ವಿದ್ಯಾರ್ಥಿನಿಯರ ಅಭಿವೃದ್ಧಿಯಿಂದ ರಾಮರಾಜ್ಯ ಸ್ಥಾಪನೆ ಸಾಧ್ಯ: ಜಿಟಿಡಿ

ಮೈಸೂರು: ದೇಶ ಸಮೃದ್ಧವಾಗಿ ಬೆಳೆದು ಗಾಂಧಿ ಕಂಡ ಕನಸಿನ ರಾಮರಾಜ್ಯ ಸ್ಥಾಪನೆಯಾಗಬೇಕಾದರೆ ವಿದ್ಯಾರ್ಥಿನಿಯರು ಎಲ್ಲ ಕ್ಷೇತ್ರಗಳಲ್ಲೂ ಮುಂದೆ ಬರಬೇಕು. ಮತ್ತೊಬ್ಬರ ಆಶ್ರಯ ಇಲ್ಲದೆ ಸ್ವಾವಲಂಬಿ ಬದುಕು ಸಾಗಿಸಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಅಭಿಪ್ರಾಯಪಟ್ಟರು.

ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತರಾದ ಕಾರ್ಮಿಕರ ಅತಿ ಹೆಚ್ಚು ಅಂಕಗಳನ್ನು ಗಳಿಸಿದ 39 ವಿದ್ಯಾರ್ಥಿಗಳಿಗೆ ಲ್ಯಾಪ್‌ ಟಾಪ್ ವಿತರಿಸಿ ಮಾತನಾಡಿದ ಅವರು, ದುಡಿಯುವ ವರ್ಗಗಳಲ್ಲಿ ಶೇ.50ರಷ್ಟು ಮಹಿಳೆಯರು ಇದ್ದಾರೆ. ಜಮೀನು, ಹೈನುಗಾರಿಕೆ, ಗುಡಿ ಕೈಗಾರಿಕೆ, ಜವಳಿ, ಮನೆಯಲ್ಲಿ ಕೆಲಸ ಮಾಡುತ್ತಾರೆ. ಜಮೀನಿನಲ್ಲಿ ಪುರುಷರಷ್ಟೇ ಕಳೆ ಕೀಳುತ್ತಾರೆ. ನಾಟಿ ಹಾಕುತ್ತಾರೆ. ಈಗ ಮಹಿಳೆಯರು ಆಧುನಿಕ ಕಾಲದ ಎಲ್ಲ ಕ್ಷೇತ್ರಗಳಲ್ಲೂ  ಮುಂದೆ ಬರಬೇಕಾಗಿದೆ ಎಂದು ಸಲಹೆ ನೀಡಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಸಚಿವೆಯಾಗಿ 6 ಬಜೆಟ್ ಮಂಡಿಸಿ ದಾಖಲೆ ಬರೆದಿದ್ದಾರೆ. ಅವರು ಪಡೆದ ಶಿಕ್ಷಣ, ವಿದ್ವತ್ ದೇಶದ ಎಲ್ಲ ಹೆಣ್ಣು ಮಕ್ಕಳಿಗೆ ಮಾದರಿಯಾಗಬೇಕು. ಹಿಂದಿನ ಅವಧಿಯಲ್ಲಿ 1ಲಕ್ಷದ 9 ಸಾವಿರ ಲ್ಯಾಪ್‌ಟಾಪ್‌ಗಳನ್ನು ವಿತರಿಸಲಾಗಿತ್ತು. ಕೊರೊನಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಭಾರೀ ಅನುಕೂಲವಾಯಿತು. ಈಗ ಲ್ಯಾಪ್‌ಟಾಪ್ ಪಡೆದ ವಿದ್ಯಾರ್ಥಿನಿಯರು ತಮ್ಮ ಸಶಕ್ತವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಜತೆಯಲ್ಲಿ ಬದುಕು ಕಟ್ಟಿಕೊಳ್ಳಲು ಚಿಂತನೆ ನಡೆಸಬೇಕು. ಜತೆಗೆ ಸಾಂಸ್ಕೃತಿಕ, ಕ್ರೀಡೆ ಚಟುವಟಿಕೆಯಲ್ಲೂ ತೊಡಗಿಸಿಕೊಳ್ಳಬೇಕು. ಗೊಂದಲವಿಲ್ಲದೇ ಆಯ್ಕೆ ಮಾಡಿದ ವಿಷಯದ ಮೇಲೆ ನಿರಂತರ ಅಧ್ಯಯನ ನಡೆಸಿದರೆ ತಮ್ಮ ಗುರಿ ಮುಟ್ಟಲು ಸಾಧ್ಯವಾಗುತ್ತದೆ. ಮಹಿಳೆಯರು ಸರ್ಕಾರದ ಸವಲತ್ತುಗಳನ್ನು ಪಡೆಯಬೇಕು. ಸ್ವಯಂ ಉದ್ಯೋಗ ಸ್ಥಾಪಿಸಿ ಬೇರೆಯವರಿಗೆ ನೆರವಾಗುವ ರೀತಿಯಲ್ಲಿ ಅಭಿವೃದ್ಧಿ ಹೊರಬೇಕೆಂದು ನುಡಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ರಾಜೇಶ್ ಜಾಧವ್, ಮುಖಂಡರಾದ ಚನ್ನೇಗೌಡ, ಸತೀಶ್, ರಾಜು, ಕುಮಾರಸ್ವಾಮಿ, ಮಹದೇವು, ಶಿವಲಿಂಗ ಮುಂತಾದವರು ಇದ್ದರು.

Font Awesome Icons

Leave a Reply

Your email address will not be published. Required fields are marked *