸು, ಊಟವನ್ನು ತಮ್ಮೊಂದಿಗೆ ತಂದು ಗಂಟೆಗಟ್ಟಲೇ ಇಲ್ಲಿ ಕಾಲ ಕಳೆಯುತ್ತಿದ್ದಾರೆ.

ಹಾಗೆ ನೋಡಿದರೆ, ಪ್ರಖರ ಬಿಸಿಲಿನ ಕಾರಣ ಜಲಾಶಯದ ನೀರು ಪ್ರತಿದಿನವೂ ಸ್ವಲ್ಪ ಸ್ವಲ್ಪವಾಗಿ ಕೆಳಕ್ಕಿಳಿಯುತ್ತಿದೆ. ಆದ್ದರಿಂದ ಜಲಾಶಯದಲ್ಲಿ ಏರಿಗೆ ಅಪ್ಪಳಿಸುವ ಅಲೆಗಳ ಅಬ್ಬರ ಇಲ್ಲದಂತಾಗಿದ್ದು ಅಲ್ಲಿಗೆ ಯಾರೂ ಹೋಗುತ್ತಿಲ್ಲ. ಆದರೆ, ಏರಿಯ ಎದುರಲ್ಲಿನ ನಾಲೆಯಲ್ಲಿ ನೀರು ಒಸರಿ ಮತ್ತು ಕಾಲುವೆಯ ನೀರು ಕೂಡಿಕೊಂಡು ಸೃಷ್ಟಿಯಾದ ಜಲಪಾತ ಮಾತ್ರ ಎಲ್ಲರ ಮನಸೊರೆಗೊಳ್ಳುತ್ತಿದೆ.

ಇಡೀ ವರ್ಷ ಇಲ್ಲಿ ಹೀಗೆಯೇ ನೀರು ಧುಮ್ಮಿಕ್ಕುತ್ತದೆ. 10 ಅಡಿ ಎತ್ತರದಿಂದ ಐದಾರು ಅಡಿ ಅಂತರದಲ್ಲೊಂದರಂತೆ ಮೂರು ಸ್ಥಳಗಳಲ್ಲಿ ನೀರು ಮೇಲಿನಿಂದ ಕೆಳಕ್ಕೆ ಬೀಳುವ ಈ ತಾಣ ತಾಲ್ಲೂಕಿನಲ್ಲಿನ ಪ್ರಮುಖ ಜನಾಕರ್ಷಣೆಯ ಕೇಂದ್ರವಾಗಿ ಮಾರ್ಪಟ್ಟಿದೆ. `ನಾಲ್ಕು ವರ್ಷದಿಂದ ನಾನು ಇಲ್ಲಿ ಚಹಾ, ಬಿಸ್ಕತ್‌ ಹಾಗೂ ಇತರೆ ತಿನಿಸು ಮಾರಾಟ ಮಾಡುತ್ತಿದ್ದು ಪ್ರತಿದಿನವೂ ಜನ ಬಂದೇ ಬರುತ್ತಾರೆ’ ಎಂದು ತಳ್ಳುಗಾಡಿ ವ್ಯಾಪಾರಿ ಹೇಳುತ್ತಾರೆ. `ಇತ್ತೀಚಿಗೆ ಮದುವೆಪೂರ್ವದ ವಧುವರರ ವಿಡಿಯೋ ಶೂಟಿಂಗ್ ಸಾಮಾನ್ಯವಾಗಿದೆ’ ಎಂದು ಅಲ್ಲಿದ್ದ ಫೋಟೊಗ್ರಾಫರ್ ತಿಳಿಸಿದರು.

‘ಬೇಸಿಗೆಯಲ್ಲಿ ಜಲಾಶಯದ ನೀರು ಬತ್ತುವುದು ಸಾಮಾನ್ಯ. ಈ ಕಾರಣ ಜಲಾಶಯದ ಏರಿಯನ್ನು ಮತ್ತಷ್ಟು ಎತ್ತರಿಸಿ ನೀರಿನ ಸಂಗ್ರಹ ಹೆಚ್ಚಿಸಬೇಕು. ಎದುರಿನ ಜಲಪಾತದ ಸ್ಥಳದಲ್ಲಿ ವಿವಿಧ ಸೌಲಭ್ಯಗಳನ್ನು ಒದಗಿಸಬೇಕು ಎಂದು ಶಾಸಕರಿಗೆ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿದ್ದೇವೆ’ ಎಂದು ಖೇರ್ಡಾ(ಬಿ) ಗ್ರಾಮದ ನೀರು ಬಳಕೆದಾರರ ಸಂಘದ ಅಧ್ಯಕ್ಷ ಲಿಂಗರಾಜ ಪಾಟೀಲ ಹೇಳಿದ್ದಾರೆ.

Font Awesome Icons

Leave a Reply

Your email address will not be published. Required fields are marked *