ಔರಾದ್: ಆರು ತಿಂಗಳು ವಿಳಂಬದ ನಂತರ ಶಿಕ್ಷಣ ಇಲಾಖೆ ಕೊನೆಗೂ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಯ 158 ಅತಿಥಿ ಶಿಕ್ಷಕರ ವೇತನ ಬಿಡುಗಡೆ ಮಾಡಿದೆ.
ಕಳೆದ ಡಿಸೆಂಬರ್ 22ರಂದು ‘ಗೌರವಧನ ಸಿಗದೆ ಅತಿಥಿ ಶಿಕ್ಷಕರು ಕಂಗಾಲು’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿದೆ. ಈ ವರದಿಯಿಂದ ಎಚ್ಚೆತ್ತುಕೊಂಡ ಶಿಕ್ಷಣ ಇಲಾಖೆ ಎಲ್ಲ ಅತಿಥಿ ಶಿಕ್ಷಕರ ಬ್ಯಾಂಕ್ ಖಾತೆ ಹಾಗೂ ಹಾಜರಾತಿ ಪಡೆದು ಅವರವರ ಖಾತೆಗೆ ಗೌರವಧನ ಜಮಾ ಮಾಡಿದೆ.
‘ನಾವು ಸಾಕಷ್ಟು ಸಲ ಕೇಳಿದರೂ ನಮಗೆ ಸ್ಪಂದನೆ ಸಿಕ್ಕಿಲ್ಲ. ಆದರೆ ಪ್ರಜಾವಾಣಿಯಲ್ಲಿ ವರದಿ ಬಂದ ನಂತರವೇ ಅಧಿಕಾರಿಗಳು ಕಾಳಜಿ ವಹಿಸಿ ವೇತನ ಬಿಡುಗಡೆ ಮಾಡಿದ್ದಾರೆ ಎಂದು ಅತಿಥಿ ಶಿಕ್ಷಕ ಸಂತೋಷ ದೇಶಮುಖ ತಿಳಿಸಿದ್ದಾರೆ.
ಜೂನ್‌ನಿಂದ ಸೆಪ್ಟೆಂಬರ್ ತನಕ ಒಟ್ಟು ನಾಲ್ಕು ತಿಂಗಳ ಗೌರವಧನ ಆಯಾ ಅತಿಥಿ ಶಿಕ್ಷಕರ ಖಾತೆಗೆ ಸೋಮವಾರ ಜಮಾ ಆಗಿದೆ. ಇನ್ನು ಮೂರು ತಿಂಗಳ ವೇತನ ಒಂದು ವಾರದಲ್ಲಿ ಆಗಲಿದೆ ಎಂದು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಧುಳಪ್ಪ ಮಳೆನೂರ ತಿಳಿಸಿದ್ದಾರೆ.