ಶೋಭಾ ಕರಂದ್ಲಾಜೆ ಹೇಳಿಕೆಯನ್ನು ಖಂಡಿಸಿದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್

ಬೆಂಗಳೂರು:  ‘ತಮಿಳುನಾಡಿನಿಂದ ಬಂದವರು ಕೆಫೆಯಲ್ಲಿ ಬಾಂಬ್ ಇಟ್ಟಿದ್ದಾರೆ’ ಎಂಬ ಕೇಂದ್ರ ಸಚಿವೆ ಹಾಗೂ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಲೋಕಸಭಾ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹೇಳಿಕೆಯನ್ನು ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಸಹ ಖಂಡಿಸಿದ್ದಾರೆ.

ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಎಸ್ ಟಿ ಸೋಮಶೇಖರ್ ಹಾಗೂ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಇಂದು  ಹಿರಿಯ ಬಿಜೆಪಿಯ ನಾಯಕ ಬಿಎಸ್ ಯಡಿಯೂರಪ್ಪರನ್ನು ಭೇಟಿ ಮಾಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಶೇಖರ್, ಬೆಂಗಳೂರು ಉತ್ತರ ಲೋಕಸಭಾ ವ್ಯಾಪ್ತಿಗೆ ನನ್ನ ಕ್ಷೇತ್ರ ಬರುತ್ತದೆ. ಡಿ.ಬಿ.ಚಂದ್ರೇಗೌಡ ಸಂಸದರಾಗಿದ್ದರು, ಡಿವಿ ಸದಾನಂದಗೌಡ ಅವರು 10 ವರ್ಷ ಸಂಸದರಾಗಿದ್ದರು. ಒಂದೇ ಒಂದು ಸಣ್ಣ ವ್ಯತ್ಯಾಸವೂ ಆಗಿರಲಿಲ್ಲ. ಆದ್ರೆ, ಇದೀಗ ಯಶವಂತಪುರ ಕ್ಷೇತ್ರಕ್ಕೆ ಹೋಗುವುದಕ್ಕೆ ನಾನೇ ಭಯಪಡುತ್ತಿದ್ದೇನೆ. ಯಾರು ಏನು ಮಾತನಾಡ್ತಾರೋ, ಎತ್ತಿ ಕಟ್ಟುತ್ತಾರೆಂಬ ಭಯವಿದೆ ಎಂದು ಪರೋಕ್ಷವಾಗಿ ಶೋಭಾ ಕರಂದ್ಲಾಜೆ ವಿರುದ್ಧ ಕಿಡಿಕಾರಿದರು.

ಇವತ್ತು ಬೆಂಕಿ ಉಂಡೆಯೂ ಮಾತನಾಡ್ತಿದೆ ನನಗೆ ನನ್ನ ರಕ್ಷಣೆಯೇ ಮುಖ್ಯವಾಗಿದೆ. ಪೊಲೀಸ್ ಆಯುಕ್ತರು ಕೇಳಬೇಕಿದೆ. ಇವರು ಬೆಂಕಿ‌ಹಚ್ಚೊಕೆ ಬಂದಿದ್ದಾರಾ? ಇಲ್ಲ ಬಾಂಬ್ ಇಡೋಕೆ ಬಂದಿದ್ದಾರಾ ಗೊತ್ತಿಲ್ಲ. 10 ವರ್ಷಗಳಿಂದ ಶಾಸಕನಾಗಿ, ಜನರ ನಡುವೆ ಕೆಲಸ ಮಾಡುತ್ತಿದ್ದೇನೆ. ಈ ಎಲ್ಲ ಅವಧಿಯಲ್ಲಿ ಒಂದೇ ಒಂದು ಗಲಭೆ ನಡೆದಿಲ್ಲ, ಆದರೆ ಈ ಸಲ ಟಿಕೆಟ್ ಗಿಟ್ಟಿಸಿರುವ ಶೋಭಾ ಕರಂದ್ಲಾಜೆ, ಗೆಲ್ಲುವ ಮೊದಲೇ ಅಸಂಬದ್ಧ ಮತ್ತು ಮತೀಯ ಗಲಾಟೆಗಳಿಗೆ ಉತ್ತೇಜನ ನೀಡುವ ಹೇಳಿಕೆ ನೀಡುತ್ತಿದ್ದಾರೆ” ಎಂದು ಆಕ್ರೋಶ ಹೊರಹಾಕಿದ್ದಾರೆ.

Font Awesome Icons

Leave a Reply

Your email address will not be published. Required fields are marked *