ಬೀದರ್: ಕುಡುಕರ ಅಡ್ಡೆಯಾದ ಸರ್ಕಾರಿ ಶಾಲಾ ಆವರಣ

ಖಟಕಚಿಂಚೋಳಿ: ಸಮೀಪದ ಹಾಲಹಳ್ಳಿ (ಕೆ) ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ವಾರದಲ್ಲಿ ಎರಡು ಮೂರು ದಿನ ರಾತ್ರಿ ಸಮಯದಲ್ಲಿ ಕುಡುಕರು ಮದ್ಯ ಸೇವಿಸಿ ಬಾಟಲಿಗಳನ್ನು ಅಲ್ಲಿಯೇ ಎಸೆದು ಹೋಗುತ್ತಿದ್ದಾರೆ. ಇದರಿಂದ ಅದು ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿದೆ.

‘ಶಾಲೆ ಎಂದರೆ ಕೈ ಮುಗಿದು ಒಳಗೆ ಬರಬೇಕು. ಆದರೆ ಇಲ್ಲಿ ಮೂಗು ಮುಚ್ಚಿಕೊಂಡು ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ಸಮಯದಲ್ಲಿ ಯಾರೂ ಕುಡುಕರು ಇಲ್ಲಿ ಕುಳಿತು ಕುಡಿದು ಬಾಟಲಿಗಳನ್ನು ಎಸೆಯುತ್ತಿದ್ದಾರೆ. ಅಲ್ಲದೇ ಕೆಲ ಸಮಯದಲ್ಲಿ ಶಾಲಾ ಆವರಣದಲ್ಲಿಯೇ ಮಲಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ’ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

ಭಾಲ್ಕಿ ತಾಲ್ಲೂಕು ಕೇಂದ್ರದಿಂದ 35 ಕಿ.ಮೀ ದೂರದಲ್ಲಿರುವ ಈ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ವಚ್ಛತಾ ಕೆಲಸಗಾರ ಹಾಗೂ ಕಾವಲುಗಾರ ಇಬ್ಬರೂ ಇಲ್ಲ. ಶಿಕ್ಷಕರು ಬೆಳಿಗ್ಗೆ ಶಾಲೆಗೆ ಬಂದರೆ ಮೊದಲು ಬಾಟಲಿಗಳನ್ನು ತೆಗೆಯುವುದೇ ಕೆಲಸವಾಗಿದೆ’ ಎಂದು ಶಿಕ್ಷಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

‘ಸರ್ಕಾರದ ಆದೇಶದಂತೆ ಪ್ರತಿ ದಿನ ಹೆಚ್ಚುವರಿಯಾಗಿ ಸಂಜೆ 4.30ರಿಂದ 6ರವರೆಗೆ ತರಗತಿ ತೆಗೆದುಕೊಳ್ಳುತ್ತಿದ್ದೇವೆ. ಆದರೆ ಪ್ರತಿ ದಿನ ನಾಲ್ಕು ಗಂಟೆಯಾದರೆ ಸಾಕು ಯುವಕರು ವಾಲಿಬಾಲ್ ಆಡಲು ಅಲ್ಲಿಗೆ ಬರುತ್ತಿದ್ದಾರೆ. ಅವರು ಆಡುವ ಸ್ಥಳವೂ ತರಗತಿ ಗೋಡೆಯ ಪಕ್ಕದಲ್ಲಿಯೇ ಇರುವುದರಿಂದ ಅವರ ಚೀರಾಟದಿಂದ ಮಕ್ಕಳಿಗೆ ಓದಲು ತೀವ್ರ ತೊಂದರೆಯಾಗುತ್ತಿದೆ’ ಎಂದು ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ಹೇಳಿದರು.

ವಾಲಿಬಾಲ್ ಆಡುವ ಯುವಕರಿಗೆ ಎಷ್ಟೇ ತಿಳಿವಳಿಕೆ ಹೇಳಿದರೂ ಅವರು ಕೇಳುತ್ತಿಲ್ಲ. ಅವರ ಕಿರುಚಾಟದಿಂದ ಮಕ್ಕಳು ವಿದ್ಯಾಭ್ಯಾಸದ ಕಡೆ ಗಮನ ಹರಿಸಲು ತೊಂದರೆಯಾಗುತ್ತಿದೆ. ಅಲ್ಲದೇ ರಾತ್ರಿಯ ಕುಡುಕರಿಂದ ಶಾಲೆಯ ಆಸ್ತಿಪಾಸ್ತಿಯು ಹಾನಿಯಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಶಾಲಾ ಆವರಣದಲ್ಲಿ ಉಂಟಾಗುತ್ತಿರುವ ಸಮಸ್ಯೆ ಬಗ್ಗೆ ಈಗಾಗಲೇ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಮನಕ್ಕೆ ತರಲಾಗಿದೆ. ಶಾಲೆಯ ಸುತ್ತಮುತ್ತ ವಿದ್ಯುತ್ ದೀಪಗಳನ್ನು ಅಳವಡಿಸಬೇಕು ಹಾಗೂ ಪೊಲೀಸರು ರಾತ್ರಿ ಸಮಯದಲ್ಲಿ ಗಸ್ತು ಓಡಾಡಬೇಕು’ ಎಂದು ಮನವಿ ಮಾಡಿದ್ದಾರೆ.

‘ಗ್ರಾಮದಲ್ಲಿ ವಾಲಿಬಾಲ್ ಆಡಲು ಬೇರೆಡೆ ಎಲ್ಲಿಯೂ ಸೂಕ್ತವಾದ ಸ್ಥಳವಿಲ್ಲ. ಕಳೆದ ಹಲವಾರು ವರ್ಷಗಳಿಂದ ಈ ಸ್ಥಳದಲ್ಲಿಯೇ ಆಟ ಆಡುತ್ತಿದ್ದೇವೆ. ಹೀಗಾಗಿ ಪ್ರತಿ ದಿನ ಆಡುತ್ತಿದ್ದೇವೆ’ ಎಂಬುದು ವಾಲಿಬಾಲ್ ಆಟಗಾರರ ಮಾತಾಗಿದೆ.

ಶಾಲೆಯ ಸುತ್ತಲೂ ವಿದ್ಯುತ್ ದೀಪಗಳನ್ನು ಅಳವಡಿಸಿ ರಾತ್ರಿ ಸಮಯದಲ್ಲಿ ಪೊಲೀಸರು ಗಸ್ತು ಓಡಾಡಲಿ ಪರೀಕ್ಷೆ ಮುಗಿಯುವವರೆಗೆ ವಾಲಿಬಾಲ್ ಆಡದಿರಲಿ. ಎಸ್ಸೆಸ್ಸೆಲ್ಸಿ ಪರೀಕ್ಷೆ ಸಮೀಪಿಸುತ್ತಿರುವುದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶನಿವಾರ ಹಾಗೂ ಭಾನುವಾರ ತರಗತಿ ನಡೆಸುತ್ತಿದ್ದೇವೆ. ಹೀಗಾಗಿ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಸದಸ್ಯರು ಶಾಲೆಯ ಕಡೆ ಹೆಚ್ಚಿನ ಗಮನ ಹರಿಸಬೇಕು.

Font Awesome Icons

Leave a Reply

Your email address will not be published. Required fields are marked *