ಮುಂದಿನ ವಾರದಿಂದ ʻಭಾರತ್‌ʼ ಬ್ರ್ಯಾಂಡ್‌ ಅಕ್ಕಿ ಮಾರಾಟ: ಕೇಂದ್ರ ಸರ್ಕಾರ 

ನವದೆಹಲಿ: ಮುಂದಿನ ವಾರದಿಂದಲೇ ʻಭಾರತ್‌ʼ ಬ್ರ್ಯಾಂಡ್‌ ಅಕ್ಕಿ  ಮಾರಾಟ ಆರಂಭಿಸುವುದಾಗಿ ಕೇಂದ್ರ ಸರ್ಕಾರ  ತಿಳಿಸಿದೆ. ನೇರವಾಗಿ ಜನಸಾಮಾನ್ಯರಿಗೆ ಪ್ರತಿ ಕೆಜಿಗೆ 29 ರೂ.ನಂತೆ ಅಕ್ಕಿ ಮಾರಾಟ ಮಾಡಲು ನಿರ್ಧರಿಸಿದೆ.

ಸಗಟು ಖರೀದಿದಾರರು ತಮ್ಮ ಬಳಿ ಹೊಂದಿರುವ ಅಕ್ಕಿ ಸಂಗ್ರಹದ ಪ್ರಮಾಣವನ್ನೂ ಬಹಿರಂಗಪಡಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.

ಈಗಾಗಲೇ ʻಭಾರತ್‌ ಬ್ರ್ಯಾಂಡ್‌ʼ ಗೋದಿ ಹಿಟ್ಟು ಮತ್ತು ಕಡಲೆ ಬೇಳೆ ಮಾರಾಟವಾಗುತ್ತಿದೆ. ಗೋದಿ ಹಿಟ್ಟು ಪ್ರತಿ ಕೆ.ಜಿಗೆ 27.50 ರೂ. ಕಡಲೆ ಬೇಳೆ ಪ್ರತಿ ಕೆ.ಜಿಗೆ 60 ರೂ.ಗಳಿಗೆ ಮಾರಾಟವಾಗುತ್ತಿದೆ. ಇದರೊಂದಿಗೆ ಅಕ್ಕಿಯೂ ಮಾರಾಟವಾಗಲಿದೆ.

ಪ್ರತಿ ಕೆಜಿ ಅಕ್ಕಿಗೆ 29 ರೂ. ನಿಗದಿಪಡಿಸಲಾಗಿದೆ. 5 ಕೆಜಿ ಮತ್ತು 10 ಕೆಜಿ ಪ್ಯಾಕೆಟ್‌ಗಳಲ್ಲಿ ದೊರೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಕೇಂದ್ರ ಆಹಾರ ಇಲಾಖೆಯ ಕಾರ್ಯದರ್ಶಿ ಸಂಜೀವ್ ಚೋಪ್ರಾ  ಮಾತನಾಡಿದ್ದು, ಕಳೆದ ಒಂದು ವರ್ಷದಲ್ಲಿ ಚಿಲ್ಲರೆ ಮತ್ತು ಸಗಟು ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ಶೇ.15ರಷ್ಟು ಹೆಚ್ಚಳವಾಗಿದೆ. ವಿವಿಧ ಮಾದರಿಯ ಅಕ್ಕಿ ರಫ್ತಿನ ಮೇಲೆ ನಿಯಂತ್ರಣ ಹೇರಿದ್ದರೂ ದರ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ಮುಂದಿನ ವಾರದಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರವೇ ಮುಕ್ತ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 29 ರೂ. ನಂತೆ ಅಕ್ಕಿ ಮಾರಾಟ ಮಾಡಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮಹಾಮಂಡಳ (NAFED), ರಾಷ್ಟ್ರೀಯ ಸಹಕಾರ ಗ್ರಾಹಕರ ಮಹಾಮಂಡಳ (NCCF) ಹಾಗೂ ಕೇಂದ್ರೀಯ ಭಂಡಾರಗಳು ಮತ್ತು ಇ-ಕಾಮರ್ಸ್‌ ವೇದಿಕೆಗಳ ಮೂಲಕ ಅಕ್ಕಿ ಮಾರಾಟಕ್ಕೆ ನಿರ್ಧರಿಸಿದೆ. ಮೊದಲ ಹಂತದಲ್ಲಿ ಚಿಲ್ಲರೆ ಮಾರುಕಟ್ಟೆಗೆ 5 ಲಕ್ಷ ಟನ್‌ಗಳಷ್ಟು ಅಕ್ಕಿಯನ್ನು ಬಿಡುಗಡೆ ಮಾಡುವುದಾಗಿ ಸಚಿವರು ತಿಳಿಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *