ಶಿವಣ್ಣ ಜಾಗಕ್ಕೆ ಬಂದ ಶಾಹಿದ್ ಎಂಟ್ರಿ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಮುಂಬೈ: ‘ಅವನೇ ಶ್ರೀಮನ್ನಾರಾಯಣ’ ಸೂತ್ರಧಾರ ಸಚಿನ್ ರವಿ, ಬಾಲಿವುಡ್ ಸ್ಟಾರ್ ಶಾಹಿದ್ ಕಪೂರ್‌ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಮುಂಬೈನಲ್ಲಿ ಮಂಗಳವಾರ ನಡೆದ ಒಟಿಟಿ ಕಾರ್ಯಕ್ರಮದಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿದೆ.

ನಾಲ್ಕು ವರ್ಷಗಳ ಹಿಂದೆ “ಅಶ್ವತ್ಥಾಮ” ಸಿನಿಮಾ ಘೋಷಣೆಯಾಗಿತ್ತು. ಚಿತ್ರದ ಕಥಾನಾಯಕ ಡಾ.ಶಿವರಾಜ್ ಕುಮಾರ್ ಅವರಾದರೆ, ನಿರ್ದೇಶನದ ಜವಾಬ್ದಾರಿಯನ್ನ ವಹಿಸಿಕೊಂಡಿದ್ದವರು ಅವನೇ ಶ್ರೀಮನ್ನಾರಾಯಣ ಖ್ಯಾತಿಯ ಸಚಿನ್ ರವಿ.

ಆ ಕಾಲಕ್ಕೆ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಸಿನಿಮಾ ಇದು. ಯಾಕೆಂದರೆ ಶಿವಣ್ಣ ಅವರ ಜೊತೆ ಈ ಸಿನಿಮಾವನ್ನ ಸಚಿನ್ ರವಿ ಅನೌನ್ಸ್ ಮಾಡುವ ಮೊದಲು ಅನೂಪ್‌ ಭಂಡಾರಿ ಕೂಡ ಸುದೀಪ್ ಅವರಿಗಾಗಿ ಅಶ್ವತ್ಥಾಮ ಹೆಸರಿನ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಈ ಕಾರಣಕ್ಕೆ ಎರಡು ಅಭಿಮಾನಿ ಬಣದ ನಡುವೆ ಟ್ವೀಟ್ ವಾರ ನಡೆದಿತ್ತು. ಕಾಲಾನುಕ್ರಮೇಣ ಹಾಗೇ ತಣ್ಣಗಾಯಿತು ಕೂಡ.

ಆದರೆ ಪ್ರಸ್ತುತ ಬ್ರೇಕಿಂಗ್‌ ನ್ಯೂಸ್‌ ನೋಡುವುದಾದರೇ, ಕನ್ನಡದ ಪಾಲಾಗಬೇಕಿದ್ದ ಅಶ್ವತ್ಥಾಮ ಬಾಲಿವುಡ್ ನ ತೆಕ್ಕೆಗೆ ಬಿದ್ದಿದೆ. ಶಿವಣ್ಣ ನ ಜಾಗಕ್ಕೆ ಶಾಹಿದ್‌ ಕಪೂರ್‌ ಎಂಟ್ರೀ ಆಗಿದೆ.

ಸಚಿನ್ ರವಿ ಹಾಗೂ ಶಾಹಿದ್ ಕಪೂರ್ ಸಿನಿಮಾಗೆ ‘ಅಶ್ವತ್ಥಾಮ: ದಿ ಸಾಗಾ ಕಂಟಿನ್ಯೂಸ್’ ಎಂಬ ಟೈಟಲ್ ಇಡಲಾಗಿದೆ. ಸಚಿನ್ ರವಿ ಚಿತ್ರದ ಅಶ್ವತ್ಥಾಮನ ಪಾತ್ರಕ್ಕೆ ಶಾಹಿದ್ ಕಪೂರ್ ಹೀರೋ ಆಗುತ್ತಿದ್ದಾರೆ. ಅಶ್ವತ್ಥಾಮನಾಗಿಯೇ ಶಾಹಿದ್ ಕಪೂರ್ ಇಲ್ಲಿ ಅಬ್ಬರಿಸಲಿದ್ದಾರೆ. ಅಶ್ವತ್ಥಾಮ ಒಬ್ಬ ಗ್ರೇಟ್ ವಾರಿಯರ್ ಅನ್ನೋದು ಗೊತ್ತೇ ಇದೆ. ಆದರೆ ಏಳು ಚಿರಂಜೀವಿಗಳಲ್ಲಿ ಒಬ್ಬ ಅನ್ನೋದು ಕೂಡ ನಂಬಿಕೆ.

ಈ ಚಿತ್ರ ಅದ್ಭುತ ಆ್ಯಕ್ಷನ್ ಇರುವ, ಮತ್ತು ಎಲ್ಲಾ ತಲೆಮಾರಿನ ವೀಕ್ಷಕರನ್ನೂ ಸೆಳೆಯಬಲ್ಲ ಚಿತ್ರವಾಗಲಿದೆ. ಅಶ್ವತ್ಥಾಮನಂತೆ ಅಮರತ್ವ ಹೊಂದಿರುವ ವ್ಯಕ್ತಿಗಳನ್ನು ಚಿತ್ರದಲ್ಲಿ ತರುವ ಪ್ರಯತ್ನವೂ ಇರಲಿದೆ. ಕಾಲ್ಪನಿಕ ಸನ್ನಿವೇಶನಗಳ ಅನ್ವೇಷಣೆ ಹಾಗೂ ಅದರ ಸಾಧ್ಯತೆ ಕುರಿತು ಕಥೆ ರಚಿಸಿ, ಸಾಧ್ಯವಾಗಿಸುವುದು ಚಿತ್ರ ನಿರ್ದೇಶನಕಾಗಿ ಸವಾಲಿನ ಕೆಲಸ. ನನ್ನ ಬಾಲ್ಯದಿಂದಲೂ ಅಶ್ವತ್ಥಾಮನ ಪಾತ್ರ ನನ್ನ ಮೇಲೆ ಬಹಳಷ್ಟು ಪ್ರಭಾವ ಬೀರಿದೆ. ಈ ಪಾತ್ರದ ಬಗ್ಗೆಯೇ ಚಿತ್ರ ಮಾಡುವ ಯೋಜನೆ ಹೊಂದಿದ್ದೆ. ಕಡೆಗೂ ನನ್ನ ಕಲ್ಪನೆಯ ಚಿತ್ರ ಸೆಟ್ಟೇರುತ್ತಿದೆ ಎಂಬ ಸಂಭ್ರಮ ನನ್ನದು. ಈ ಚಿತ್ರದ ಹಲವು ಕುತೂಹಲಕರ ಅಂಶಗಳ ಕುರಿತು ಶಾಹೀದ್ ಕಪೂರ್ ಜತೆ ಬಹಳಷ್ಟು ಹೊತ್ತು ಕಳೆದಿದ್ದೇನೆ ಎಂದು ಚಿತ್ರದ ತಯಾರಿ ಕುರಿತು ತಮ್ಮ ಅನುಭವವನ್ನು ಸಚಿನ್ ರವಿ ಹಂಚಿಕೊಂಡಿದ್ದಾರೆ. ಅಲ್ಲದೇ ಅಶ್ವತ್ಥಾಮನ ಕುರಿತ ಕತೆ ಹೇಳುವ ನನ್ನ ಪ್ರಾಮಾಣಿಕ ಪ್ರಯತ್ನವನ್ನು ಮುಂದುವರಿಸಿದ್ದೇನೆ. ಉಳಿದಿದ್ದು ಆ ಶ್ರೀಕೃಷ್ಣನಿಗೆ ಬಿಡುತ್ತೇನೆ ಎಂದಿದ್ದಾರೆ

ಅಶ್ವತ್ಥಾಮ ಚಿತ್ರವನ್ನು ಪೂಜಾ ಎಂಟರ್‌ಟೈನ್‌ಮೆಂಟ್ ಕಂಪನಿ ನಿರ್ಮಾಣ ಮಾಡುತ್ತಿದೆ. ವಿಷ್ಣು ಭಗ್ನಾನಿ, ಜಾಕಿ ಭಗ್ನಾನಿ ಹಾಗೂ ದೀಪ್ತಿಕಾ ದೇಶಮುಖ್ ನಿರ್ಮಾಣ ಮಾಡುತ್ತಿದ್ದಾರೆ.

 

Font Awesome Icons

Leave a Reply

Your email address will not be published. Required fields are marked *