ಲಿಮ್ಕಾ ದಾಖಲೆ ಮಾಡಿದ ಸಭಾಪತಿ ಬಸವರಾಜ ಹೊರಟ್ಟಿ

ಬೆಂಗಳೂರು: ಕಳೆದ ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲ ಕರ್ನಾಟಕದ ಸಾರ್ವಜನಿಕ ಹಾಗೂ ಶೈಕ್ಷಣಿಕ ವಲಯದಲ್ಲಿ ಅಪ್ರತಿಮ ಸಾಧನೆಗೈದ ಏಕೈಕ ಕನ್ನಡಿಗ ಹಾಗೂ ಒಂದೇ ಕ್ಷೇತ್ರದಿಂದ ಸತತ ಎಂಟು ಬಾರಿ ಆಯ್ಕೆಯಾಗಿ ವಿಶ್ವ ದಾಖಲೆ ನಿರ್ಮಿಸಿ ಕಳೆದ 43 ವರ್ಷಗಳಿಂದ ವಿಧಾನ ಪರಿಷತ್ತಿನಲ್ಲಿ ಶಿಕ್ಷಕರ ಹಿತ ಕಾಯುವಲ್ಲಿ ಶ್ರಮಿಸುತ್ತಿರುವ ಸಭಾಪತಿ ಬಸವರಾಜ ಹೊರಟ್ಟಿ ಅವರ ಮುಡಿಗೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸಂದಿದೆ.

1990ರಲ್ಲಿ ಆರಂಭಗೊಂಡ ಲಿಮ್ಕಾ ಬುಕ್ ಆಫ್ ರೆಕಾಡ್ರ್ಸ್ ಸಂಸ್ಥೆ ಭಾರತೀಯರ ವಿಶ್ವ ದಾಖಲೆಗಳನ್ನು ದಾಖಲಿಸುವ ಸಂಸ್ಥೆಯಾಗಿದೆ. ಭಾರತದಲ್ಲಿ ಪ್ರಕಟವಾದ 2024ನೇ ಸಾಲಿನ ವಾರ್ಷಿಕ ಪುಸ್ತಕದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರ ಐತಿಹಾಸಿಕ ದಾಖಲೆಗಳನ್ನು ದಾಖಲಿಸಿ ಪ್ರಕಟಿಸಲಾಗಿದೆ.

ಈ ಬಾರಿಯ ವಾರ್ಷಿಕ ಪುಸ್ತಕದಲ್ಲಿ ಸಿಕ್ಕಿಂ ರಾಜ್ಯದ ಮಾಜಿ ಮುಖ್ಯಮಂತ್ರಿ ಪವನ್ ಕುಮಾರ್ ಅವರು 24 ವರ್ಷ 165 ದಿನಗಳ ಕಾಲ ಮುಖ್ಯಮಂತ್ರಿಯಾಗಿ ಸಲ್ಲಿಸಿದ ಸೇವಾ ಅವಧಿ ದಿನಗಳನ್ನು ದಾಖಲಿಸಲಾಗಿದೆ. ಜೊತೆಗೆ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಜ್ಯೋತಿ ಬಸು ಅವರ 23 ವರ್ಷ 137 ದಿನಗಳ ಕಾಲ ಮುಖ್ಯಮಂತ್ರಿ ಅವಧಿಯನ್ನು ದಾಖಲಿಸಲಾಗಿದೆ.

ಸಭಾಪತಿ ಬಸವರಾಜ ಹೊರಟ್ಟಿ ಅವರು 1980 ರಿಂದ ಸ್ಪರ್ಧಿಸಿದ ಎಲ್ಲ ಚುನಾವಣೆಗಳಲ್ಲಿ ಜಯಗಳಿಸಿದ ಅಂಕಿ ಸಂಖ್ಯೆಗಳು ಹಾಗೂ ಇನ್ನಿತರ ಮಾಹಿತಿಯನ್ನು ನೋಡುವುದಾದರೆ, ಬಸವರಾಜ ಹೊರಟ್ಟಿಯವರು ಇಲ್ಲಿಯವರೆಗೆ ಎಂಟು ಬಾರಿ ಗೆಲುವನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಐತಿಹಾಸಿಕ ದಾಖಲೆಗೆ ಪಾತ್ರರಾಗಿದ್ದಾರೆ.

ಅವರು ವಿಧಾನ ಪರಿಷತ್ ಪ್ರವೇಶಿಸಿ ಇಂದಿಗೆ 43 ವರ್ಷ 201 ದಿನಗಳಾದವು. ಭಾರತ ದೇಶದ ಇತಿಹಾಸದಲ್ಲಿಯೇ ಐತಿಹಾಸಿಕ ದಾಖಲೆ. ಇಂತಹದೊಂದು ಸುದೀರ್ಘ ಚುನಾವಣಾ ಅವಧಿಯ ರಾಜಕಾರಣವನ್ನು ಮತ್ತೊಬ್ಬರು ದೇಶದ ಇತಿಹಾಸದಲ್ಲಿ ಮಾಡಿಲ್ಲ. ಇಂತಹ ದಾಖಲೆಯನ್ನು ಹಿಂದೆಯೂ ಯಾರು ಮಾಡಿಲ್ಲ ಬಹುಶ: ಮುಂದೆಯೂ ಯಾರು ಮಾಡಲು ಸಾಧ್ಯವಿಲ್ಲ ಎನಿಸುತ್ತದೆ.

ಈಗಾಗಲೇ ಸಭಾಪತಿ ಬಸವರಾಜ ಹೊರಟ್ಟಿ ಅವರ ಹೆಸರು ಹಲವಾರು ದಾಖಲೆಗಳಲ್ಲಿ ನಮೂದಾಗಿದ್ದು, ಪ್ರಮುಖವಾಗಿ ಈಗಾಗಲೇ ಲಂಡನ್ನಿನ ವಲ್ರ್ಡ್ ಬುಕ್ ಆಫ್ ದಾಖಲೆ ಗರಿ 2022 ರಲ್ಲಿ ದೊರಕಿದೆ. ಭಾರತದ ಚುನಾವಣಾ ಆಯೋಗದಲ್ಲಿ ಇವರ ಸುದೀರ್ಘ ಸೇವಾ ಅವಧಿಯ ದಾಖಲೆಗಳು ಅಂಕಿ ಸಂಖ್ಯಾ ಇಲಾಖೆಯಲ್ಲಿ ದಾಖಲಿಕರಣಗೊಂಡು ಗೆಜೆಟ್‍ನಲ್ಲಿ ಪ್ರಕಟವಾಗಿವೆ.

ಶಿಕ್ಷಕರೊಬ್ಬರು ಶಿಕ್ಷಕರ ಪ್ರತಿನಿಧಿಯಾಗಿ ಹಲವಾರು ಖಾತೆಗಳ ಸಚಿವರಾಗಿ ಮೂರನೇ ಬಾರಿ ಸಭಾಪತಿಗಳಾಗಿ ಸೇವೆ ಸುತ್ತಿರುವುದು ಇತಿಹಾಸ. ಬಸವರಾಜ ಹೊರಟ್ಟಿ ಅವರು ನಾಡಿನ ಶಿಕ್ಷಕ ಸಮೂಹದ ಸ್ವಾಭಿಮಾನದ ಸಂಕೇತ. ಇವರ ಸಾಧನೆಯನ್ನು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಪ್ರಕಟಿಸಿದ್ದು ಅವರ ಹಲವಾರು ಹಿತೈಷಿಗಳಿಗೆ, ಅಭಿಮಾನಿಗಳಿಗೆ ಹಾಗೂ ಶಿಕ್ಷಕರ ಸಮೂಹಕ್ಕೆ ಹರ್ಷ ತಂದಿದೆ.

Font Awesome Icons

Leave a Reply

Your email address will not be published. Required fields are marked *