ಬೀದರ್ ನಗರಸಭೆಯ ಆದಾಯ ಮೂಲವೇ ತೆರಿಗೆ ಹಣ: 10 ವರ್ಷದಿಂದ ತೆರಿಗೆಯನ್ನೇ ಕಟ್ಟದ ಬ್ರಿಮ್ಸ್

ಬೀದರ್:  ಬೀದರ್ ನಗರಸಭೆಗೆ ಪದೇ ಪದೇ ಆಯುಕ್ತರ ವರ್ಗಾವಣೆ, ನಗರಸಭೆಯ ಸಿಬ್ಬಂದಿಯಿಂದ ಕರ ವಸೂಲಿ ಮಾಡಲು ಮೀನಾಮೇಷ ಇತ್ಯಾದಿಗಳಿಂದಾಗಿ ಬೀದರ್ ನಗರ ಸಭೆಗೆ ಬರಬೇಕಾದ ಆಸ್ತಿ ಕರ ಹಾಗೂ ನೀರಿನ ಕರ ವಸೂಲಿ ಮಾಡದೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸುಮ್ಮನೇ ಇದ್ದಾರೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಬಾಕಿ ಬರಬೇಕಾದ ಕರ ಹನುಮನ ಬಾಲದ ಹಾಗೆ ಬೆಳೆಯುತ್ತಲೇ ಇದೆ.

ಬೀದರ್ ವೈದ್ಯಕೀಯ ವಿಜ್ಜಾನಗಳ ಸಂಸ್ಥೆ (ಬ್ರಿಮ್ಸ್) 10 ವರ್ಷಗಳಿಂದ ನಗರ ಸಭೆಗೆ ಬರೋಬ್ಬರಿ 7.09 ಕೋಟಿ ರೂಪಾಯಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಇಷ್ಟು ದೊಡ್ಡ ಮೊತ್ತದ ಕರ ಬಾಕಿ ಇದ್ದರೂ ನಗರಸಭೆ ಮಾತ್ರ ಅದನ್ನ ವಸೂಲಿ ಮಾಡಲು ಮುಂದಾಗಿಲ್ಲ. ಹೆಸರಿಗೆ ಕರ ಕಟ್ಟಿ ಇಲ್ಲವೇ ಸೌಲಭ್ಯ ಕಟ್ ಮಾಡುತ್ತೇವೆಂದು ನೋಟಿಸ್ ಕೊಡುತ್ತಿದ್ದಾರೆಯೇ ಹೊರತು ತೆರಿಗೆ ವಸೂಲಿ ಮಾಡಲು ಮುಂದಾಗದಿರುವುದು ಇಲ್ಲಿನ ಜನರ ಆಕ್ರೋಶ ಹೆಚ್ಚಿಸುವಂತೆ ಮಾಡಿದೆ.

ಈ ಬಗ್ಗೆ ನಗರ ಸಭೆಯ ಆಯುಕ್ತರನ್ನ ಕೇಳಿದರೆ ತೆರಿಗೆ ವಸೂಲಿಗೆ ಅಂತಾ ವಿಶೇಷವಾದ ತಂಡ ರಚಿಸಿದ್ದು ಜನರಿಂದ ಹಣ ವಸೂಲಿ ಮಾಡಲಾಗುತ್ತಿದೆ. ಜೊತೆಗೆ ಜನರು ಯಾವುದಾರೂ ಕೆಲಸಕ್ಕೆ ನಗರಸಭೆಗೆ ಬಂದರೆ ನೀರಿನ ಕರ ಬಾಕಿ ಇಟ್ಟುಕೊಂಡಿದ್ದರೆ ಆ ಹಣವನ್ನ ಪಾವತಿ ಮಾಡಿದ ಮೇಲೆಯೇ ಅವರಿಗೆ ಅವರ ಕೆಲಸ ಮಾಡಿಕೊಡಲಾಗುತ್ತಿದೆ. ಇದರ ಜೊತೆಗೆ ಮನೆಗಳಿಗೆ ಅಳವಡಿಸಿರುವ ನೀರಿನ ಕನೆಕ್ಷನ್ ಕಟ್ ಮಾಡಿಯಾದರೂ ಆದಷ್ಟು ಬೇಗ ನೀರಿನ ಕರ ವಸೂಲಿ ಮಾಡುತ್ತೇವೆಂದು ಆಯುಕ್ತರು ಹೇಳುತ್ತಿದ್ದಾರೆ.

ನಗರ ಸಭೆಗೆ ತನ್ನ ಆದಾಯ ಮೂಲವೇ ತೆರಿಗೆ ಹಣ. ಆದರೆ ಅದನ್ನೇ ವಸೂಲಿ ಮಾಡದೆ ಹಾಗೇ ಬಿಟ್ಟರೇ ನಗರದ ಅಭಿವೃದ್ಧಿಯಾದರೂ ಹೇಗೆ ಮಾಡಲು ಸಾಧ್ಯ ಎಂದು ಇಲ್ಲಿನ ಜನರು ಪ್ರಶ್ನಿಸುವಂತಾಗಿದೆ. ಪ್ರತಿ ತಿಂಗಳು ಮನೆ ಮನೆಗೆ ಹೋಗಿ ಸ್ವಲ್ಪ ಸ್ವಲ್ಪವೇ ತೆರಿಗೆ ವಸೂಲಿ ಮಾಡಿದ್ದರೇ ಇಷ್ಟೊತ್ತಿಗಾಗಲೇ ತೆರಿಗೆ ಹಣ ನಗರಸಭೆಗೆ ಬರುತ್ತಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೋಟ್ಯಾಂತರ ರೂಪಾಯಿ ತೆರಿಗೆ ಹಣ ವಸೂಲಾಗದೆ ಹಾಗೆ ಉಳಿದಿದ್ದು ಆ ಹಣ ಜನರಿಂದ ಹೇಗೆ ವಸೂಲಿ ಮಾಡುತ್ತಾರೋ, ಕಾದು ನೋಡಬೇಕಿದೆ.

Font Awesome Icons

Leave a Reply

Your email address will not be published. Required fields are marked *