ಹೃದಯದ ಆರೋಗ್ಯ ಕಾಪಾಡಲು ಆಹಾರ ಕ್ರಮ ಹೇಗಿರಬೇಕು?

ಬಾಯಿ ರುಚಿಗೆ ತಕ್ಕಂತೆ ನಮಗೆ ಬೇಕಾದ ಆಹಾರಗಳನ್ನು ಸೇವಿಸಿ ಹಸಿವು ನೀಗಿಸಿಕೊಳ್ಳುತ್ತಿದ್ದೇವೆ. ಆದರೆ  ನಿಜವಾಗಿಯೂ ನಾವು ಸೇವಿಸುವ ಆಹಾರ ಬಾಯಿಗೆ ರುಚಿಯಾಗಿ ಹೊಟ್ಟೆ ತುಂಬಿದರೆ ಸಾಲದು ಅದು ಆರೋಗ್ಯಕ್ಕೆ ಪೂರಕವಾಗಿರಬೇಕು ಎನ್ನುವುದು ಬಹಳ ಮುಖ್ಯವಾಗಿದೆ.

ಇವತ್ತು ಬಹಳಷ್ಟು ಮಂದಿ ವಿವಿಧ ರೋಗಗಳಿಂದ ಬಳಲುತ್ತಿರುವುದರಿಂದ ಅವರು ಅವರ ಆರೋಗ್ಯಕ್ಕೆ  ಅನುಕೂಲವಾಗುವ ಆಹಾರವನ್ನು ಸೇವಿಸುವುದನ್ನು ರೂಢಿಸಿಕೊಂಡರೆ ರೋಗ ಉಲ್ಭಣವಾಗದಂತೆ ತಡೆದು ನಿಯಂತ್ರಣಲ್ಲಿಡಲು ಸಹಕಾರಿಯಾಗುತ್ತದೆ. ಇತ್ತೀಚೆಗಿನ ದಿನಗಳಲ್ಲಿ ಈಗ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿರುವ ಕಾರಣ ನಾವು ಹೃದಯದ ಆರೋಗ್ಯಕ್ಕೆ ಸಹಕಾರಿಯಾದ ಆಹಾರವನ್ನು ಸೇವಿಸುವುದು ಅನಿವಾರ್ಯವಾಗಿದೆ.

ಹಾಗೆನೋಡಿದರೆ ಹೃದಯದ ತೊಂದರೆಗೆ ದೇಹ ಮತ್ತು ರಕ್ತದಲ್ಲಿ ಶೇಖರಣೆಯಾಗುವ ಕೊಬ್ಬು, ಕೊಲೆಸ್ಟ್ರಾಲ್, ಅತಿರಕ್ತದೊತ್ತಡ,  ಅತಿತೂಕವೂ ಮಾರಕವಾಗಿದೆ. ಬಹಳಷ್ಟು ಕಾಯಿಲೆಗೆ ನಾವು ಸೇವಿಸುವ ಆಹಾರದಲ್ಲಿರುವ ಕೆಲವು ಪದಾರ್ಥಗಳು ಕೂಡ ಕಾರಣವಾಗಿವೆ. ಬಾಯಿ ರುಚಿಗಾಗಿ ಸಿಕ್ಕಿದನೆಲ್ಲ ತಿನ್ನುವುದು ಕಾಯಿಲೆಗಳಿಗೆ ಆಶ್ರಯ ನೀಡುತ್ತವೆ.

ಜಿಡ್ಡು ಕೊಬ್ಬಿನಾಂಶ, ಎಣ್ಣೆಯಲ್ಲಿ ಕರಿದ ತಿಂಡಿಗಳು ಬಾಯಿಗೆ ರುಚಿಯಾಗಿದ್ದರೂ ಅವು ಹೃದಯದ ಆರೋಗ್ಯ  ಒಳ್ಳೆಯದಲ್ಲ. ಹೀಗಾಗಿ ಶೇ. 15ರಿಂದ 20ರಷ್ಟು ಮಾತ್ರ ಕೊಬ್ಬು ಆಹಾರದಲ್ಲಿರುವಂತೆ ನೋಡಿಕೊಳ್ಳಬೇಕು. ಹಾಗಾದರೆ ಯಾವುದನ್ನು ಸೇವಿಸಬೇಕು? ಯಾವುದನ್ನು ಸೇವಿಸಬಾರದು ಎಂಬುದರ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ. ತುಪ್ಪ, ವನಸ್ಪತಿ, ಕೊಬ್ಬರಿ ಎಣ್ಣೆ, ಬೆಣ್ಣೆ,  ಹಾಲಿನ ಉತ್ಪನ್ನಗಳಾದ ಖೋವಾ, ಪನ್ನೀರು, ಐಸ್‌ಕ್ರೀಮ್, ಗಿಣ್ಣು ಸೇವಿಸಬಾರದು.

ಮೊಟ್ಟೆಯ ಹಳದಿ ಭಾಗ, ಚರ್ಬಿ ಮಾಂಸ, ಕೋಳಿಯ ಚರ್ಮ, ಹಂದಿ ಮಾಂಸ, ದನಮಾಂಸ ಮೊದಲಾದವುಗಳನ್ನು  ತಿನ್ನಬಾರದು. ಉಪ್ಪನ್ನು ಆದಷ್ಟು ಕಡಿಮೆ ಮಾಡಬೇಕು. ಚಿಪ್ಸ್, ಸಾಸ್, ಉಪ್ಪಿನಕಾಯಿ ಉಪ್ಪು ಮಿಶ್ರಿತ ಬಿಸ್ಕೆಟ್, ಸಂಡಿಗೆ ಮೊದಲಾದವುಗಳನ್ನು ತಿನ್ನಬಾರದು. ಧೂಮಪಾನ, ಮದ್ಯಪಾನ ನಿಲ್ಲಿಸಬೇಕು.  ಬೊಜ್ಜು ಬಾರದಂತೆ ನೋಡಿಕೊಳ್ಳಬೇಕು. ಒತ್ತಡದ ಬದುಕಿನಿಂದ ಹೊರಬರಬೇಕು. ಕಾಫಿ, ಟೀ ಸೇರಿದಂತೆ ಕೆಲವು ಪಾನೀಯಗಳನ್ನು ಹೆಚ್ಚು ಸೇವಿಸಬಾರದು.

ನಾರಿನ ಅಂಶದ ಆಹಾರಗಳು, ಕಾಳುಗಳು, ಮೊಳಕೆಕಾಳುಗಳು, ಸೊಪ್ಪು, ಹಣ್ಣು ಹಂಪಲುಗಳು, ರಾಗಿ, ಗೋಧಿ, ಜೋಳ,  ಅಕ್ಕಿಯನ್ನು ಮಧ್ಯಮ ಪ್ರಮಾಣದಲ್ಲಿ ಸೇವಿಸಬೇಕು. ಎಣ್ಣೆಬೀಜ ಮತ್ತು ಒಣ ಹಣ್ಣುಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.  ವಿಟಮಿನ್ ಸಿ ಯುಕ್ತ ಹಣ್ಣುಗಳಾದ ದ್ರಾಕ್ಷಿ, ಸೀಬೆ, ಕಿತ್ತಲೆ, ಮೋಸಂಬಿ, ನೆಲ್ಲಿಕಾಯಿ ಮಾವಿನ ಹಣ್ಣನ್ನು  ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು. ಬೆಳ್ಳುಳ್ಳಿ ಹಸಿ ಈರುಳ್ಳಿ ಸೇವನೆ ಒಳ್ಳೆಯದು.

ಇತ್ತೀಚೆಗಿನ ದಿನಗಳಲ್ಲಿ ಸದಾ ಒತ್ತಡದ ಬದುಕಿನಲ್ಲಿ ಯಾವುದನ್ನೂ ನಾವು ಸರಿಯಾಗಿ ಮಾಡುತ್ತಿಲ್ಲ. ಶ್ರೀಮಂತಿಕೆ  ಇದ್ದರೂ ನೆಮ್ಮದಿಯಾಗಿ ಹೊತ್ತೊತ್ತಿಗೆ ನೆಮ್ಮದಿಯಾಗಿ ಊಟ ಮಾಡಲಾಗುತ್ತಿಲ್ಲ. ಸಿಕ್ಕಿದನ್ನು ತಿಂದು ಹಣ ಸಂಪಾದನೆಯತ್ತ ಹೆಚ್ಚಿನ ಗಮನನೀಡುತ್ತಿರುವ ನಾವು ಆರೋಗ್ಯವನ್ನು ಸದ್ದಿಲ್ಲದೆ ಕಳೆದುಕೊಳ್ಳುತ್ತೇವೆ. ಆದ್ದರಿಂದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹು ಮುಖ್ಯವಾಗಿದ್ದು, ಅದರ ಜತೆಗೆ ಆರೋಗ್ಯಕ್ಕೆ ಮಾರಕವಾಗುವ ಆಹಾರವನ್ನು ತ್ಯಜಿಸುವುದು ಕೂಡ ಅಷ್ಟೇ ಮುಖ್ಯವಾಗಿದೆ.

Font Awesome Icons

Leave a Reply

Your email address will not be published. Required fields are marked *