ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಾಜ್ಯಪಾಲ ಆನಂದಿಬೆನ್ ಪಟೇಲ್ ಅವರನ್ನು ಶನಿವಾರ ಸೂಪರ್‌ಸ್ಟಾರ್ ರಜನಿಕಾಂತ್ ಭೇಟಿಯಾದರು. ಇಂದು ಅವರು (ಭಾನುವಾರ) ಅಯೋಧ್ಯೆಗೆ ಭೇಟಿ ನೀಡಿ ರಾಮ್ ಲಲ್ಲಾಗೆ ನಮನ ಸಲ್ಲಿಸಲಿದ್ದಾರೆ.
ಶನಿವಾರ ಸಂಜೆ ಮುಖ್ಯಮಂತ್ರಿಗಳ ನಿವಾಸದಲ್ಲಿ ನಡೆದ ಸಭೆಯಲ್ಲಿ ರಜನಿಕಾಂತ್ ಅವರು ಯೋಗಿ ಆದಿತ್ಯನಾಥ್ ಅವರ ಪಾದ ಮುಟ್ಟಿ ಆಶೀರ್ವಾದ ಪಡೆದರು. ನಂತರ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಮತ್ತು ಇತರ ಗಣ್ಯರೊಂದಿಗೆ ಲಕ್ನೋದ ಥಿಯೇಟರ್‌ವೊಂದರಲ್ಲಿ ಜೈಲರ್ ಚಿತ್ರದ ವಿಶೇಷ ಪ್ರದರ್ಶನದಲ್ಲಿ ಪಾಲ್ಗೊಂಡರು.
ಸ್ವಲ್ಪ ಸಮಯ ಚಲನಚಿತ್ರವನ್ನು ವೀಕ್ಷಿಸಿದ ನಂತರ, ಮೌರ್ಯ ನಂತರ ಅಲ್ಲಿಂದ ತೆರಳಿದರು. ನಾನು ಸ್ವಲ್ಪ ಹೊತ್ತು, ಚಿತ್ರ ವೀಕ್ಷಿಸಿದೆ. ಬೇರೆ ಕಾರ್ಯಕ್ರಮಗಳಿಗೆ ಹಾಜರಾಗಬೇಕಾದ ಅನಿವಾರ್ಯತೆ ಇದ್ದ ಕಾರಣ ಪೂರ್ಣ ಚಲನತ್ರವನ್ನು ವೀಕ್ಷಿಸಲು ಸಾಧ್ಯವಾಗಿಲ್ಲ ಎಂದರು. ರಜನಿಕಾಂತ್ ತಮ್ಮ ಚಿತ್ರ ಜೈಲರ್ ಪ್ರಚಾರ ನಿಮಿತ್ತ ಲಕ್ನೋಗೆ ಭೇಟಿ ನೀಡಿದ್ದಾರೆ. ಚಿತ್ರ ಉತ್ತಮ ಕಲೆಕ್ಷನ್ ಮಾಡಿದ ಬಗ್ಗೆ ಪ್ರತಿಕ್ರಿಯೆ ನೀಡಿದ ರಜನಿ “ಸಬ್ ಭಗವಾನ್ ಕಿ ದುವಾ ಹೈ…” (ಇದಕ್ಕೆಲ್ಲ ದೇವರ ದಯೆ ಕಾರಣ) ಎಂದು ಹೇಳಿದರು.
ಮೊನ್ನೆಯಷ್ಟೇ ನಟ ಉತ್ತರಾಖಂಡದ ಬದರಿನಾಥ ದೇವಸ್ಥಾನಕ್ಕೆ ಹೋಗಿದ್ದರು. ಶುಕ್ರವಾರ ಜಾರ್ಖಂಡ್‌ನ ಪ್ರಸಿದ್ಧ ಚಿನ್ನಮಸ್ತ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. ಅಲ್ಲದೆ ರಾಂಚಿಯ ‘ಯಾಗೋದ ಆಶ್ರಮ’ದಲ್ಲಿ ಅವರು ಒಂದು ಗಂಟೆಗಳ ಕಾಲ ಧ್ಯಾನಸ್ಥರಾಗಿದ್ದರು.