ಹುಬ್ಬಳ್ಳಿ, ಏಪ್ರಿಲ್ 23,2024 (www.justkannada.in): ಲೋಕಸಭೆ ಚುನಾವಣೆಯ ಸಂದರ್ಭದಲ್ಲೇ ಬಿಜೆಪಿಗೆ ಗುಡ್ ಬೈ ಹೇಳಲು ವಿಧಾನಪರಿಷತ್ ಸದಸ್ಯ ಕೆಪಿ ನಂಜುಂಡಿ ಮುಂದಾಗಿದ್ದು ಇಂದು ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಗೆ ಅವರ ಹುಬ್ಬಳ್ಳಿಯ ಮನೆಗೆ ತೆರಳಿ ಕೆ.ಪಿ ನಂಜುಂಡಿ ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ್ದಾರೆ. ಬುಧವಾರ(ನಾಳೆ) ಕಾಂಗ್ರೆಸ್ ಸೇರ್ಪಡೆಯಾಗುವುದಾಗಿ ಹೇಳಿದ್ದಾರೆ.
ರಾಜೀನಾಮೆ ನೀಡಿದ ಬಳಿಕ ಮಾತನಾಡಿದ ಕೆ.ಪಿ ನಂಜುಂಡಿ, ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡುತ್ತೇನೆ. ನಾಳೆ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದೇನೆ. ನಿರ್ಲಕ್ಷ್ಯಕ್ಕೊಳಗಾದ ಕಾಯಕ ಸಮಾಜದ ಏಳಿಗೆಗೆ ರಾಜಕೀಯಕ್ಕೆ ಬಂದೆ. ಕಾಯಕ ಸಮಾಜ ಉಳಿಸಿಕೊಳ್ಳುತ್ತಾರೆ ಎನ್ನುವ ಕಾರಣಕ್ಕೆ ಬಿಜೆಪಿಗೆ ಬಂದೆ. ಆದರೆ, ಪಕ್ಷದ ಮುಖಂಡರು ಒಂದು ದಿನವೂ ಕಾಯಕ ಸಮಾಜದ ಬಗ್ಗೆ ಮಾತಾಡಿಲ್ಲ. ಬಿಜೆಪಿ ಸರ್ಕಾರವಿದ್ದಾಗ ನಮ್ಮ ಸಮುದಾಯಕ್ಕೆ ಯಾವುದೇ ರೀತಿ ಸ್ಪಂದಿಸಿಲ್ಲ. ನನ್ನನ್ನು ಎಂಎಲ್ಸಿ ಮಾಡಿ ಸುಮ್ಮನಾದರು, ಏನೂ ಜವಾಬ್ದಾರಿ ಕೊಡಲಿಲ್ಲ ಎಂದು ಆರೋಪಿಸಿದರು.
ರಾಜೀನಾಮೆ ಕೊಡುವಂತೆ ನಮ್ಮ ಸಮಾಜದ ಒತ್ತಡವಿತ್ತು. ನನ್ನನ್ನು ನಿರ್ಲಕ್ಷ್ಯ ಮಾಡಿದ್ದಾರೆ, ನಮ್ಮ ಹೋರಾಟಕ್ಕೆ ಬೆಲೆ ಇಲ್ಲವಾಗಿದೆ. ಹೀಗಾಗಿ ನಾನು ಎಂಎಲ್ಸಿ ಸ್ಥಾನಕ್ಕೆ ರಾಜಿನಾಮೆ ಕೊಟ್ಟಿದ್ದೇನೆ ಎಂದು ಕೆ.ಪಿ ನಂಜುಂಡಿ ತಿಳಿಸಿದ್ದಾರೆ.
Key words: KP Nanjundi- resigned –MLC-congress-join