ಸೋಮನಾಥಪುರ ದೇವಾಲಯಕ್ಕೆ ಮೂಲಭೂತ ಸೌಕರ್ಯ, ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಕುರಿತು ಸಚಿವ ಹೆಚ್.ಕೆ ಪಾಟೀಲ್ ಪ್ರತಿಕ್ರಿಯಿಸಿದ್ದು ಹೀಗೆ.. – Just Kannada | Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್

ಮೈಸೂರು,ಜನವರಿ,27,2024(www.justkannada.in):  ಸೋಮನಾಥಪುರ ದೇವಾಲಯಕ್ಕೆ ಮೂಲಭೂತ ಸೌಕರ್ಯ ಕೊರತೆ ವಿಚಾರ ಮತ್ತು ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಕುರಿತು ಪ್ರವಾಸೋದ್ಯಮ ಸಚಿವ ಹೆಚ್.ಕೆ ಪಾಟೀಲ್  ಪ್ರತಿಕ್ರಿಯೆ ನೀಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಪ್ರವಾಸೋದ್ಯಮ ಸಚಿವ ಹೆಚ್.ಕೆ ಪಾಟೀಲ್, ಸೋಮನಾಥಪುರ ದೇವಾಲಯದಲ್ಲಿ ಏಕ ಕಾಲಕ್ಕೆ ಮೂಲಭೂತ ಸೌಕರ್ಯ ಕೊಡಲು ಸಾಧ್ಯವಿಲ್ಲ. ಹಂತ ಹಂತವಾಗಿ ಮೂಲಭೂತ ಸೌಕರ್ಯ ಒದಗಿಸೋಣ. ಸೋಮನಾಥಪುರ ದೇವಾಲಯಕ್ಕೆ ಯಾಕೆ ಬಸ್ ಫೆಸಿಲಿಟಿ ಕಡಿಮೆಯಾಗಿದೆ ಎಂಬುದರ ಮಾಹಿತಿ ಇಲ್ಲ. ನಾನು ಕೆಎಸ್ ಆರ್ ಟಿಸಿ ಎಂಡಿ ಜೊತೆ ಮಾತನಾಡುತ್ತೇನೆ. ಸೋಮನಾಥಪುರಕ್ಕೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಹಾಗೇ ಮಾಡುತ್ತೇವೆ ಎಂದರು.

ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಹೆಚ್.ಕೆ ಪಾಟೀಲ್,  ರೋಪ್ ವೇ ನಿರ್ಮಾಣ ಪ್ರಸ್ತಾವನೆ ಸರ್ಕಾರದ ಮುಂದಿದೆ. ರೋಪ್ ವೇ ನಿರ್ಮಾಣ ಕುರಿತು ಪರ ವಿರೋಧವಿದೆ. ಸಾಧಕ ಬಾಧಕ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಚಾಮುಂಡೇಶ್ವರಿ ದೇವಾಲಯದ ಅಭಿವೃದ್ಧಿಗಾಗಿ ಪ್ರಾಧಿಕಾರ ಮಾಡಿದ್ದೇವೆ. ಪ್ರಸಾದ ಯೋಜನೆಯಡಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ 40ಕೋಟಿ ಅನುದಾನದಲ್ಲಿ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ ಮುಂದಾಗಿದ್ದೇವೆ ಎಂದು ತಿಳಿಸಿದರು.

ಶೆಟ್ಟರ್ ಬಿಜೆಪಿ ಸೇರ್ಪಡೆ ಕಾಂಗ್ರೆಸ್ ಗೆ ನಷ್ಟವೇನಿಲ್ಲ

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆಯಿಂದ ಕಾಂಗ್ರೆಸ್ ಗೆ ನಷ್ಟವೇನಿಲ್ಲ.  ಕಾಂಗ್ರೆಸ್ ಪಕ್ಷ ಸಮುದ್ರವಿದ್ದಂತೆ. ಪಕ್ಷದ ತತ್ವ ಸಿದ್ದಾಂತ, ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಬೆಂಬಲಿಸುವವರು ಪಕ್ಷದಲ್ಲಿರುತ್ತಾರೆ. ಬಡವ ಬಲ್ಲಿದರನ್ನು ಮೇಲೆತ್ತುವ ಯೋಜನೆಗಳನ್ನು ವಿರೋಧಿಸುವವರು ಪಕ್ಷ ಬಿಟ್ಟು ಹೋಗುತ್ತಾರೆ. ಕಾಂಗ್ರೆಸ್ ಪಕ್ಷ ಯಾವುದೇ ನಾಯಕರ ಮೇಲೆ ಕಣ್ಗಾವಲು ಇರಿಸುವುದಿಲ್ಲ. ಜಗದೀಶ್ ಶೆಟ್ಟರ್ ಪಕ್ಷ ತೊರೆದಿರುವುದರಿಂದ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ. ಇಂದಿರಾಗಾಂಧಿ ಕಾಲದಲ್ಲಿ ಏನಾಯಿತು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಏನಾಗಿದೆ ಎಂದು ಎಲ್ಲರಿಗೂ ಗೊತ್ತು. 17 ಶಾಸಕರು ಪಕ್ಷ ಬಿಟ್ಟು ಹೋದರೂ ಏನಾಯಿತು, ವಿಧಾನಸಭೆ ಚುನಾವಣೆಯಲ್ಲಿ ನಾವು 135 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿಲ್ಲವಾ ಎಂದು ಹೇಳಿದರು.

ಶಾಸಕ ಲಕ್ಷ್ಮಣ್ ಸವದಿ ಪಕ್ಷ ಬಿಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಕೆ ಪಾಟೀಲ್, ಶಾಸಕ ಲಕ್ಷ್ಮಣ್ ಸವದಿ ಒಬ್ಬ ಜಂಟಲ್ ಮೆನ್. ಅವರು ಪಕ್ಷ ಬಿಡುವುದಿಲ್ಲ ಎಂದಿದ್ದಾರೆ. ಅವರ ಮಾತಿಗೆ ಅವರು ಬದ್ದರಾಗಿರುತ್ತಾರೆ ಎಂಬ ನಂಬಿಕೆಯಿದೆ ಎಂದರು.

ಲೋಕಸಭೆಯಲ್ಲಿ ಬಿವೈ ರಾಘವೇಂದ್ರರನ್ನು ಗೆಲ್ಲಿಸಿ ಎಂಬ ಶಾಮನೂರು ಶಿವಶಂಕರಪ್ಪ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಕೆ ಪಾಟೀಲ್, ಶಾಮನೂರು ಶಿವಶಂಕರಪ್ಪ ನಮ್ಮ ಪಕ್ಷದ ಹಿರಿಯ ನಾಯಕರು. ಪಕ್ಷದ ವಿವಿಧ ಹುದ್ದೆಗಳಲ್ಲಿ ಇದ್ದವರು. ಈ ರೀತಿಯಲ್ಲಿ ಅವರು ಹೇಳಿರಲ್ಲ. ಮಾಧ್ಯಮಗಳ ತಪ್ಪು ಗ್ರಹಿಕೆಯಿಂದ ಈ ರೀತಿ ಅರ್ಥೈಸಿರಬಹುದು. ನಾನು ಅವರ ಹೇಳಿಕೆ ಗಮನಿಸಿ ನಂತರ ಮಾತನಾಡುತ್ತೇನೆ ಎಂದು ಹೇಳಿದರು.

Key words: Minister-HK Patil – basic infrastructure -Somanathapura temple

Font Awesome Icons

Leave a Reply

Your email address will not be published. Required fields are marked *