ಉಡುಪಿ: ಮೂರು ವರ್ಷಗಳ ಹಿಂದೆ ಬ್ರಹ್ಮಾವರ ಕುಮ್ರಗೋಡುವಿನ ಮಿಲನ ರೆಸಿಡೆನ್ಸಿಯಲ್ಲಿ ನಡೆದ ವಿಶಾಲ ಗಾಣಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕನೇ ಆರೋಪಿಯನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಉತ್ತರ ಪ್ರದೇಶದ ಗೋರಕ್ ಪುರದ ಧರ್ಮೇಂದ್ರ ಕುಮಾರ್ ಸುಹಾನಿ ಎಂದು ಗುರುತಿಸಲಾಗಿದೆ. ಈತ 3 ವರ್ಷಗಳಿಂದ ದುಬೈನಲ್ಲಿ ತಲೆಮರೆಸಿಕೊಂಡಿದ್ದನು. ಶುಕ್ರವಾರ ತನ್ನ ಊರಿಗೆ ಬರುತ್ತಿದ್ದಂತೆ ಲಕ್ನೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಈತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿ ಧರ್ಮೇಂದ್ರ ಕುಮಾರ್ ಸುಪಾರಿ ಕಿಲ್ಲರ್ ಸ್ವಾಮಿನಾಥನ್ ನಿಶಾದ್ ನನ್ನು ಮೃತ ವಿಶಾಲ ಅವರ ಗಂಡ ರಾಮಕೃಷ್ಣನಿಗೆ ಪರಿಚಯ ಮಾಡಿಸಿ ಕೊಲೆಗೆ ಸಹಕರಿಸಿದ್ದನು. ಆರೋಪಿಯನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.
ಪ್ರಕರಣದ ಪ್ರಮುಖ ಆರೋಪಿ ಮೃತ ವಿಶಾಲ ಗಾಣಿಗ ಅವರ ಗಂಡ ರಾಮಕೃಷ್ಣ ಹಾಗೂ ಸುಪಾರಿ ಕಿಲ್ಲರ್ ಸ್ವಾಮಿನಾಥನ್ ನಿಷಾದ್, ರೋಹಿತ್ ರಾಣಾ ಪ್ರತಾಪ್ ಎಂಬವರನ್ನು ಈಗಾಗಲೇ ಬಂಧಿಸಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ.