ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾಗಳ ಜೊತೆಗೆ ರಾಜಕೀಯದಲ್ಲೂ ಬ್ಯುಸಿ ಆಗಿದ್ದಾರೆ. ಆಗಾಗ ಫೇಸ್ಬುಕ್ ಲೈವ್ಗಳಲ್ಲಿ ಕಾಣಿಸಿಕೊಳ್ಳುವ ಉಪೇಂದ್ರ, ಇತ್ತೀಚಿಗೆ ಲೈವ್ನಲ್ಲಿ ಆಕ್ಷೇಪಾರ್ಹ ಪದ ಬಳಸಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇದೀಗ ಉಪೇಂದ್ರ ವಿರುದ್ಧ ರೊಚ್ಚಿಗೆದ್ದ ಜನ, ನಟನ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡ್ತಿದ್ದಾರೆ. ಜೊತೆಗೆ ನಟ, ನಿರ್ದೇಶಕ ಉಪೇಂದ್ರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿದೆ.
ಫೇಸ್ಬುಕ್ ಲೈವ್ನಲ್ಲಿ ಅನೇಕ ವಿಚಾರಗಳ ಬಗ್ಗೆ ಮಾತಾಡಿದ ಉಪೇಂದ್ರ, ಗಾದೆ ಮಾತೊಂದನ್ನು ಹೇಳಿದ್ರು. ಇದೀಗ ಈ ಮಾತು ಒಂದು ಸಮುದಾಯದವರನ್ನು ಬಡಿದೆಬ್ಬಿಸಿದೆ. ಇದೇ ವಿಚಾರಕ್ಕೆ ನಟ ಉಪೇಂದ್ರ ವಿರುದ್ಧ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಧುಸೂದನ್ ಎಂಬುವರು ದೂರು ನೀಡಿದ್ದಾರೆ.
ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ನೇರ ಪ್ರಸಾರದಲ್ಲಿ ಬಾಯಿ ತಪ್ಪಿ ಒಂದು ಗಾದೆ ಮಾತನ್ನು ಬಳಸಿದ್ದು. . ಅದರಿಂದ ಹಲವರ ಭಾವನೆಗಳಿಗೆ ಧಕ್ಕೆ ಉಂಟಾಗಿರುವುದು ಕಂಡು ಬಂದ ತಕ್ಷಣವೇ ಆ ಲೈವ್ ವಿಡಿಯೋ ವನ್ನು ನನ್ನ ಸಾಮಾಜಿಕ ಜಾಲತಾಣಗಳಿಂದ ಡಿಲೀಟ್ ಮಾಡಿರುತ್ತೇನೆ.. ಮತ್ತು ಈ ಮಾತಿಗೆ ಕ್ಷಮೆಯಿರಲಿ.. ಎಂದು ಉಪೇಂದ್ರ ಬರೆದಿದ್ದಾರೆ.
ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ನೇರ ಪ್ರಸಾರದಲ್ಲಿ ನಟ ಉಪೇಂದ್ರ, ಕಳೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳು ರಾಷ್ಟ್ರೀಯ ಪಕ್ಷಗಳನ್ನು ಹೊರತುಪಡಿಸಿ ತಮ್ಮದೇ ವಾರಗೆಯ ಇತರೆ ಕೆಲವು ರಾಜಕೀಯ ಪಕ್ಷಗಳಿಗಿಂತಲೂ ಹೆಚ್ಚು ಮತಗಳನ್ನು ಯಾವುದೇ ಪ್ರಚಾರವಿಲ್ಲದೆ ಪಡೆದಿದ್ದಾರೆ ಎಂದು ಹೆಮ್ಮೆಯಿಂದ ಹೇಳಿದರು. ಬಳಿಕ ಮಾತು ಮುಂದುವರೆಸಿ ಯಾವುದೋ ಮಾತಿಗೆ ‘ಊರೆಂದರೆ ಹೊಲೆಗೇರಿ ಇದ್ದೇ ಇರುತ್ತದೆ’ ಎಂದು ಹೊಲೆಗೇರಿಯನ್ನು ತುಚ್ಛವಾಗಿ ಕಾಣುವ ಗಾದೆಯೊಂದನ್ನು ಹೇಳಿದ್ದರು. ಉಪೇಂದ್ರರ ಈ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಉಪೇಂದ್ರ ವಿರುದ್ಧ ಪ್ರತಿಭಟನೆಗಳು ಶುರುವಾಗಿದೆ. ರಾಮನಗರಲ್ಲಿ ಉಪೇಂದ್ರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಹಾರೋಹಳ್ಳಿ ವೃತ್ತದಲ್ಲಿ ದಲಿತ ಪರ ಸಂಘಟನೆಗಳ ಮುಖಂಡರು ಉಪೇಂದ್ರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದ್ದಾರೆ. ಉಪೇಂದ್ರ ಹೇಳಿಕೆ ಖಂಡಿಸಿ ಸಮತಾ ಸೈನಿಕ ದಳ ಮತ್ತು ದಲಿತ ಪರ ಒಕ್ಕೂಟಗಳು ಆಕ್ರೋಶ ಹೊರಹಾಕಿದೆ.
https://www.facebook.com/nimmaupendra/posts/847872040038159?ref=embed_post