ಮೈಸೂರಿನಲ್ಲಿ ದಿನಪೂರ್ತಿ ರಾಮೋತ್ಸವದ ಸಂಭ್ರಮ – News Kannada (ನ್ಯೂಸ್ ಕನ್ನಡ)

ಮೈಸೂರು: ಅಯೋಧ್ಯೆಯ ಶ್ರೀ ರಾಮಮಂದಿರದಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಸೋಮವಾರ  ದಿನಪೂರ್ತಿ  ಸಂಭ್ರಮ ಮನೆ ಮಾಡಿತ್ತು. ರಾಮನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಭಕ್ತರಿಗೆ ಪ್ರಸಾದ ವಿತರಿಸಿ ಐತಿಹಾಸಿಕ ದಿನವನ್ನು ಆಚರಣೆ ಮಾಡಿದರೆ ರಾತ್ರಿ ಮನೆ ಹಾಗೂ ದೇಗುಲಗಳಲ್ಲಿ ದೀಪ ಬೆಳಗಿ ಪಟಾಕಿ ಸಿಡಿಸಿ  ಸಂಭ್ರಮಿಸಲಾಯಿತು.

ಅರಮನೆಯಲ್ಲಿ ಶ್ರೀರಾಮ ಪಟ್ಟಾಭಿಷೇಕ ನಡೆದರೆ, ದೇವಾಲಯಗಳಲ್ಲಿ ಹೋಮ ಹವನಗಳು, ವಿಶೇಷ ಪೂಜೆಗಳು  ಶ್ರದ್ಧಾಭಕ್ತಿಯಿಂದ ನೆರವೇರಿದವು. ಪ್ರಮುಖ ವೃತ್ತ, ರಸ್ತೆಗಳಲ್ಲಿ ರಾಮನ ಭಾವವಿತ್ರವಿರಿಸಿ ಪೂಜೆ ಸಲ್ಲಿಸಿ ಪ್ರಸಾದ ವಿತರಣೆ ಮಾಡುವುದು ನಗರದೆಲ್ಲೆಡೆ ಸಾಮಾನ್ಯವಾಗಿತ್ತು. ದೇವಾಲಯಗಳು, ಆಟೊ ನಿಲ್ದಾಣಗಳು, ವೃತ್ತಗಳಲ್ಲಿ ಶ್ರೀರಾಮನ ಕಟೌಟ್‌ಗಳು ರಾರಾಜಿಸಿದವು. ಆಟೊಗಳು, ಬೈಕ್ ಹಾಗೂ ವಾಹನಗಳ ಮೇಲೆ ಜೈ ಶ್ರೀರಾಮ ಧ್ವಜ ಹಾರಾಡಿದವು.

ದೇವಾಲಯಗಳ ಪ್ರವೇಶ ದ್ವಾರದಲ್ಲಿ ಪುಷ್ಪರಾಮ, ಅಂಗಳದಲ್ಲಿ ರಂಗೋಲಿ ರಾಮ, ಗೋಡೆಗಳ ಮೇಲೆ ಚಿತ್ರರಾಮ  ಕಂಗೊಳಿಸಿದನು. ಮಕ್ಕಳು, ಮಹಿಳೆಯರು ರಾಮಮಂದಿರಗಳಲ್ಲಿ ರಾಮಭಜನೆ, ಸಂಗೀತ ಕಚೇರಿ ನಡೆಸಿದರು. ಪ್ರಮುಖ ದೇವಾಲಯಗಳಲ್ಲಿ ಮುಂಜಾನೆಯಿಂದಲೇ ಹಲವು ಬಗೆಯ ಧಾರ್ಮಿಕ ಕಾರ್ಯಕ್ರಮಗಳು ನಡೆದರೆ. ಮೈಸೂರಿನ ಪ್ರಮುಖ ರಸ್ತೆಗಳು, ವೃತ್ತಗಳು, ಬಡಾವಣೆಗಳು, ಹೋಟೆಲ್‌ಗಳು, ಅಂಗಡಿಗಳು, ಖಾಸಗಿ ಕಚೇರಿಗಳು ಸೇರಿದಂತೆ ಎಲ್ಲೆಲ್ಲೂ ಶ್ರೀರಾಮನನ್ನು ಶ್ರದ್ಧಾಭಕ್ತಿಯಿಂದ ಪೂಜಿಸಿ, ಆರಾಧಿಸಲಾಯಿತು.

ಕೋಟೆ ಆಂಜನೇಯ ದೇವಾಲಯದ ಎದುರು ರಾಮಮಂದಿರದ ಪ್ರತಿಕೃತಿ ನಿರ್ಮಿಸಲಾಗಿತ್ತು. ಅರಮನೆಯ ಆನೆಬಾಗಿಲಿನಲ್ಲಿ  ಸೀತಾರಾಮ ಲಕ್ಷ್ಮಣ ಪೂಜೆ ನಡೆಸಲಾಯಿತು. ರಾಮ ಪಟ್ಟಾಭಿಷೇಕದಲ್ಲಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಪಾಲ್ಗೊಂಡಿದ್ದರು. ಅರಮನೆಯ ಎದುರು ಶ್ರೀರಾಮ ಪಟ್ಟಾಭಿಷೇಕ ವೈಭವವಾಗಿ ನಡೆಯಿತು. ಬೆಳಗ್ಗೆ 6.30ರಿಂದಲೇ ಪಟ್ಟಾಭಿಷೇಕದಲ್ಲಿ ಎಲ್ಲ ದೇವಾಲಯಗಳ ಉತ್ಸವ ಮೂರ್ತಿಗಳು ಮೆರವಣಿಗೆಯಲ್ಲಿ ಪಟ್ಟಾಭಿಷೇಕಕ್ಕೆ ಕರೆತರಲಾಯಿತು.

ಪಲ್ಲಕ್ಕಿಯಲ್ಲಿ ಬಂದ ಉತ್ಸವ ಮೂರ್ತಿಗಳಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಬೆಳಗ್ಗೆಯಿಂದಲೂ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹಾಗೂ ಅರಮನೆ ಪರಿವಾರವು ನೆರೆದಿತ್ತು. ಅಂಬಾ ವಿಲಾಸ ಅರಮನೆಗೆ ಹೊಂದಿಕೊಂಡೇ ಇರುವ ಪ್ರಸನ್ನ ಕೃಷ್ಣ ದೇವಾಲಯದಲ್ಲಿನ ರಾಮದೇವರಿಗೆ ವಿಶೇಷ ಅಭಿಷೇಕ ನಡೆಯಿತು. ಸೀತಾ ರಾಮ ಲಕ್ಷ್ಮಣ ಉತ್ಸವ ಮೂರ್ತಿಗಳಿಗೆ ಅದ್ದೂರಿ ಸ್ವಾಗತ ನೀಡಲಾಯಿತು.

ದೇವಾಲಯ ಮಾದರಿಯಲ್ಲಿಯೇ ಪಲ್ಲಕ್ಕಿಯನ್ನು ಅಲಂಕೃತಗೊಳಿಸಲಾಗಿತ್ತು. ಮಂಗಳವಾದ್ಯದ ನಾದದಲೆಯಲ್ಲಿ ಬಂದ  ಮೂರ್ತಿಗಳನ್ನು ನೋಡಿದ ಭಕ್ತರು ಪುಳಕಗೊಂಡರು. ಶ್ರೀರಾಮನಿಗೆ ಜಯವಾಗಲಿ, ಕೌಸಲ್ಯಾ ಸುತನಿಗೆ ಜಯವಾಗಲಿ ಎಂಬ ಘೋಷಗಳನ್ನು ಮೊಳಗಿಸಿದರು.

ಹೋಮ- ಹವನ, ಪೂರ್ಣಾಹುತಿ ನಡೆಯಿತು. ಶ್ವೇತವರಾಹ ಸ್ವಾಮಿ, ಖಿಲ್ಲೆ ವೆಂಕಟರಮಣ ಸ್ವಾಮಿ, ಲಕ್ಷ್ಮಿರಮಣ ಸ್ವಾಮಿ, ವರಾಹ ಸ್ವಾಮಿ, ಆಂಜನೇಯ, ಗಾಯತ್ರಿ, ಭುವನೇಶ್ವರಿ ಹಾಗೂ ತ್ರಿನೇಶ್ವರ ದೇವಾಲಯದ ಎಲ್ಲ ದೇವರನ್ನು ಪಟ್ಟಾಭಿಷೇಕಕ್ಕೆ ಕರೆತರಲಾಯಿತು.

ಆಗಮಿಕ ವಿನಯ್, ರಂಗ ಭಟ್ಟ, ನಾರಾಯಣ ಭಟ್ಟ, ರಘು ಭಟ್ಟ, ಶ್ರೀಹರಿ ಸೇರಿದಂತೆ ಅರ್ಚಕರು ಧಾರ್ಮಿಕ ಕಾರ್ಯ  ನೆರವೇರಿಸಿದರು. ರಾಮಾಯಣ ಪಾರಾಯಣ ಮಾಡಿದರು. ಕೃಷ್ಣಸ್ವಾಮಿಯ ದೇವಾಲಯದಲ್ಲಿನ ರಾಮ ದೇವರಿಗೆ ಪೂಜೆ ಸಲ್ಲಿಸಿದ ನಂತರ ಉತ್ಸವ ಮೂರ್ತಿಯನ್ನು ಅರಮನೆಗೆ ಕರೆತಂದು ೧೨ ವಿಧದ ಆರಾಧನೆ, ಷೋಡಶೋಪಚಾರ, ರಾಮತಾರಕ ಹೋಮ ನಡೆಸಲಾಯಿತು.

ಪ್ರಮುಖವಾಗಿ ನಗರದ ಕೆ.ಆರ್.ವೃತ್ತ, ರೈಲ್ವೆ ನಿಲ್ದಾಣ ವೃತ್ತ, ಶಿವರಾಮ್‌ಪೇಟೆ, ದೇವರಾಜ ಅರಸು ರಸ್ತೆ, ಚಾಮರಾಜ ಜೋಡಿ  ರಸ್ತೆ, ಅಗ್ರಹಾರ ವೃತ್ತ, ಬಲ್ಲಾಳ್ ವೃತ್ತ, ವಿವಿ ಪುರಂ, ಒಂಟಿಕೊಪ್ಪಲು, ಚಾಮುಂಡಿಪುರಂ, ವಿದ್ಯಾರಣ್ಯಪುರಂ, ಕೆ.ಜಿ. ಕೊಪ್ಪಲು, ಕುವೆಂಪುನಗರ, ಶಾರದಾದೇವಿನಗರ ಸೇರಿದಂತೆ ಹಲವು ಕಡೆಗಳಲ್ಲಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ, ಪಾನಕ, ಕೋಸಂಬರಿ, ಮಜ್ಜಿಗೆ, ಲಡ್ಡು ಪ್ರಸಾದ ವಿನಿಯೋಗ ಮಾಡಲಾಯಿತು.

Font Awesome Icons

Leave a Reply

Your email address will not be published. Required fields are marked *