ಮನೆ ಮನೆಗೂ ಭಗವಾಧ್ವಜ – ಬೀದರ್‌ನ ಮಹಿಳೆಯರ ಅಳಿಲು ಸೇವೆ..!

ಬೀದರ್: ಮಂತ್ರಾಕ್ಷತೆ ಬಳಿಕ ಮನೆ ಮನೆಗೆ ಭಗವಾಧ್ವಜ ವಿತರಣೆ ಮಾಡಲಾಗುತ್ತಿದೆ. ಬೀದರ್‌ನ ರಾಮಭಕ್ತರು ಈ ಕೆಲಸ ಮಾಡುತ್ತಿದ್ದಾರೆ. ಜನವರಿ 22ರಂದು ಪ್ರತಿ ಮನೆ ಮನೆಯ ಮೇಲೂ ಭಗವಾಧ್ವಜ ಹಾರಾಡುವಂತೆ ಮಾಡುತ್ತಿದ್ದಾರೆ. ಬೀದರ್‌ನ ಈ ಮಹಿಳಾ ಭಕ್ತರು ಶ್ರೀರಾಮನಿಗಾಗಿ ಬರೋಬ್ಬರಿ ಒಂದು ಸಾವಿರ ಭಗವಾಧ್ವಜ ಹಾರಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

ಬೀದರ್ ತಾಲೂಕಿನ ಕಾಡವಾದ ಗ್ರಾಮದ ರಾಮನ ಪರಮ ಭಕ್ತೆಯರು ಅಯೋಧ್ಯೆಯಲ್ಲಿ ಪೂಜಿಸಲ್ಪಟ್ಟ ಮಂತ್ರಾಕ್ಷತೆ ವಿತರಣೆಯಿಂದ ಪ್ರೇರಣೆಗೊಂಡಿದ್ದಾರೆ. ಈ ಪ್ರೇರಣೆಯಿಂದ ಒಂದು ಸಾವಿರ ಭಗವಾ ಧ್ವಜಗಳನ್ನ ಸ್ವತಃ ತಾವೇ ಹೊಲಿದು ಹಂಚಿಕೆ ಮಾಡುತ್ತಿದ್ದಾರೆ. ಬಾಲ ರಾಮನ ಪ್ರತಿಷ್ಠಾಪನೆಯ ದಿನ ಗ್ರಾಮದ ಎಲ್ಲಾ ಮನೆಗಳ ಮೇಲೂ ಭಗವಾಧ್ವಜ ಹಾರಾಡಬೇಕೆಂದು ಪಣ ತೊಟ್ಟು ಈ ಸಾಹಸಕ್ಕೆ ಕೈ ಹಾಕಿದ್ದಾರೆ.

ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ಈಗಾಗಲೇ ಧ್ವಜದ ಬಟ್ಟೆ ವಿತರಿಸಿದ್ದಾರೆ. 500 ಧ್ವಜ ತಯಾರಿಸಿದ್ದು 1 ಸಾವಿರಕ್ಕೂ ಹೆಚ್ಚು ಭಗವಾಧ್ವಜ ತಯಾರಿಸುವ ಪಣ ತೊಟ್ಟಿದ್ದಾರೆ. ರಾಮನ ಪರಮ ಭಕ್ತೆಯರಾಗಿರುವ ಇಂದುಮತಿ ಮರಕಂದಾ, ಸವಿತಾ ನಿನ್ನಿ, ಶ್ರೀದೇವಿ ಮೀನಕೇರಿ, ಸವಿತಾ ಶೀಲವಂತ, ಪದ್ಮಾವತಿ ಕಾರ್ಕನಳ್ಳಿ, ಅಂಬಿಕಾ ಹೂಗಾರ ಎಂಬುವರು ಧ್ವಜ ತಯಾರಿಕೆಯಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಅಯೋಧ್ಯೆಯಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾಪನೆಯ ದಿನ ಬೀದರ್‌ನ ಈ ಗ್ರಾಮದ ಪ್ರತಿ ಮನೆಗಳ ಮೇಲೆ ಭಗವಾಧ್ವಜ ಹಾರಿಸುವ ಮೂಲಕ ಮಹಿಳೆಯರು ರಾಮನಿಗೆ ತಮ್ಮ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ.

Font Awesome Icons

Leave a Reply

Your email address will not be published. Required fields are marked *