ಬೇಸಿಗೆಯಲ್ಲಿ ಕ್ರಾನಿಕ್ ಡಯರಿಯಾ ಕಾಡಬಹುದು ಹುಷಾರ್! – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಬೇಸಿಗೆಯ ದಿನಗಳಲ್ಲಿ  ಕುಡಿಯುವ ನೀರು, ತಿನ್ನುವ ಆಹಾರ ಹೀಗೆ ಎಲ್ಲದರಲ್ಲೂ ಎಚ್ಚರಿಕೆ ವಹಿಸುವುದು ಬಹಳ ಅಗತ್ಯವಿದೆ. ಕಾರಣ ಬಿಸಿಲ ಧಗೆಗೆ ಹಲವು ತೊಂದರೆಗಳು ನಮ್ಮನ್ನು ಕಾಡಬಹುದು ಅದರಲ್ಲೂ ಮಕ್ಕಳಲ್ಲಿ ಕ್ರಾನಿಕ್ ಡಯರಿಯಾ ಕಾಡುವ ಸಾಧ್ಯತೆ ಹೆಚ್ಚಾಗಿದ್ದು, ಹೆಚ್ಚಿನ ನಿಗಾವಹಿಸುವುದು ಬಹು ಮುಖ್ಯವಾಗಿದೆ.

ಕ್ರಾನಿಕ್ ಡಯರಿಯಾ  ಲಕ್ಷಣ ಏನೆಂದರೆ ಒಮ್ಮೆ ಶುರುವಾಗುವ  ಭೇದಿ ತಿಂಗಳವರೆಗೂ ಕಾಣಿಸಿಕೊಳ್ಳಬಹುದು. ಸೇವಿಸಿದ ಆಹಾರವೆಲ್ಲವೂ ಭೇದಿಯಾಗಿ ಹೊರಹೋಗಬಹುದು. ಇದಕ್ಕೆ ಸೀಲಿಯಕ್ ಕಾರಣವಂತೆ. ಸೀಲಿಯಕ್ ಕಾಯಿಲೆಯಿಂದ ಬಳಲುವವರು ಗೋಧಿ ಮತ್ತು ಇನ್ನಿತರೆ ಧವನ ಧಾನ್ಯಗಳಲ್ಲಿರುವ ಗ್ಲೊಟೆನ್ ಎಂಬ ನೈಸರ್ಗಿಕ ಪ್ರೋಟಿನ್‌ನ ಅಲರ್ಜಿ ಹೊಂದಿರುತ್ತಾರೆ. ಈ ಅಲರ್ಜಿ ಹೊಂದಿರುವ ಪರಿಣಾಮ ಕರಳುಗಳ ಒಳ ಅಂಚು ನಾಶಗೊಳ್ಳುತ್ತದೆಯಲ್ಲದೆ, ಅತಿ ಕಡಿಮೆ ಪ್ರಮಾಣದಲ್ಲಿ ಆಹಾರವು ರಕ್ತವನ್ನು ಸೇರುತ್ತದೆ.

ಹೀಗಾಗಿ ಉಳಿಯುವ ಆಹಾರವು ಮಲವಾಗಿ ಹೊರಹೋಗುತ್ತದೆ. ಈ ರೀತಿಯ ಮಲವು ಮೆದುವಾಗಿ ಪರಿವರ್ತನೆಗೊಂಡು ಮಾಮೂಲಿಗಿಂತ ಹೆಚ್ಚು ಬಾರಿ ಪದೇ ಪದೇ ಹೊರಹೋಗುತ್ತದೆ. ಇದು ಎಲ್ಲರಲ್ಲಿ ಕಾಣಿಸಿಕೊಳ್ಳುವುದಿಲ್ಲವಾದರೂ ಪ್ರತಿ ಐನೂರಕ್ಕೆ ಒಬ್ಬರು ಈ ಭೇದಿಯಿಂದ ನರಳುತ್ತಾರಂತೆ.

ಕ್ರಾನಿಕ್ ಡಯರಿಯಾ ಬರಲು ಮತ್ತೊಂದು ಕಾರಣವೂ ಇದೆಯಂತೆ ಅದೇನೆಂದರೆ, ಅಲ್ಸರೇಟಿವ್ ಕೊಲೈಟಿಸ್. ದೊಡ್ಡಕರುಳಿನಲ್ಲಿ ಅಲ್ಸರ್ ಉಂಟಾದಾಗಲೂ ಈ ರೀತಿಯಾಗಬಹುದೆಂದು ಹೇಳಲಾಗಿದೆ.

ಇನ್ನು ಕೆಲವೊಮ್ಮೆ ಭೇದಿಯೊಂದಿಗೆ ವಾಂತಿಯೂ ಆರಂಭವಾದರೆ ಶರೀರದಲ್ಲಿರುವ ನೀರೆಲ್ಲವೂ ಹೊರ ಹೋಗಿ  ಜೀವಕ್ಕೂ ಅಪಾಯವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇಂತಹ ಸಂದರ್ಭಗಳಲ್ಲಿ ದೇಹದಲ್ಲಿ ನೀರಿನಾಂಶ ಆರದಂತೆ ನೋಡಿಕೊಳ್ಳಬೇಕಾಗುತ್ತದೆ. ಹೀಗಾಗಿ ಸ್ವಲ್ಪ ಉಪ್ಪು ಬೆರೆಸಿದ ನೀರನ್ನು ಆಗಾಗ್ಗೆ ಕೊಡಬೇಕಾಗುತ್ತದೆ. ಜತೆಗೆ ತಿಳಿಮಜ್ಜಿಗೆ, ಎಳನೀರು, ಉಪ್ಪು ಬೆರೆಸಿದ ಅಕ್ಕಿಯ ಗಂಜಿ, ಅಲ್ಪ ಪ್ರಮಾಣದಲ್ಲಿ ಬೆರೆಸಿದ ಉಪ್ಪು, ಸಕ್ಕರೆಯ ನಿಂಬು ಪಾನೀಯ ಅಥವಾ ಚೆಳುವಾದ ಚಹವನ್ನು ನೀಡಬೇಕಾಗುತ್ತದೆ.

ಒಂದು ಲೀಟರ್ ನೀರಿಗೆ ಒಂದು ನಿಂಬೆಹಣ್ಣಿನ ರಸವನ್ನು ಹಿಂಡಿ ಅದಕ್ಕೆ ಸಕ್ಕರೆ ಬೆರೆಸಿ ಪಾನೀಯ ತಯಾರು  ಮಾಡಿಕೊಂಡು ಕುಡಿಸಬೇಕು. ಅಥವಾ ಅಕ್ಕಿಯನ್ನು ಚೆನ್ನಾಗಿ ಹುರಿದು ಪುಡಿಮಾಡಿ ಅದಕ್ಕೆ ಚಿಟಿಕೆ ಉಪ್ಪು ಬೆರೆಸಿ ಚೆನ್ನಾಗಿ ಕುದಿಸುವ ಮೂಲಕ ತೆಳುವಾದ ಗಂಜಿಯನ್ನು ತಯಾರು ಮಾಡಿಟ್ಟುಕೊಂಡು ಅದನ್ನು ಆಗಾಗ್ಗೆ ಕುಡಿಸುವುದರಿಂದಲೂ ನಿತ್ರಾಣರಾಗುವುದನ್ನು ತಪ್ಪಿಸಬಹುದಾಗಿದೆ.

ಮಕ್ಕಳ ತಾಯಂದಿರು ಆಹಾರ ಅಥವಾ ಪಾನೀಯ ತಯಾರಿಸುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು. ಮಗುವನ್ನು  ಎತ್ತಿಕೊಳ್ಳುವಾಗ ಕೂಡ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕೈಯ್ಯನ್ನು ಚೆನ್ನಾಗಿ ಸಾಬೂನಿನಿಂದ ತೊಳೆದಿರಬೇಕು. ಮಲ ವಿಸರ್ಜನೆ ಬಳಿಕ ಉಡುಪುಗಳನ್ನು ಬದಲಾಯಿಸುವಾಗ  ಕೈಗಳನ್ನು ಚೆನ್ನಾಗಿ ತೊಳೆಯುವುದನ್ನು ಮರೆಯಬಾರದು. ಬಿಸಿಯಾಗಿದ್ದಾಗಲೇ ಆಹಾರ ಸೇವಿಸಬೇಕು, ಮಾರುಕಟ್ಟೆಯಲ್ಲಿ ತೆರೆದಿಟ್ಟು ಮಾರುವ ಆಹಾರ ಪದಾರ್ಥಗಳನ್ನು ಸೇವಿಸಬಾರದು. ಬಯಲಿನಲ್ಲಿ ಶೌಚಮಾಡದೆ ಶೌಚಾಲಯವನ್ನು ಬಳಸಬೇಕು. ಜತೆಗೆ ಸ್ವಚ್ಛಮಾಡಬೇಕು. ಸ್ವಲ್ಪ  ಎಚ್ಚರಿಕೆ ವಹಿಸಿದರೆ ಕ್ರಾನಿಕ್ ಡಯರಿಯಾ ಬಳಲುವುದನ್ನು ತಡೆಯಬಹುದಾಗಿದೆ.

Font Awesome Icons

Leave a Reply

Your email address will not be published. Required fields are marked *