ಬೆಂಗಳೂರು : ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ನಡೆದ ಘಟನೆಗೆ ತಮಿಳುನಾಡಿನ ಸಂಬಂಧ ಕಲ್ಪಿಸಿ ಪ್ರಚೋದನಕಾರಿ ಮಾತುಗಳನ್ನಾಡಿದ ಆರೋಪದ ಮೇಲೆ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ವಿರುದ್ಧ ಕೇಸ್ ದಾಖಲಿಸಿದ್ದು, ಇದಕ್ಕೆ ಹೈಕೋರ್ಟ್ ತಡೆ ನೀಡಿದೆ.
ಪ್ರಕರಣ ಸಂಬಂಧ ಬೆಂಗಳೂರಿನ ಕಾಟನ್‌ಪೇಟೆ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್ ಹಾಗೂ ಅದರ ಸಂಬಂಧ 5ನೇ ಎಸಿಎಂಎಂ ನ್ಯಾಯಾಲಯದ ಮುಂದಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಶೋಭಾ ಕರಂದ್ಲಾಜೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಈ ವೇಳೆ ಶೋಭಾ ಕರಂದ್ಲಾಜೆ ಪರ ವಕೀಲ ವೆಂಕಟೇಶ್ ದಳವಾಯಿ, ಭಾಷಣದಲ್ಲಿ ಯಾವುದೇ ಧರ್ಮ, ಜಾತಿ, ಪಂಗಡದ ಬಗ್ಗೆ ಮಾತನಾಡಿರಲಿಲ್ಲ. ಎಫ್‌ಐಆರ್ ದಾಖಲಿಸುವ ಮೊದಲು ದೂರುದಾರರು ಪ್ರಾಥಮಿಕ ತನಿಖೆ ನಡೆಸಬೇಕಿತ್ತು. ಆದ್ದರಿಂದ ಇದೊಂದು ರಾಜಕೀಯಪ್ರೇರಿತ ಪ್ರಕರಣ, ಎಫ್‌ಐಆರ್ ದಾಖಲಿಸಿರುವುದು ಕಾನೂನಿನ ದುರ್ಬಳಕೆ ಆಗಿದೆ. ಹೀಗಾಗಿ, ಎಫ್‌ಐಆರ್ ರದ್ದುಪಡಿಸಬೇಕು ಎಂದು ಪೀಠದ ಮುಂದೆ ಮನವಿ ಮಾಡಿದ್ದು, ವಾದವನ್ನು ಮನ್ನಿಸಿ ಪ್ರಕರಣಕ್ಕೆ ತಡೆ ನೀಡಿದೆ. ಪ್ರತಿವಾದಿಗಳಾದ ಕಾಟನ್‌ಪೇಟೆ ಪೊಲೀಸರು ಹಾಗೂ ದೂರು ದಾಖಲಿಸಿದ್ದ ಚುನಾವಣಾ ನೀತಿಸಂಹಿತೆ ಸಂಚಾರಿ ದಳದ ಅಧಿಕಾರಿ ಎಂ.ಎನ್. ಶಿವರಾಜು ಅವರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.