ಚೆನ್ನೈ: ‘ಯಾವುದೇ ವಯಸ್ಸಿನವರಾಗಿರಲಿ, ಸನ್ಯಾಸಿ ಅಥವಾ ಯೋಗಿಯ ಕಾಲಿಗೆ ಬೀಳುವುದು ನನ್ನ ಅಭ್ಯಾಸ’ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಸೋಮವಾರ ಹೇಳಿದ್ದಾರೆ. ಇತ್ತೀಚೆಗೆ ಲಕ್ನೋಗೆ ಭೇಟಿ ನೀಡಿದ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪಾದಗಳನ್ನು ಮುಟ್ಟಿದ ವಿವಾದದ ಬಗ್ಗೆ ವರದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ನಟ ಈ ರೀತಿ ಹೇಳಿಕೆ ನೀಡಿದ್ದಾರೆ.
‘ಸನ್ಯಾಸಿಯಾಗಿರಲಿ ಅಥವಾ ಯೋಗಿಯಾಗಿರಲಿ, ಅವರು ನನಗಿಂತ ಚಿಕ್ಕವರಾಗಿದ್ದರೂ ಅವರ ಕಾಲಿಗೆ ಬೀಳುವುದು ನನ್ನ ಅಭ್ಯಾಸ. ಅದನ್ನೇ ನಾನು ಮಾಡಿದ್ದೇನೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಹಿರಿಯ ನಟನ ಈ ನಡೆ ನೆಟ್ಟಿಗರನ್ನು ಕೆರಳಿಸಿತ್ತು. ವಿಶೇಷವಾಗಿ ತಮಿಳುನಾಡಿನಲ್ಲಿ, 72 ವರ್ಷದ ನಟ ತನಗಿಂತ ಕಿರಿಯ ಯುಪಿ ಮುಖ್ಯಮಂತ್ರಿಯ ಪಾದಗಳನ್ನು ಮುಟ್ಟುವುದು ಸರಿಯೇ ಎಂದು ಅನೇಕರು ಕೇಳಿದ್ದರು. ಇದಕ್ಕೆ ಅವರು ತಾವು ಯೋಗಿಗಳ ಕಾಲು ಹಿಡಿಯುವುದು ಸಾಮಾನ್ಯ ಎಂದು ಹೇಳಿದ್ದಾರೆ.
ತಮ್ಮ ಇತ್ತೀಚಿನ ಚಿತ್ರ ‘ಜೈಲರ್’ ಅನ್ನು ಭರ್ಜರಿಯಾಗಿ ಗೆಲ್ಲಿಸಿದ್ದಕ್ಕಾಗಿ ರಜನೀಕಾಂತ್ ಜನರಿಗೆ ಧನ್ಯವಾದ ಅರ್ಪಿಸಿದ್ದಾರೆ.