ಹಣದ ಸೂಟ್ ಕೇಸ್ ಗುರಿ ನಿಗದಿಗೆ ಮೀಟಿಂಗ್ ಎಂದಿದ್ದ ಎಂಎಲ್ ಸಿ ರವಿಕುಮಾರ್ ವಿರುದ್ಧ ಹೆಚ್.ಎ ವೆಂಕಟೇಶ್ ಕಿಡಿ. – Just Kannada | Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್

ಬೆಂಗಳೂರು,ಆಗಸ್ಟ್,3,2023(www.justkannada.in): ರಾಜ್ಯ ಸರ್ಕಾರದ ಪ್ರತಿ ಸಚಿವರು ಹಣದ ಸೂಟ್ ಕೇಸ್ ತಂದು ಕೊಡಬೇಕೆಂಬ ಗುರಿ ನಿಗದಿಪಡಿಸಲು ಕಾಂಗ್ರೆಸ್ ಹೈಕಮಾಂಡ್ ಸಭೆ ಕರೆದಿರುವುದಾಗಿ ಬಿಜೆಪಿ ಎಂಎಲ್ ಸಿ ಎನ್.  ರವಿಕುಮಾರ್ ನೀಡಿರುವ ಹೇಳಿಕೆ ಕಿಡಿಗೇಡಿತನದಿಂದ ಕೂಡಿದೆ. ವಿಧಾನಪರಿಷತ್  ನಂತಹ ಸಭ್ಯ ಹಿರಿಯರ ಮನೆಯ ಸದಸ್ಯರಾಗಿ ರವಿಕುಮಾರ್ ಇಷ್ಟೊಂದು ಲಘುವಾಗಿ ನಡೆದುಕೊಳ್ಳಬಾರದು ಎಂದು ಕೆಪಿಸಿಸಿ ವಕ್ತಾರ ಹೆಚ್.ಎ ವೆಂಕಟೇಶ್ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿದ ಹೆಚ್.ಎ ವೆಂಕಟೇಶ್, ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಚಿವರು, ಶಾಸಕರು ಮತ್ತು ಪರಿಷತ್ ಸದಸ್ಯರು ಹಾಗು ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು ನಡೆಸುತ್ತಿದ್ದ ಭ್ರಷ್ಟಾಚಾರವನ್ನು ರವಿಕುಮಾರ್ ನೆನಪಿಸಿಕೊಂಡು ಕಾಂಗ್ರೆಸ್ ಸರ್ಕಾರದಲ್ಲಿಯೂ ಹೀಗೇ ನಡೆಯುತ್ತಿರಬಹುದು ಎಂಬ ಭಾವನೆಯಿಂದ ಈ ಹೇಳಿಕೆ ನೀಡಿದಂತಿದೆ. ಅಲ್ಲದೇ ನಮ್ಮ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆಯಲು ಕೋಟಿ ಕೋಟಿ ಹಣ ನೀಡಬೇಕಿದೆ ಎಂದು ಖುದ್ದು ಬಿಜೆಪಿ ಶಾಸಕರು ದೂರಿದ್ದನ್ನೂ ರವಿಕುಮಾರ್ ಮರೆತಂತಿದೆ. ವಿಜಾಪುರದ ಶಾಸಕ ಬಸವನ ಗೌಡ ಯತ್ನಾಳ್, ಮುಖ್ಯಮಂತ್ರಿ ಸ್ಥಾನಕ್ಕಾಗಿ ನೂರಾರು ಕೋಟಿ ಹಣದ ಬೇಡಿಕೆ ಬಂದಿದೆ ಎಂದು ಹೇಳಿದ್ದನ್ನು ಸಹ ಇವರು ನಿರ್ಲಕ್ಷಿಸಿ, ಅನ್ಯ ಪಕ್ಷದ ಬಗ್ಗೆ ಮಾತನಾಡುತ್ತಿರುವುದು ಜಾಣಮರೆವಿಗೆ ಉತ್ತಮ ಉದಾಹರಣೆ ಎಂದು ಟೀಕಿಸಿದರು.

ಇಷ್ಟಕ್ಕೂ ಭ್ರಷ್ಟಾಚಾರ ಎನ್ನುವುದು ಬಿಜೆಪಿಗೆ ಕರಗತ. ಹಲವು ಹತ್ತು ಪ್ರಸಂಗಗಳಲ್ಲಿ ಇದು ಸ್ಪಷ್ಟವಾಗಿ ಸಾಬೀತಾಗಿದೆ. ಪಿಎಸ್ ಐ ನೇಮಕಾತಿಯಲ್ಲಿ ಬಿಜೆಪಿ ಮುಖಂಡರು ನಡೆಸಿದ ಭಾನಾಗಡಿಗಳ ಬಗ್ಗೆ ಪ್ರತ್ಯೇಕವಾಗಿ ವಿವರಿಸುವ ಅಗತ್ಯವಿಲ್ಲ.  ಭ್ರಷ್ಟಾಚಾರವನ್ನೇ ಹೊದ್ದು ಸ್ವಜನ ಪಕ್ಷಪಾತದಲ್ಲಿ ಮಿಂದು, ಶೇಕಡ 40ರಷ್ಟು ಗುತ್ತಿಗೆ ಕಮಿಷನ್ ಸ್ವಾಹ ಮಾಡಿಯೂ ನಾವು ಸಜ್ಜನರು ಎಂದು ಹೇಳಿಕೊಳ್ಳುತ್ತಿರುವ ಈ ಪಕ್ಷದ ನಾಯಕರು ನಿಜವಾಗಿ ಲಜ್ಜೆಯಿಂದ ತಲೆತಗ್ಗಿಸಬೇಕಿದೆ.

ಬಿಜೆಪಿಯ ಭ್ರಷ್ಟಾಚಾರದಿಂದ ಜನ ಬೇಸತ್ತಿದ್ದರು. ಇದರಿಂದ ಸರ್ಕಾರ ಬದಲಾವಣೆಯಾಗಿದೆ ಎನ್ನುವುದು ಪ್ರಪಂಚಕ್ಕೆ ಖಚಿತಪಟ್ಟಿರುವ ಸಂಗತಿ.  ಆದರೂ ಸಹ ತಮ್ಮ ಹುಳುಕು ಮುಚ್ಚಿಕೊಳ್ಳಲು ಬಿಜೆಪಿ ನಾಯಕರು ಕಾಂಗ್ರೆಸ್ ಪ್ರಮುಖರ ಸಭೆಯ ಬಗ್ಗೆ ಮಾತನಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಹೆಚ್.ಎ ವೆಂಕಟೇಶ್ ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಕೆಲವೇ ದಿನಗಳಲ್ಲಿ ಜನಪರ ಯೋಜನೆಗಳ ಮೂಲಕ ಬೆಂಬಲ ಗಳಿಸಿಕೊಂಡಿದೆ.  ಹಣದುಬ್ಬರ, ಬೆಲೆ ಏರಿಕೆಯಿಂದ ಬಳಲುತ್ತಿದ್ದ ಮಧ್ಯಮ ವರ್ಗ, ಬಡ ತಳ ಸಮುದಾಯಗಳು ಜೀವ ಚೈತನ್ಯ ಸ್ಥಿತಿಗೆ ಮರಳುತ್ತಿವೆ. ಇವೆಲ್ಲವನ್ನೂ ಗಮನಿಸಿ ಹಾಗೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಹೀನಾಯವಾಗಿ ಸೋಲುವುದನ್ನು ಕಲ್ಪಿಸಿಕೊಂಡು ರವಿಕುಮಾರ್ ಮತ್ತು ಅವರಂತಹ ಬಿಜೆಪಿಯ ಇನ್ನಿತರ ನಾಯಕರು ಚಡಪಡಿಸುತ್ತಿದ್ದಾರೆ.  ಈ ಹತಾಶೆಯ ಹಿನ್ನೆಲೆಯಲ್ಲಿಯೇ ಇಂತಹ ಬಾಲಿಷ ಹಾಗೂ ಕುತ್ಸಿತ ಮನೋಭಾವದ ಹೇಳಿಕೆಗಳು ಹೊರಬರುತ್ತಿವೆ ಎಂದು ಹರಿಹಾಯ್ದರು.

ಬಿಜೆಪಿಯವರು ಯಾವುದೇ ಹೇಳಿಕೆ ನೀಡಿದರೂ ಎಷ್ಟೇ ಕಸರತ್ತು ಮಾಡಿದರೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಿಮ್ಮತ್ತಿಲ್ಲದ ಕಸದಂತೆ ಮತ್ತೆ ಮೂಲೆಗೆ ತಳ್ಳಲ್ಪಡುವುದು ಶತಸಿದ್ಧ.  ರಾಜ್ಯದಲ್ಲಿ ಕನಿಷ್ಟ  ನಾಲ್ಕೈದು ಸ್ಥಾನಗಳನ್ನಾದರೂ ಲೋಕಸಭಾ  ಚುನಾವಣೆಯಲ್ಲಿ ಉಳಿಸಿಕೊಳ್ಳಲು ಬಿಜೆಪಿ ನಾಯಕರು ಈಗಿನಿಂದಲೇ ಟೊಂಕ ಕಟ್ಟಿ ಶ್ರಮವಹಿಸಬೇಕಾದ ಅಗತ್ಯವಿದೆ ಎಂದು ಹೆಚ್.ಎ ವೆಂಕಟೇಶ್ ಲೇವಡಿ ಮಾಡಿದರು.

Key words: MLC Ravikumar – meeting -fix – money -suit case- H.A Venkatesh

Font Awesome Icons

Leave a Reply

Your email address will not be published. Required fields are marked *