ಬೀದರ್: ಸಾರಾಯಿ, ಹಣ ಹಂಚಿ ಚುನಾವಣೆ ಗೆಲ್ಲುವ ಕಾಂಗ್ರೆಸ್‌- ಭಗವಂತ ಖೂಬಾ

ಭಾಲ್ಕಿ: ಕಾಂಗ್ರೆಸ್‌ನವರು ಕೆಟ್ಟ ರಾಜಕಾರಣ ಮಾಡುತ್ತಾರೆ. ಜಾತಿಗಳ ಮಧ್ಯೆ, ಕುಟುಂಬಗಳ ಮಧ್ಯೆ ಜಗಳ ಹಚ್ಚಿ, ಬಡವರಿಗೆ ಸಾರಾಯಿ, ಹಣ ಹಂಚಿ ಚುನಾವಣೆ ಗೆಲ್ಲುತ್ತಾರೆ. ಇದೇ ಚಾಳಿಯನ್ನು ಭಾಲ್ಕಿಯಲ್ಲಿಯೂ ಶಾಸಕ, ಉಸ್ತುವಾರಿ ಸಚಿವರು ಮಾಡುತ್ತಿದ್ದಾರೆ ಎಂದು ಕೇಂದ್ರದ ರಾಜ್ಯ ಸಚಿವ ಭಗವಂತ ಖೂಬಾ ಆರೋಪಿಸಿದರು.

ತಾಲ್ಲೂಕಿನ ಮದಕಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿಕಸಿತ ಭಾರತ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತ ಎಲ್ಲ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಸರ್ದಾರ್ ವಲ್ಲಭಭಾಯ್ ಪಟೇಲ್ ಪ್ರಧಾನಮಂತ್ರಿ ಆಗಬೇಕಿತ್ತು. ಆದರೆ ದುರದೃಷ್ಟವಶಾತ್ ನೆಹರೂ ಅವರು ಪ್ರಧಾನಿಯಾದರು. ಅವರು ಪ್ರಧಾನಿಯಾದ ಮೇಲೆ ದೇಶ ಅಭಿವೃದ್ಧಿ ಕಾಣಲಿಲ್ಲ. ಆದರೆ, ಕೆಲ ಕುಟುಂಬಗಳು ಮಾತ್ರ ಅಭಿವೃದ್ಧಿಯಾದವು. ಕಾಂಗ್ರೆಸ್ ಪಕ್ಷ ಕುಟುಂಬ ರಾಜಕಾರಣ ಮಾಡುತ್ತದೆ ಎಂದು ದೂರಿದರು.

ಮೋದಿ ಅವರು ದೇಶದ ಪ್ರಗತಿಗೆ, ಸುರಕ್ಷತೆಗೆ ಪ್ರಥಮ ಆದ್ಯತೆ ನೀಡುವುದರಿಂದ ನಮ್ಮ ಸೈನಿಕರ ಬಂದೂಕುಗಳು ನಿರಂತರವಾಗಿ ಕೆಲಸ ಮಾಡುತ್ತಿವೆ. ಹೀಗಾಗಿ, ದೇಶ ಭದ್ರವಾಗಿದೆ. ಜನರು ಸುರಕ್ಷಿತವಾಗಿ ಬದುಕುತ್ತಿದ್ದಾರೆ. ಪ್ರಧಾನಿ ಮೋದಿ ಅವರು ಗ್ರಾಮಗಳ ಅಭಿವೃದ್ಧಿಗೆ 15ನೇ ಹಣಕಾಸು ಯೋಜನೆಯಡಿ ನೇರವಾಗಿ ಗ್ರಾಮ ಪಂಚಾಯಿತಿಗೆ ಅನುದಾನ ನೀಡುತ್ತಿದ್ದಾರೆ ಎಂದು ನುಡಿದರು.

ಜಿಲ್ಲೆಯಲ್ಲಿ ತಾವು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು, ಬಿಜೆಪಿ ಸರ್ಕಾರದ ಕುರಿತು ವಿವರವಾಗಿ ತಿಳಿಸಿದರು. ವಿವಿಧ ಯೋಜನೆಯಡಿ ಸಾಲ ಪಡೆದ ಫಲಾನುಭವಿಗಳಿಗೆ ಬ್ಯಾಂಕ್ ಚೆಕ್, ಉಜ್ವಲ ಯೋಜನೆಯಡಿ ಗ್ಯಾಸ್ ವಿತರಣೆ, ಸುಕನ್ಯಾ ಸಮೃದ್ಧಿ ಹಾಗೂ ಇತರೆ ಯೋಜನೆಗಳಡಿ ಪಾಸ್ ಬುಕ್ ವಿತರಣೆ ಮಾಡಲಾಯಿತು.

ಮಾಜಿ ಶಾಸಕ ಪ್ರಕಾಶ ಖಂಡ್ರೆ, ರೈಲ್ವೆ ಸಲಹಾ ಸಮಿತಿ ಸದಸ್ಯ ಶಿವರಾಜ ಗಂದಗೆ, ಮುಖಂಡ ಕಿಶನರಾವ ಪಾಟೀಲ, ವೀರಣ್ಣ ಕಾರಬಾರಿ, ರವಿ ಕಣಜಿ, ಗೋವಿಂದರಾವ ಬಿರಾದರ, ಸಂಜೀವಕುಮಾರ, ಶ್ರೀಕಾರ ಬಾಬು, ರಾಮರಾವ ಪಾಲ್ಗೊಂಡಿದ್ದರು.

Font Awesome Icons

Leave a Reply

Your email address will not be published. Required fields are marked *