ಸಡಗರ ಸಂಭ್ರಮದಿಂದ ಜರುಗಿದ ಕಸ್ತೂರು ಬಂಡಿ ಜಾತ್ರೆ

ಚಾಮರಾಜನಗರ: ಜಿಲ್ಲೆಯ ಸಂತೆಮರಹಳ್ಳಿ  ಸಮೀಪದ ಹೆಗ್ಗವಾಡಿ ಗ್ರಾಮದಲ್ಲಿ ನಡೆದ ಕಸ್ತೂರು  ಬಂಡಿ ಜಾತ್ರೆ ಕಣ್ಮನ ಸೆಳೆಯಿತು.

ಸುಮಾರು 16 ಗ್ರಾಮಗಳ ಜನರು ಸೇರಿದ್ದ ಬಂಡಿ ಜಾತ್ರೆಯಲ್ಲಿ ಎತ್ತುಗಳು ಧೂಳೆಬ್ಬಿಸಿದವು. ನೆರದಿದ್ದ ಜನರು ಶಿಳ್ಳೆ, ಚಪ್ಪಾಳೆ ಹೊಡೆದು ಹುರಿದುಂಬಿಸುವುದರೊಂದಿಗೆ ವಿಜೃಂಭಣೆಯಿಂದ  ಬಂಡಿ  ಉತ್ಸವವನ್ನು ಆಚರಿಸಿದರು.  ಹಬ್ಬದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಅಕ್ಕಪಕ್ಕದ ಗ್ರಾಮಗಳಿಂದ ಸಹಸ್ರಾರು ಮಂದಿ ಆಗಮಿಸಿ ಸಂಭ್ರಮಿಸಿದರಲ್ಲದೆ, ಗ್ರಾಮ ದೇವತೆಯ ದರ್ಶನ ಪಡೆದು ಪುನೀತರಾದರು.

ಹಬ್ಬದ ಹಿನ್ನಲೆಯಲ್ಲಿ ಗ್ರಾಮದ ಪ್ರತಿ  ಮನೆ ಮನೆಯಲ್ಲೂ ಹೂವು ತೋರಣಗಳಿಂದ ಸಿಂಗಾರ  ಮಾಡಿ ಪ್ರತಿಯೊಂದು ಬೀದಿಗಳಲ್ಲೂ  ರಂಗೋಲಿ ಹಾಕಿ ಹಬ್ಬವನ್ನು ಸಂಭ್ರಮಿಸುತ್ತಿದ್ದ ದೃಶ್ಯ ಕಂಡು ಬಂದಿತು.  ಹಬ್ಬದಲ್ಲಿ ಪ್ರತಿ ಮನೆಯವರು ತಮ್ಮ ಮನೆಗೆ ದೂರ ನೆಂಟರು, ಬಂಧುಗಳನ್ನು ಆಹ್ವಾನಿಸಿ ವಿಶೇಷ ತಿಂಡಿ ತಿನುಸುಗಳನ್ನು ಮಾಡಿ ಊಟ  ಬಡಿಸುವುದು  ಸಂಪ್ರದಾಯವಾಗಿದ್ದು, ಅದರಂತೆ ಗ್ರಾಮದ ಮನೆಗಳಲ್ಲಿ ನೆಂಟರಿಷ್ಟರಿಂದ ಕೂಡಿ ಸಂಭ್ರಮಿಸುತ್ತಿದ್ದ ದೃಶ್ಯ ಕಂಡು ಬಂದಿತು.

ಕಸ್ತೂರು ಬಂಡಿ ಹಬ್ಬದಲ್ಲಿ ಸುತ್ತಮುತ್ತಲಿನ   16 ಗ್ರಾಮಗಳಾದ ದಾಸನೂರು, ಹೆಗ್ಗವಾಡಿ, ಚಿಕ್ಕ ಹೊಮ್ಮ, ಮುಖಳ್ಳಿ, ಕಸ್ತೂರು, ತೋರವಳ್ಳಿ, ಬಸವನಾಪುರ ಮೊದಲಾದ ಗ್ರಾಮಗಳ ಜನರೆಲ್ಲರೂ  ಸೇರಿ ಒಗ್ಗಟ್ಟಿನಿಂದ   ಉತ್ಸವವನ್ನು ಆಚರಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

Font Awesome Icons

Leave a Reply

Your email address will not be published. Required fields are marked *