ಮೈಸೂರು: ಇಲ್ಲಿನ ಕಾರಾಗೃಹದಲ್ಲಿ ಎಷ್ಟೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರೂ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕುವುದು ಕಷ್ಟವಾಗಿ ಪರಿಣಮಿಸಿದೆ. ಪೊಲೀಸರು ಆಗಾಗ್ಗೆ ದಾಳಿ ನಡೆಸಿ ತಪಾಸಣೆ ನಡೆಸುತ್ತಿದ್ದು, ಪ್ರತಿ ಬಾರಿಯೂ ಒಂದಲ್ಲ ಒಂದು ವಸ್ತುಗಳು ಸಿಗುತ್ತಲೇ ಇರುತ್ತವೆ.
ಖೈದಿಗಳು ಹೇಗಾದರೂ ಮಾಡಿ ವಸ್ತುಗಳನ್ನು ಒಳಕ್ಕೆ ಕೊಂಡೊಯ್ದು ಬಿಡುತ್ತಾರೆ. ಈ ಬಾರಿ ವಿಚಾರಣಾಧೀನ ಖೈದಿ ಚಪ್ಪಲಿಯಲ್ಲಿ ಒಂದು ಸಿಮ್ ಕಾರ್ಡ್ ಹಾಗೂ ಮೆಮೋರಿ ಕಾರ್ಡ್ ಪತ್ತೆಯಾಗಿರುವುದು ಅಚ್ಚರಿ ಮೂಡಿಸಿದೆ.
ವಿಚಾರಣಾಧೀನ ಖೈದಿ ಕಿರಣ್ ಎಂಬಾತನನ್ನು ಮೈಸೂರಿನ ಕೇಂದ್ರ ಕಾರಾಗೃಹಕ್ಕೆ ದಾಖಲಿಸಲು ಕರೆತಂದ ವೇಳೆ ಆತನ ಚಪ್ಪಲಿಯಲ್ಲಿ ಒಂದು ಸಿಮ್ ಕಾರ್ಡ್, ಮೆಮೋರಿ ಕಾರ್ಡ್ ಮತ್ತು ಪ್ಯಾಂಟ್ ಒಳ ಜೇಬಿನಲ್ಲಿ ಒಂದು ಸಿಮ್ ಕಾರ್ಡ್ ಪತ್ತೆಯಾಗಿದೆ. ಈತ ದರೋಡೆ ಪ್ರಕರಣವೊಂದರಲ್ಲಿ ಸಿಕ್ಕಿಬಿದ್ದಿದ್ದು, ಹೀಗಾಗಿ ಆತನನ್ನು ಕೇಂದ್ರ ಕಾರಾಗೃಹಕ್ಕೆ ದಾಖಲಿಸುವ ವೇಳೆ ಮುಖ್ಯ ಗೇಟ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ತಪಾಸಣೆಗೆ ಒಳಪಡಿಸಿದಾಗ ಸಿಮ್ ಮತ್ತು ಮೆಮೋರಿಕಾರ್ಡ್ ಪತ್ತೆಯಾಗಿದೆ.
ತಪಾಸಣೆ ವೇಳೆ ತಾನು ಧರಿಸಿದ್ದ ಚಪ್ಪಲಿಯ ಹೊಲಿಗೆಯನ್ನು ಬಿಡಿಸಿ ಸಿಮ್ ಕಾರ್ಡ್ ಹಾಗೂ ಮೆಮೋರಿ ಕಾರ್ಡ್ ಇಟ್ಟು ನಂತರ ಹೊಲಿಗೆ ಹಾಕಿಕೊಂಡು ಕಾರಾಗೃಹ ಪ್ರವೇಶಿಸುವ ಪ್ರಯತ್ನ ಮಾಡಿದ್ದನು. ಇನ್ನು ಲಷ್ಕರ್ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ದ ದರೋಡೆ ಪ್ರಕರಣ ಆರೋಪವಿತ್ತು ಈ ಸಂಬಂಧ ಬಂಧಿಸಿದ್ದ ಲಷ್ಕರ್ ಠಾಣಾ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಲಾಗಿತ್ತು.
ಆರೋಪಿಯನ್ನ ಕಾರಾಗೃಹಕ್ಕೆ ದಾಖಲಿಸಲು ಲಷ್ಕರ್ ಠಾಣೆ ಸಿಬ್ಬಂದಿ ಚಿನ್ನಪ್ಪ ಕಲ್ಲೊಳ್ಳಿ ಹಾಗೂ ಮಂಜುನಾಥ್ ಕರೆತಂದಿದ್ದರು. ಎಂಟ್ರಿ ಕೊಡುವಾಗ ನಿಯಮಾನುಸಾರ ತಪಾಸಣೆ ನಡೆಸುವ ವೇಳೆ ಕಿರಣ್ ಸಿಮ್ ಕಾರ್ಡ್ ಹಾಗೂ ಮೆಮೋರಿ ಕಾರ್ಡ್ ಚಪ್ಪಲಿಯಲ್ಲಿ ಮರೆಮಾಚಿ ತಂದಿರುವುದು ಬೆಳಕಿಗೆ ಬಂದಿದೆ. ಎರಡು ಸಿಮ್ ಕಾರ್ಡ್ ಹಾಗೂ ಒಂದು ಮೆಮೋರಿ ಕಾರ್ಡ್ ವಶಪಡಿಸಿಕೊಂಡ ಕಾರಾಗೃಹ ಪೊಲೀಸರು ಈ ಸಂಬಂಧ ಕಿರಣ್ ವಿರುದ್ದ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಮುಂದಿನ ತನಿಖೆ ನಡೆಸಲಾಗುತ್ತಿದೆ.