ಮೂರು ವರ್ಷ ಜೈಲು,20 ಸಾವಿರ ರೂಪಾಯಿ ದಂಡ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಬೀದರ್‌:   ಜಮೀನಿನ ಸರ್ವೇಗೆ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ ಬಸವಕಲ್ಯಾಣ ತಾಲ್ಲೂಕಿನ ಬೇಟಬಾಲಕುಂದಾ ಗ್ರಾಮದ ಗ್ರಾಮ ಲೆಕ್ಕಿಗ ಅಯೂಬ್‌ ಖಾನ್‌ ಅಬ್ದುಲ್‌ ಖಾನ್‌ ಎಂಬುವರಿಗೆ ಇಲ್ಲಿನ ಸ್ಥಳೀಯ ನ್ಯಾಯಾಲಯವು ಮೂರು ವರ್ಷ ಜೈಲು ಶಿಕ್ಷೆ 20 ಸಾವಿರ ರೂಪಾಯಿ ದಂಡ ವಿಧಿಸಿದೆ.

ಬೀದರ್‌ನ ಪ್ರಧಾನ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಜಯಕುಮಾರ ಎಮ್‌. ಆನಂದಶೆಟ್ಟಿ ಪ್ರಕರಣದ ವಿಚಾರಣೆ ನಡೆಸಿ, ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಅಯೂಬ್‌ ಖಾನ್‌ಗೆ ಮೂರು ವರ್ಷ ಜೈಲು, ₹20 ಸಾವಿರ ದಂಡ ವಿಧಿಸಿದ್ದಾರೆ. ದಂಡ ಭರಿಸಲು ತಪ್ಪಿದ್ದಲ್ಲಿ ಆರು ತಿಂಗಳು ಜೈಲು ಶಿಕ್ಷೆ ನೀಡಬೇಕೆಂದು ಆದೇಶದಲ್ಲಿ ತಿಳಿಸಿದ್ದಾರೆ. ಲೋಕಾಯುಕ್ತ ಪೊಲೀಸರ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೇಶವರಾವ ಶ್ರೀಮಾಳೆ ವಾದ ಮಂಡಿಸಿದರು.

ಬಸವಕಲ್ಯಾಣ ತಾಲ್ಲೂಕಿನ ಬೇಟಬಾಲಕುಂದಾ ಗ್ರಾಮದ ಸರ್ವೇ ನಂಬರ್‌ 149/ಎ/2 ನಲ್ಲಿರುವ 6 ಎಕರೆ 38 ಗುಂಟೆ ಕೃಷಿ ಜಮೀನು ಸಹೋದರನ ಹೆಸರಿಗೆ ಪೋಡಿ ಮಾಡಿಕೊಡುವುದಕ್ಕಾಗಿ ಗ್ರಾಮದ ಮೊಹಮ್ಮದ್‌ ಖಾನ್‌ ಶೇರ್‌ ಖಾನ್‌ ಅವರು ಗ್ರಾಮ ಲೆಕ್ಕಿಗ ಅಯೂಬ್‌ ಖಾನ್‌ಗೆ ಅರ್ಜಿ ಕೊಟ್ಟಿದ್ದರು.

ಇದಕ್ಕಾಗಿ 2,200 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 2011ರ ಜನವರಿ 19ರಂದು ಬಸವಕಲ್ಯಾಣ ನಗರದ ಮಳಿಗೆಯಲ್ಲಿ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದರು. ಪೊಲೀಸ್‌ ಇನ್‌ಸ್ಪೆಕ್ಟರ್‌ ಆರ್‌.ಎಸ್‌. ಜಹಾಗೀರದಾರ ಅವರು ತನಿಖೆ ನಡೆಸಿ, ಲಂಚ ನಿಷೇಧ ಕಾಯ್ದೆ ಅಡಿಯಲ್ಲಿ ಅಯೂಬ್‌ ಖಾನ್‌ ವಿರುದ್ಧ ದೋಷರೋಪಣಾ ಪತ್ರ ಸಲ್ಲಿಸಿದ್ದರು

Font Awesome Icons

Leave a Reply

Your email address will not be published. Required fields are marked *