ಮಾನವ ಹಕ್ಕು ಆಯೋಗದಿಂದ 1230 ಪ್ರಕರಣ ಇತ್ಯರ್ಥ

ಮೈಸೂರು: ಮಾನವ ಹಕ್ಕುಗಳ ಆಯೋಗಕ್ಕೆ ವಿವಿಧ ಸಮಸ್ಯೆಗಳ ಪರಿಹಾರ ಕೋರಿ ಸಲ್ಲಿಕೆಯಾಗಿದ್ದ ಪ್ರಕರಣಗಳ ಪೈಕಿ ಬಾಕಿ ಉಳಿದಿದ್ದ ಸುಮಾರು 6 ಸಾವಿರ ಪ್ರಕರಣಗಳಲ್ಲಿ 1230 ಪ್ರಕರಣಗಳನ್ನು ಒಂದು ತಿಂಗಳ ಅವಧಿಯಲ್ಲಿ ಇತ್ಯರ್ಥಪಡಿಸಲಾಗಿದೆ ಎಂದು ಆಯೋಗದ ಅಧ್ಯಕ್ಷ ಎಲ್.ನಾರಾಯಣಸ್ವಾಮಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೂರು ಬಂದ ತಕ್ಷಣ ಅಲ್ಲಿಯೇ ಪರಿಹರಿಸಲಾಗುತ್ತಿದೆ. ವಿಳಂಬ ಮಾಡುವ ಪ್ರಶ್ನೆಯೇ ಇಲ್ಲ. ಜಿಲ್ಲೆಯಲ್ಲಿ 300 ಪ್ರಕರಣಗಳಿದ್ದವು. ಇವುಗಳಲ್ಲಿ 200 ದೂರುಗಳನ್ನು ಇತ್ಯರ್ಥ ಮಾಡಲಾಗಿದೆ. 100 ಪ್ರಕರಣಗಳನ್ನು ಮೈಸೂರಿನಲ್ಲಿಯೇ ವಿಲೇವಾರಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಎನ್‌ಕೌಂಟರ್, ಲಾಕಪ್‌ಡೆತ್‌ನಂತಹ ಗಂಭೀರವಾದ 36 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ. ಎನ್‌ಕೌಂಟರ್ ಮಾಡಿದ ಪೊಲೀಸರ ವಿರುದ್ಧ 302 ಕೇಸ್ ದಾಖಲಿಸಲಾಗಿದೆ. ಲಾಕಪ್‌ ಡೆತ್‌ಗೆ ಸಂಬಂಧಪಟ್ಟ ಸಿಬ್ಬಂದಿ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ. ಮಾನವ ಹಕ್ಕುಗಳ ಉಲ್ಲಂಘನೆ ಸಂಬಂಧಪಟ್ಟಂತೆ 24 ಗಂಟೆಯೂ ದೂರು ನೀಡಬಹುದು. ದೂರು ಸಲ್ಲಿಕೆಗೆ ಆಪ್ ಇದೆ. ದೃಶ್ಯ ಮಾಧ್ಯಮ, ಪತ್ರಿಕೆಗಳಲ್ಲಿ ಬಂದ ವರದಿ ಆಧಾರದ ಮೇಲೆ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದರು.

ಆಯೋಗ ಮತ್ತು ಸರ್ಕಾರದ ನಡುವೆ ಸಂಬಂಧ ಇಲ್ಲ. ನಮಗೆ ಇರುವ ಪರಿಮಿತಿಯಲ್ಲಿ ಕೆಲಸ ಮಾಡಬೇಕು. ಅವಕಾಶ ಸಿಕ್ಕಾಗ ಏನು ಕೆಲಸ ಮಾಡಿದ್ದೇವೆ ಎಂಬುದು ಮುಖ್ಯ. ಅಧಿಕಾರ ವಹಿಸಿಕೊಂಡ ಒಂದೂವರೆ ತಿಂಗಳಲ್ಲಿ ತೃಪ್ತಿಯಾಗುವ ಕೆಲಸ ಮಾಡಿದ್ದೇವೆ. ಬೆಂಗಳೂರು ಕೇಂದ್ರ ಸ್ಥಾನದಲ್ಲಿ ಕುಳಿತು ದೂರುಗಳಿಗೆ ಸಂಬಂಧಪಟ್ಟಂತೆ ಮಾಹಿತಿ ಪಡೆಯೋದು, ಅಧಿಕಾರಿಗಳ ನಡುವೆ ಸಮನ್ವಯ ಸಾಧಿಸುವುದು ತಡವಾಗುತ್ತಿತ್ತು. ಹಾಗಾಗಿ ಜಿಲ್ಲಾ ಕೇಂದ್ರಗಳಲ್ಲಿ ದೂರು ವಿಲೇವಾರಿ ಮಾಡುತ್ತಿದ್ದೇವೆ. ಉತ್ತರ ಕರ್ನಾಟಕದ ಬೀದರ್, ಕಲಬುರ್ಗಿ, ಯಾದಗಿರಿ ಜಿಲ್ಲೆಗಳ ನಂತರ ಮೈಸೂರು ಭಾಗದ ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ದೂರು ವಿಲೇವಾರಿ ಮಾಡುತ್ತೇವೆ ಎಂದು ವಿವರಿಸಿದರು.

ಯಾದಗಿರಿ ಜಿಲ್ಲೆಯ ಸೈನಿಕರೊಬ್ಬರು 2001ರಲ್ಲಿ ನಿವೃತ್ತರಾದರು. 2004ರಲ್ಲಿ ಅವರು ತಮಗೆ 3 ಎಕರೆ ಜಮೀನು ಕೊಡುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆದರು. ಆಯೋಗಕ್ಕೆ ದೂರು ಬಂದ ಬಳಿಕ 2024ರ ಜ. 19ರಂದು ಪ್ರಕರಣವನ್ನು ಇತ್ಯರ್ಥಪಡಿಸಲಾಗಿದೆ. ಅಧಿಕಾರಿಗಳು ಉತ್ತಮ ಜಮೀನು ಕೊಡುವ ಪ್ರಯತ್ನದಲ್ಲಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ಆಯೋಗದ ಸದಸ್ಯರಾದ ಶ್ಯಾಮ್ ಭಟ್, ಎಸ್.ಕೆ.ವೆಂಟಗೋಡಿ ಇದ್ದರು.

Font Awesome Icons

Leave a Reply

Your email address will not be published. Required fields are marked *