ರಜಾ ದಿನಗಳಲ್ಲೂ ಬಿಸಿಯೂಟಕ್ಕೆ ಸೂಚನೆ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಬೀದರ್‌:   ‘ಅಕ್ಷರ ದಾಸೋಹ ಯೋಜನೆಯ ಅಡಿಯಲ್ಲಿ ಜಿಲ್ಲೆಯ ಬರಪೀಡಿತ ತಾಲ್ಲೂಕುಗಳ ವ್ಯಾಪ್ತಿಯ ಶಾಲೆಗಳಲ್ಲಿ ಏ. 11ರಿಂದ ಮೇ 28ರ ವರೆಗೆ ಭಾನುವಾರ ಹೊರತುಪಡಿಸಿ ಎಲ್ಲ ದಿನಗಳಲ್ಲಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲು ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್‌ ಬದೋಲೆ ಅವರು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.

ಒಂದರಿಂದ ಹತ್ತನೇ ತರಗತಿಯ ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲು ಸಿದ್ಧತೆ ಮಾಡಿಕೊಳ್ಳಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಒಳಗೊಂಡಂತೆ ಎಲ್ಲ ಮಕ್ಕಳಿಗೆ ಮಧ್ಯಾಹ್ನ 12ರಿಂದ 2 ಗಂಟೆಯ ಅವಧಿಯಲ್ಲಿ ಊಟ ನೀಡಬೇಕು ಎಂದು ಸೋಮವಾರ ನಿರ್ದೇಶನ ನೀಡಿದ್ದಾರೆ.

ಏ. 11ರಿಂದ ಎಲ್ಲ ಶಾಲೆಗಳಲ್ಲಿ ರಜೆ ಬಿಸಿಯೂಟ ಆರಂಭಿಸಬೇಕು. ಗ್ರಾಮದ ಕೇಂದ್ರ ಸ್ಥಾನದಲ್ಲಿ ಒಂದಕ್ಕಿಂತ ಹೆಚ್ಚು ಶಾಲೆಗಳಿದ್ದಲ್ಲಿ ಹೆಚ್ಚು ಮಕ್ಕಳಿರುವ ಶಾಲೆಯನ್ನು ಆಯ್ಕೆ ಮಾಡಬೇಕು. ಆಯ್ಕೆ ಮಾಡಿರುವ ಶಾಲೆಯಲ್ಲಿ ಹೆಚ್ಚುವರಿ ಶಾಲೆ ಇರುವ ಮಕ್ಕಳು ಸಹ ಬಂದು ಊಟ ಮಾಡಬಹುದು. 250ಕ್ಕಿಂತ ಹೆಚ್ಚು ಮಕ್ಕಳಿದ್ದಲ್ಲಿ ನಿರ್ವಹಣೆಗೆ ಹೆಚ್ಚುವರಿ ಶಿಕ್ಷಕರನ್ನು ಕಾರ್ಯಕ್ರಮದ ನೋಡಲ್ ಅಧಿಕಾರಿಯಾಗಿ ನೇಮಿಸಬೇಕು ಎಂದು ಸೂಚನೆ ಕೊಟ್ಟಿದ್ದಾರೆ.

ಬಿಸಿಯೂಟ ನಿರ್ವಹಣೆ ಹಾಗೂ ವಿತರಣೆ ನೋಡಿಕೊಳ್ಳುವ ಜವಾಬ್ದಾರಿ ಆಯಾ ಶಾಲೆಯ ಮುಖ್ಯ ಶಿಕ್ಷಕರ ಮೇಲಿದೆ. ಅಗತ್ಯವಿದ್ದಲ್ಲಿ ನೋಡಲ್ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು. ಮಕ್ಕಳ ಸಂಖ್ಯೆ ಹೆಚ್ಚಿದ್ದಲ್ಲಿ ಪಕ್ಕದ ಶಾಲೆಯಲ್ಲಿನ ಅಡುಗೆ ಸಿಬ್ಬಂದಿಯನ್ನು ಬಳಸಿಕೊಳ್ಳಬಹುದು. ಪೋಷಕರು ಮಕ್ಕಳನ್ನು ಬಿಸಿಯೂಟಕ್ಕೆ ಕಳುಹಿಸುತ್ತಾರೆ ಎಂದು ಅವರಿಂದ ಒಪ್ಪಿಗೆ ಪತ್ರ ಪಡೆಯಬೇಕು. ರಜೆಯಲ್ಲಿ ಬಂದು ಊಟ ಮಾಡುವ ವಿದ್ಯಾರ್ಥಿಗಳ ವಿವರವನ್ನು ಸಂಗ್ರಹಿಸಬೇಕು. ಅದರಂತೆ ಮಕ್ಕಳಿಗೆ ಈ ಹಿಂದಿನ ಮೆನುವಿನಂತೆ ಊಟ ತಯಾರಿಸಿ ರಜಾ ದಿನ ಭಾನುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಮಧ್ಯಾಹ್ನದ ಬಿಸಿಯೂಟ ವಿತರಿಸಲು ತಿಳಿಸಿದ್ದಾರೆ.

ಮಧ್ಯಾಹ್ನದ ಬಿಸಿಯೂಟಕ್ಕೆ ಗುರುತಿಸಲಾದ ಕೇಂದ್ರ ಶಾಲೆಗಳ ಸಂಖ್ಯೆ 1,143 ಇದೆ. ಟ್ಯಾಗ್‌ ಮಾಡಲಾದ ಶಾಲೆಗಳು 561 ಇವೆ. ಕೇಂದ್ರ ಶಾಲೆಗಳಿಗೆ ಈಗಾಗಲೇ ಒಪ್ಪಿಗೆ ಸೂಚಿಸಲಾಗಿದೆ. ಒಟ್ಟು 1,06,432 ಮಕ್ಕಳಿದ್ದಾರೆ. 1,317 ಮುಖ್ಯಶಿಕ್ಷಕರು ಮತ್ತು ನೋಡಲ್‌ ಶಿಕ್ಷಕರಿದ್ದಾರೆ. 2,338 ಅಡುಗೆ ಸಿಬ್ಬಂದಿ ಇದ್ದಾರೆ. ಕೇಂದ್ರ ಶಾಲೆಯ ಮುಖ್ಯ ಶಿಕ್ಷಕರು ಎಸ್.ಎ.ಟಿ.ಎಸ್ ಮತ್ತು ಎ.ಎಂ.ಎಸ್ ತಂತ್ರಾಂಶದಲ್ಲಿ ಕಡ್ಡಾಯವಾಗಿ ವಿವರ ನಮೂದಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.

Font Awesome Icons

Leave a Reply

Your email address will not be published. Required fields are marked *