ಉರುಳಿಗೆ ಸಿಲುಕಿದ ಚಿರತೆಯನ್ನು ರಕ್ಷಿಸಿ ಕಾಡಿಗೆ ಬಿಟ್ಟ ಅರಣ್ಯ ಇಲಾಖೆ

ಮೈಸೂರು: ಉರುಳಿಗೆ ಸಿಲುಕಿ ನರಳುತ್ತಿದ್ದ ಚಿರತೆಯನ್ನು ರಕ್ಷಿಸಿ ಸುರಕ್ಷಿತವಾಗಿ ನಾಗರಹೊಳೆ ಅಭಯಾರಣ್ಯಕ್ಕೆ ಬಿಟ್ಟ ಘಟನೆ ಪಿರಿಯಾಪಟ್ಟಣ ತಾಲೂಕಿನ ಮಲ್ಲಿನಾಥಪುರ ಗ್ರಾಮದ ಅರಣ್ಯ ನಡು ತೋಪಿನಲ್ಲಿ ನಡೆದಿದೆ.

ಯಾರೋ ಕಿಡಿಗೇಡಿಗೇಡಿಗಳು ವನ್ಯ ಪ್ರಾಣಿಗಳನ್ನು ಸೆರೆ ಹಿಡಿಯುವ ಸಲುವಾಗಿ ಮಲ್ಲಿನಾಥಪುರ  ಗ್ರಾಮದ ಅರಣ್ಯ  ನೆಡುತೋಪಿನಲ್ಲಿ ಉರುಳನ್ನು ಹಾಕಿದ್ದರು. ಇದಕ್ಕೆ ಅರಣ್ಯದಿಂದ ಆಹಾರ ಅರಸಿ ಬಂದಿದ್ದ ಸುಮಾರು ನಾಲ್ಕರಿಂದ ಐದು ವರ್ಷ ಪ್ರಾಯದ ಗಂಡು ಚಿರತೆ ಸಿಕ್ಕಿ ಬಿದ್ದಿದೆ.

ಗಂಡು ಚಿರತೆ ಉರುಳಿಗೆ ಸಿಕ್ಕಿ ಹಾಕಿಕೊಂಡಿರುವ ವಿಚಾರ ತಿಳಿಯುತ್ತಿದ್ದಂತೆಯೇ ಪಿರಿಯಾಪಟ್ಟಣ ಪ್ರಾದೇಶಿಕ ವಲಯದ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಮೈಸೂರು ವೃತ್ತದ ಮುಖ್ಯ ಅರಣ್ಯ  ಸಂರಕ್ಷಣಾಧಿಕಾರಿ ಮಾಲತಿ ಪ್ರಿಯ, ಹುಣಸೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಎ ಸೀಮಾ, ಸಹಾಯಕ ಸಂರಕ್ಷಣಾಧಿಕಾರಿ ಮಹದೇವಪ್ಪ ಅವರ ನಿರ್ದೇಶನದಂತೆ ಪಿರಿಯಾಪಟ್ಟಣ ಪ್ರಾದೇಶಿಕ ವಲಯದ ಅರಣ್ಯಾಧಿಕಾರಿ ವೈ.ಕೆ ಕಿರಣ್ ಕುಮಾರ್ ಮತ್ತು ಸಿಬ್ಬಂದಿ ಸದರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆ ನಂತರ ಅರಣ್ಯ ಇಲಾಖೆ ವೈದ್ಯಾಧಿಕಾರಿ ಡಾ.ರಮೇಶ್ ಅವರನ್ನು ಸ್ಥಳಕ್ಕೆ ಕರೆಸಿ ಉರುಳಿಗೆ ಸಿಕ್ಕಿಕೊಂಡಿದ್ದ ಚಿರತೆಯನ್ನು  ಅರವಳಿಕೆ ಮದ್ದಿನ ಸಹಾಯದಿಂದ ಉರುಳಿನಿಂದ ಬಿಡಿಸಿ ಪ್ರಾಣಾಪಾಯದಿಂದ ಪಾರು ಮಾಡಿ ವೈದ್ಯಕೀಯ ತಪಾಸಣೆ ನಡೆಸಿದ್ದಾರೆ.

ಇದಾದ ಬಳಿಕ ವೈದ್ಯಾಧಿಕಾರಿಗಳ ಸಲಹೆಯಂತೆ  ಸುರಕ್ಷಿತವಾಗಿ ಚಿರತೆಯನ್ನು ನಾಗರಹೊಳೆ ಅಭಯಾರಣ್ಯಕ್ಕೆ ಬಿಡಲಾಗಿದೆ.

Font Awesome Icons

Leave a Reply

Your email address will not be published. Required fields are marked *