ಮುಂದಿನ ತಿಂಗಳು ʼಅಪ್ಪುʼ ಹೆಸರಲ್ಲಿ ಟೆಲಿ ಇಸಿಜಿ ಹಬ್‌ಗೆ ಚಾಲನೆ

ಹುಬ್ಬಳ್ಳಿ: ಕೃತಕ ಬುದ್ಧಿಮತ್ತೆ ಹಾಗೂ ಆಧುನಿಕ ತಂತ್ರಜ್ಞಾನವನ್ನು ಜನರ ಆರೋಗ್ಯ ಸುಧಾರಣೆಗೆ ಪರಿಣಾಮಕಾರಿಯಾಗಿ ಬಳಸಿಕೊಂಡು ಮೈಸೂರು, ಹುಬ್ಬಳ್ಳಿಯಲ್ಲಿ ಟೆಲಿ ಐಸಿಯು ಆರಂಭಿಸಲಾಗಿದೆ. ಮುಂದಿನ ತಿಂಗಳು ರಾಜ್ಯಾದ್ಯಂತ ಅಪ್ಪು ಹೃದಯ ಜ್ಯೋತಿ ಯೋಜನೆಯಡಿ ಟೆಲಿ ಇಸಿಜಿ ಹಬ್‌ಗೆ ಚಾಲನೆ ನೀಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ಇಲ್ಲಿನ ಕಿಮ್ಸ್‌ ಆವರಣದಲ್ಲಿ ಶನಿವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ 10 ಬೆಡ್‌ ಐಸಿಯು ಹಬ್‌ ಉದ್ಘಾಟಿಸಿ ಮಾತನಾಡಿದರು.

ವೈದ್ಯಕೀಯ ಕ್ಷೇತ್ರದಲ್ಲಿ ಆದ ತಂತ್ರಜ್ಞಾನ ಬೆಳವಣಿಗೆ ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಸುಧಾರಣೆಗೆ ಸಹಕಾರಿಯಾಗಲಿದೆ. ಟೆಲಿ ಐಸಿಯು ಹಬ್‌ ವೈದ್ಯಕಿಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಟೆಲಿ ಐಸಿಯು ಹಬ್‌ಗೆ ರಾಜ್ಯದ 41 ಆಸ್ಪತ್ರೆಗಳನ್ನು ಜೋಡಿಸಲಾಗಿದೆ. ಮುಂಬರುವ ದಿನಗಳಲ್ಲಿ ರಾಜ್ಯದ ಎಲ್ಲ ತಾಲೂಕು, ಜಿಲ್ಲಾ ಆಸ್ಪತ್ರೆಗಳ ಜೋಡಿಸುವ ಚಿಂತನೆಯಿದೆ ಎಂದರು.

ಗ್ರಾಮ ಹಾಗೂ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಐಸಿಯು ಇದ್ದರೂ ತಜ್ಞ ವೈದ್ಯರು ಇಲ್ಲದ್ದಕ್ಕೆ ಸರಿಯಾಗಿ ಬಳಕೆ ಆಗುತ್ತಿಲ್ಲ. ಈ ಟಲಿ ಐಸಿಯು ಹಬ್‌ನಿಂದ ಅವುಗಳ ಬಳಕೆ ಮಾಡಿಕೊಳ್ಳುವುದರ ಜತೆಗೆ ತಂತ್ರಜ್ಞಾನದ ಮೂಲಕ ತಜ್ಞವೈದ್ಯರು ನೇರ ಸಂಭಾಷಣೆ ನಡೆಸಿ ಅಲ್ಲಿನ ರೋಗಿಗಳಿಗೆ ಸೂಕ್ತ ರೀತಿಯ ಚಿಕಿತ್ಸಾ ಸಲಹೆ ನೀಡಲಿದ್ದಾರೆ. ಇದರಿಂದ ದೊಡ್ಡ ದೊಡ್ಡ ಆಸ್ಪತ್ರೆಗಳ ಮೇಲಾಗುವ ಒತ್ತಡ ಕಡಿಮೆಯಾಗಲಿದೆ ಎಂದು ಹೇಳಿದರು.

ಮುಂದಿನ ತಿಂಗಳಲ್ಲಿ ಪುನೀತ್‌ ರಾಜಕುಮಾರ “ಹೃದಯ ಜ್ಯೋತಿ ಯೋಜನೆ” ಆರಂಭಿಸಲಾಗುತ್ತದೆ. ಮೊದಲ ಹಂತದಲ್ಲಿ 48 ಆಸ್ಪತ್ರೆಯಲ್ಲಿ ಜಾರಿಯಾಗಲಿದೆ. ಹೃದ್ರೋಗ ಕಂಡು ಬಂದ ತಕ್ಷಣ ಚಿಕಿತ್ಸೆ ನೀಡುವ ವ್ಯವಸ್ಥೆ ಎಲ್ಲ ತಾಲೂಕಾಸ್ಪತ್ರೆಗಳಲ್ಲಿ ಮಾಡಲಾಗುವುದು. ತಕ್ಷಣ ನೀಡುವ ಚುಚ್ಚುಮದ್ದು, ಮಾತ್ರೆಗಳನ್ನು ನೀಡಲಾಗುವುದು ಇದರಿಂದ ಹೃದ್ರೋಗದಿಂದ ಸಾವಿನ ಪ್ರಮಾಣ ಕಡಿಮೆಯಾಗಲಿದೆ ಎಂದರು. ತಕ್ಷಣವೇ ಡಯಾಲಿಸಿಸ್‌ ಸೇರಿದಂತೆ ವಿವಿಧ ಚಿಕಿತ್ಸೆಗಳಿಗೆ ವಿವಿಧ ಯೋಜನೆ ರೂಪಿಸಲಾಗುತ್ತಿದೆ ಎಂದರು.

Font Awesome Icons

Leave a Reply

Your email address will not be published. Required fields are marked *