ಸರ್ಕಾರಿ ಕಾಲೇಜು, ಮಲತಾಯಿ ಧೋರಣೆಯಲ್ಲಿ ತಾಲ್ಲೂಕು – ನ್ಯೂಸ್ ಕರ್ನಾಟಕ ಕನ್ನಡ (News Karnataka Kannada)

ಹುಲಸೂರ: ತಾಲ್ಲೂಕು ಘೋಷಣೆಯಾಗಿ ಹಲವು ವರ್ಷಗಳೇ ಕಳೆದರೂ ಇಲ್ಲಿಯವರೆಗೆ ಸರ್ಕಾರಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜು ಆರಂಭವಾಗಿಲ್ಲ. ಗಡಿಭಾಗದ 25 ಹಳ್ಳಿಗಳ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಇದು ಮುಳುವಾಗಿದೆ. ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ಕುರಿತು ಚಿಂತನೆ ಮಾಡಬೇಕಾದ ಅನಿವಾರ್ಯತೆ ಇದೆ.

ತಾಲ್ಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಮುಗಿದಾಕ್ಷಣ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜು ಪ್ರವೇಶ ಬಯಸುವ ವಿದ್ಯಾರ್ಥಿಗಳು ಕನಿಷ್ಠ ₹40 ಸಾವಿರದಿಂದ ₹50 ಸಾವಿರದವರೆಗೆ ಖಾಸಗಿ ಕಾಲೇಜುಗಳಿಗೆ ಶುಲ್ಕ ಪಾವತಿಸಬೇಕಾಗುತ್ತಿದೆ. ತಾಲ್ಲೂಕಿನಲ್ಲಿ 5 ಖಾಸಗಿ ಕಾಲೇಜಗಳಿದ್ದು, ಸರ್ಕಾರಿ ಕಾಲೇಜು ಇಲ್ಲದೇ ಇರುವುದರಿಂದ ಖಾಸಗಿ ಕಾಲೇಜಗಳದ್ದೇ ದರ್ಬಾರು ನಡೆಯುತ್ತಿದೆ ಎಂದು ಸಾರ್ವಜನಿಕರು ಹಾಗೂ ಪೋಷಕರು ದೂರಿದ್ದಾರೆ.

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಕುಸಿದಿದ್ದು, ಇದರ ಪರಿಣಾಮ ಪಿಯು ಕಾಲೇಜುಗಳ ಮೇಲೆ ಉಂಟಾಗಿದೆ. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ಪಿಯು ಖಾಸಗಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಯೂ ಈ ಬಾರಿ ಕುಸಿದಿದೆ.

ಸರ್ಕಾರಿ ಕಾಲೇಜು ಇಲ್ಲದೇ ಖಾಸಗಿ ಕಾಲೇಜಿನಲ್ಲಿ ಅಗತ್ಯ ಸೌಲಭ್ಯ, ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ಹಾಗೂ ಪೋಷಕರು ಖಾಸಗಿ ಕಾಲೇಜುಗಳ ಮೊರೆ ಹೋಗುತ್ತಿದ್ದಾರೆ. ಒಂದು ಕಾಲದಲ್ಲಿ ಬಹು ಬೇಡಿಕೆಯ ಕೋರ್ಸ್ ಆಗಿದ್ದ ಕಲಾ ಹಾಗೂ ವಾಣಿಜ್ಯ ವಿಭಾಗ ಈಗ ದಾಖಲಾತಿ ಸಲ್ಲಿಸುವವರೂ ಇಲ್ಲದಂತಾಗಿದೆ. ಫಲಿತಾಂಶ ಕುಸಿತವೂ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಬೇರೆ ತಾಲ್ಲೂಕಿನ ಸರ್ಕಾರಿ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಹ ನೀಡಲಾಗುತ್ತಿದೆ. ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೆರವಾಗುವ ಎಲ್ಲಾ ರೀತಿಯ ಪುಸ್ತಕ ಇರಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಓದುವ ಹವ್ಯಾಸವನ್ನು ಹೆಚ್ಚಿಸಲು ಪ್ರತಿ ವರ್ಷ ಪುಸ್ತಕ ಮೇಳ ಆಯೋಜಿಲಾಗುತ್ತಿದೆ. ಈ ಎಲ್ಲಾ ಸವಲತ್ತುಗಳಿಂದ ತಾಲ್ಲೂಕಿನ ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ.

ಮಲತಾಯಿ ಧೋರಣೆಯಲ್ಲಿ ತಾಲ್ಲೂಕು: ತಾಲ್ಲೂಕಿನಲ್ಲಿ ಸರ್ಕಾರಿ ಕಾಲೇಜು ಸೇರಿ ನಿತ್ಯ ಅಗತ್ಯವಾಗಿರುವ ತೋಟಗಾರಿಕೆ ಇಲಾಖೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಮತ್ತು ಅಗ್ನಿಶಾಮಕ ಠಾಣೆ,ಅರಣ್ಯ ಇಲಾಖೆ, ಎಪಿಎಂಸಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಕಚೇರಿ ಇನ್ನೂ ಹಲವು ಕಚೇರಿಗಳು ಬಂದಿಲ್ಲ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.

ಮೂರೂ ವರ್ಷ ನಡೆದ ಕಾಲೇಜು: ತಾಲ್ಲೂಕಿನಲ್ಲಿ 2007ನೇ ಸಾಲಿನಲ್ಲಿ ಸಮ್ಮಿಶ್ರ ಸರ್ಕಾರ ಇದ್ದಾಗ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಸರ್ಕಾರಿ ಕಾಲೇಜು ನಡೆಸಲು ನಿರ್ಧರಿಸಿತ್ತು. ಈ ವೇಳೆ 2007 ರಿಂದ 2010ರ ವರೆಗೆ ಅಂದರೆ ಮೂರೂ ವರ್ಷಗಳ ಕಾಲ ಹುಲಸೂರಿನಲ್ಲಿ ಕಲಾ ವಿಭಾಗದ ಕಾಲೇಜು ನಡೆಯಿತು. ಉಪನ್ಯಾಸಕರ ಕೊರತೆ ಸೇರಿ ಮೂಲಭೂತ ಸೌಕರ್ಯ ಸೇರಿ ಹಲವು ಅಡತಡೆಯಿಂದ ತಾಲ್ಲೂಕಿನಲ್ಲಿ ಇದ್ದ ಸರ್ಕಾರಿ ಕಾಲೇಜು ಬೆಳಗಾವಿ ಜಿಲ್ಲೆಯ ಖಾನಾಪುರಗೆ ಸ್ಥಳಾಂತರಿಸಲಾಗಿದೆ.

‘ಈ ಕಾಲೇಜನ ಕಟ್ಟಡ ಪ್ರೌಢಶಾಲಾ ಮಕ್ಕಳಿ ಕಲಿಕೆಗಾಗಿ ಬಳಕೆ ಮಾಡುತ್ತಿದ್ದು, ಆದರೂ ನೂತನ ಕಾಲೇಜಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇನೆ’ ಎಂದು ಪಟ್ಟಣದ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ ಸೂರ್ಯಕಾಂತ ಪಾಟೀಲ ಮಾಹಿತಿ ನೀಡಿದರು.

ಕಲಾ ವಿಭಾಗದಲ್ಲಿ ಶೂನ್ಯ ವಿದ್ಯಾರ್ಥಿಗಳು: ತಾಲ್ಲೂಕಿನ ಸಮೀಪದ ಮೇಹಕರನಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದಲ್ಲಿ ವಿದ್ಯಾರ್ಥಿಗಳು ಪ್ರವೇಶ ಶೂನ್ಯಕ್ಕೆ ಇಳಿದಿದೆ. ಇದರಿಂದಾಗಿ ವಿಭಾಗ ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಸುತ್ತಮುತ್ತಲಿನ 20 ಗ್ರಾಮಗಳಿಗೆ ಒಂದೇ ಸರ್ಕಾರಿ ಕಾಲೇಜು ಇದೆ. ಕಳೆದ ವರ್ಷ ಒಟ್ಟು 10 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಈ ಕಾಲೇಜು ಆರಂಭಗೊಂಡು 15 ರಿಂದ 20 ವರ್ಷ ಕಳೆದಿದ್ದರೂ ಮೂಲ ಸೌಕರ್ಯ ಇಲ್ಲ. ಐವರು ಉಪನ್ಯಾಸಕರಿದ್ದಾರೆ.

ಇದರಲ್ಲಿ ಕನ್ನಡ ಹಾಗೂ ಇತಿಹಾಸ ಉಪನ್ಯಾಸಕರು ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ.ಈ ಕಾಲೇಜಿನಲ್ಲಿ ಡಿಜಿಟಲ್ ಗ್ರಂಥಾಲಯ, ಕುಡಿಯುವ ನೀರು ವ್ಯವಸ್ಥೆ ಸೇರಿ ಸರ್ಕಾರದ ಮೂಲ ಸೌಕರ್ಯಗಳೇ ಇಲ್ಲ.

Font Awesome Icons

Leave a Reply

Your email address will not be published. Required fields are marked *