ಕಬ್ಬಿನ ಬೆಳೆ ಕ್ಷೇತ್ರ ಕುಸಿತ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಬಸವಕಲ್ಯಾಣ: ತಾಲ್ಲೂಕಿನಲ್ಲಿ ಸಕ್ಕರೆ ಕಾರ್ಖಾನೆಗಳು ಇಲ್ಲದ್ದರಿಂದ ಕಬ್ಬು ಬೆಳೆ ಕ್ಷೇತ್ರ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಅನ್ಯ ತಾಲ್ಲೂಕಿಗೆ ಹಾಗೂ ಸಮೀಪದ ಮಹಾರಾಷ್ಟ್ರದ ಕಾರ್ಖಾನೆಗಳಿಗೆ ಕಬ್ಬು ಸಾಗಿಸಲು ಹೆಚ್ಚಿನ ಖರ್ಚು ಬರುತ್ತಿದೆ ಹಾಗೂ ಸಮಯಕ್ಕೆ ಹಣ ದೊರಕದ ಕಾರಣ ರೈತರು ಕಬ್ಬು ಬೆಳೆಯದಿರುವ ನಿರ್ಧಾರಕ್ಕೆ ಬಂದಿರುವಂತೆ ಕಾಣುತ್ತಿದೆ.

ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಗೆ ಇಲ್ಲಿನ ಹೆಚ್ಚಿನ ಕಬ್ಬು ಹೋಗುತ್ತಿತ್ತು. ಆದರೆ ಆ ಕಾರ್ಖಾನೆ ಬಂದ್‌ ಆಗಿದೆ. ಬಸವಕಲ್ಯಾಣ ಸಮೀಪದ ಖಾಂಡಸಾರಿ ಸಕ್ಕರೆ ಕಾರ್ಖಾನೆಯೂ ಕಬ್ಬು ನುರಿಸುವುದನ್ನು ನಿಲ್ಲಿಸಿ ಅನೇಕ ವರ್ಷಗಳಾಗಿವೆ.

ಬೆಟಬಾಲ್ಕುಂದಾ, ಜಾನಾಪುರ, ಮಂಠಾಳ, ಚಂಡಕಾಪುರ, ಉಮಾಪುರ, ಮೋರಖಂಡಿ, ತಳಭೋಗ ವ್ಯಾಪ್ತಿಯಲ್ಲಿ ಬೆಲ್ಲ ತಯಾರಿಕೆಯ ಹತ್ತಾರು ಗಾಣಗಳು (ಅಲೆಮನೆ) ಇದ್ದವು. ಕಾರ್ಮಿಕರ ಕೊರತೆಯ ಕಾರಣಕ್ಕೆ ಅವುಗಳೂ ಹಾಳು ಬಿದ್ದಿದ್ದರಿಂದ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದ 2021 ರಲ್ಲಿ ಇದ್ದಂಥ 2383.95 ಹೆಕ್ಟೇರ್ ಕಬ್ಬು ಬೆಳೆ ಕ್ಷೇತ್ರ 2023-24 ರಲ್ಲಿ 1454.16 ಹೆಕ್ಟೇರ್‌ಗೆ ಇಳಿದಿದೆ.

ನದಿಗಳ ನೀರಾವರಿ ಸೌಲಭ್ಯವೂ ಇಲ್ಲ. ಬರೀ ಬಾವಿ ನೀರಾವರಿ ಆಧಾರಿತ ಬೇಸಾಯವಿದೆ. ಆದರೂ ಅನ್ಯ ಬೆಳೆಗಳಿಗೆ ಬೆಲೆ ಇಲ್ಲದಿದ್ದಾಗ ಇಲ್ಲಿ ಕಬ್ಬು ಹೆಚ್ಚಿನ ಪ್ರಮಾಣದಲ್ಲಿತ್ತು. ಕೆಲ ವರ್ಷಗಳಿಂದ ಸೋಯಾಬಿನ್ ಬೆಳೆಯುವುದು ಹೆಚ್ಚಾಗಿದೆ. ಈ ವರ್ಷ ಬಿಳಿಜೋಳ ಸಹ ಹೆಚ್ಚಿಗೆ ಇತ್ತು. ಆದರೆ ಕಬ್ಬು ಕಡಿಮೆ ಇತ್ತು. ಕಾರ್ಖಾನೆಯವರ ನಿರ್ಲಕ್ಷ್ಯದಿಂದ ಇನ್ನೂ ಕೆಲ ಪ್ರಮಾಣದ ಕಬ್ಬು ಜಮೀನಿನಲ್ಲಿಯೇ ಉಳಿದಿದ್ದು, ರೈತರು ಅದನ್ನು ಗಾಣಗಳಿಗೆ ಸಾಗಿಸಿ ಬೆಲ್ಲ ತಯಾರಿಸುತ್ತಿರುವುದು ಕಂಡು ಬಂದಿದೆ.

‘ಕೆಲ ಪ್ರಮಾಣದ ಕಬ್ಬು ಕಾರ್ಖಾನೆಗೆ ಸಾಗಿಸದೆ ಉಳಿದಿರುವ ಕಾರಣ ಗಾಣಕ್ಕೆ ತಂದು ಬೆಲ್ಲ ತಯಾರಿಸುತ್ತಿದ್ದೇನೆ. ಒಂದು ಮುದ್ದೆ ಬೆಲ್ಲ ₹400ಕ್ಕೆ ಮಾರಾಟ ಆಗುತ್ತದೆ. ಎಲ್ಲ ಖರ್ಚು ಹೋಗಿ ₹200 ಉಳಿಯುತ್ತದೆ’ ಎಂದು ಜಾಫರವಾಡಿಯ ರೈತ ಶಾಂತವಿಜಯ ಪಾಟೀಲ ಹೇಳಿದ್ದಾರೆ.

‘ತಾಲ್ಲೂಕಿನಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಮೂರು ದಶಕಗಳಿಂದ ಪ್ರಯತ್ನ ಸಾಗಿದ್ದರೂ ಫಲ ದೊರಕಿಲ್ಲ. ಜನಪ್ರತಿನಿಧಿಗಳು ಸತತವಾಗಿ ಕ್ರಿಯಾಶೀಲರಾದರೆ ಮಾತ್ರ ಇಂಥ ಕೆಲಸ ಸಾಧ್ಯವಾಗುತ್ತದೆ’ ಎಂದು ರೈತ ಮುಖಂಡ ಮಡಿವಾಳಪ್ಪ ಪಾಟೀಲ ಸಸ್ತಾಪುರ ಅಭಿಪ್ರಾಯಪಟ್ಟಿದ್ದಾರೆ.

‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೀದರ್ ಜಿಲ್ಲೆಯಲ್ಲಿಯೇ ಹೆಚ್ಚಿನ ಕಬ್ಬು ಬೆಳೆಯಲಾಗುತ್ತದೆ. ಆ ಹಿರಿಮೆ ಉಳಿಸಿಕೊಂಡು ಹೋಗುವುದಕ್ಕೆ ಸರ್ಕಾರದ ಎಲ್ಲ ರೀತಿಯ ಸಹಾಯ ಅಗತ್ಯ’ ಎಂದು ನಗರ ಯೋಜನಾ ಪ್ರಾಧಿಕಾರದ ಮಾಜಿ ನಿರ್ದೇಶಕ ಜ್ಞಾನೇಶ್ವರ ಮುಳೆ ತಿಳಿಸಿದರು.

ಸಕ್ಕರೆ ಕಾರ್ಖಾನೆ ಸ್ಥಾಪಿಸುವುದಲ್ಲದೆ ಬೆಲ್ಲದ ಗಾಣಗಳಿಗೂ ಸೌಲಭ್ಯ ನೀಡಿದರೆ ಕಬ್ಬು ಬೆಳೆಗಾರರಿಗೆ ಅನುಕೂಲ ಆಗುತ್ತದೆ’ ಎನ್ನುತ್ತಾರೆ ಮಂಠಾಳದ ರೈತ ಜಾಕೀರ್ ಶೇಖ್.

Font Awesome Icons

Leave a Reply

Your email address will not be published. Required fields are marked *