ಗ್ರಾಮಸ್ಥರ ಆಕ್ರೋಶ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಕಾರ್ಕಳ:  ಹೆಬ್ರಿ ಅಡಾಲ್ ಬೆಟ್ಟು ಶಿಶುಮಂದಿರದ ಸಮೀಪ ಇರುವ ಪರಿಸರದಲ್ಲಿ ಹಾದುಹೋದ ಚರಂಡಿಯಲ್ಲಿ ಕೊಳಚೆ ನೀರು ನಿಂತು ದುರ್ನಾಥ ಬೀರುತ್ತಿದ್ದು ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಅಡಾಲ್ ಬೆಟ್ಟು ಪರಿಸರದಲ್ಲಿ ಅನೇಕ ಮನೆಗಳಿದ್ದು ಈ ಭಾಗದಲ್ಲಿ ಮಳೆಗಾಲದಲ್ಲಿ ಮಳೆನೀರು ಹರಿಯುವ ಸಣ್ಣ ಚರಂಡಿ ಇದೆ.

ಹೆಬ್ರಿ ಪಟ್ಟಣದ ಹೋಟೆಲ್ ಗಳಿಂದ, ವಿನು ನಗರದಿಂದ ಕೆಲವು ಮನೆಯವರು ಹಾಗೂ ಸುತ್ತಮುತ್ತಲಿನ ಮನೆಯವರ ತ್ಯಾಜ್ಯ ನೀರನ್ನು ಇದೇ ಚರಂಡಿ ಮೂಲಕ ಬಿಡುತ್ತಿದ್ದು ಅಡಲ್ ಬೆಟ್ಟು ಬಳಿ ಚರಂಡಿ ಬ್ಲಾಕ್ ಆಗಿ ಅಲ್ಲಿಯೇ ನಿಂತು ತ್ಯಾಜ್ಯ ಕೊಳೆತು ದುರ್ನಾಥ ಬೀರುವುದರೊಂದಿಗೆ ಸೊಳ್ಳೆ ಕಾಟದಿಂದ ಮುಕ್ತಿ ದೊರೆಯದಂತಾಗಿದೆ. ಈ ಪರಿಸರದಲ್ಲಿ ಹಲವಾರು ಮಕ್ಕಳು ಶಾಲೆಗೆ ಹೋಗುತ್ತಿದ್ದು ದುರ್ನಾಥ ಹಾಗೂ ಸೊಳ್ಳೆ ಕಾಟದಿಂದ ಅನಾರೋಗ್ಯಕ್ಕೆ ತುತ್ತಾದ ಘಟನೆಗಳಿವೆ.

ಹೆಬ್ರಿ ಪಂಚಾಯತ್ ಗೆ ಮನವಿ :
ತ್ಯಾಜ್ಯ ನೀರು ಹರಿದು ಬಂದು ಈ ಭಾಗದಲ್ಲಿ ನಿಲ್ಲುತ್ತಿದ್ದು ಇದರಿಂದ ಈ ಭಾಗದ ಜನರಿಗೆ ಅನೇಕ ತೊಂದರೆಗಳಾಗುತ್ತಿದೆ ಹಾಗು ಮಾರಣಾಂತಿಕ ಕಾಯಿಲೆಗಳು ಹರಡುವ ಸಾಧ್ಯತೆಗಳಿದ್ದು ತಾವು ಈ ಭಾಗದ ಪ್ರತಿ ಮನೆಯವರಿಗೂ ಇಂಗು ಗುಂಡಿಯನ್ನು ನಿರ್ಮಿಸಿಕೊಳ್ಳಲು ಸೂಚಿಸುವಂತೆ ಹಾಗೂ ವಿನು ನಗರದಿಂದ ಬರುವ ಹಾಗು ಹೋಟೆಲ್ ಗಳಿಂದ ಬರುವ ನೀರನ್ನು ಈ ತೋಡಿಗೆ ಬಿಡದಿರುವಂತೆ ಸೂಚಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಈ ಭಾಗದ ಗ್ರಾಮಸ್ಥರು ಪಂಚಾಯಿತಿಗೆ ಮನವಿ ಸಲ್ಲಿಸಿದ್ದಾರೆ.

ಪಂಚಾಯತ್ ನಿರ್ಲಕ್ಷ: ಈ ಪರಿಸರದಲ್ಲಿ ಹಲವಾರು ವರ್ಷಗಳಿಂದ ಈ ಸಮಸ್ಯೆ ಇದ್ದು ಹಲವಾರು ಬಾರಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಈ ಭಾಗದ ಸದಸ್ಯರು ಹಾಗೂ ಪಿಡಿಓ ಅವರಿಗೆ ಮನವಿ ಸಲ್ಲಿಸಲಾಗಿದ್ದು ಯಾವುದೇ ಪ್ರಯೋಜನವಾಗಿಲ್ಲ. ಪ್ರತಿ ಬಾರಿ ಮುಖದ ಭೇಟಿಯಾಗಿ ಹೇಳಿದರು ಕೂಡ ನೋಡುವ ಎಂದು ಉತ್ತರ ನೀಡಿ ನಿರ್ಲಕ್ಷ ಮಾಡಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಬೇರೆ ಯಾರಿಗೂ ಸಮಸ್ಯೆ ಆಗಬಾರದು ಎಂದು ನಮ್ಮ ಮನೆಯ ಕೊಳಚೆ ನೀರನ್ನು ಮನೆಯ ಪರಿಸರದಲ್ಲಿ ಇಂಗು ಗುಂಡಿ ನಿರ್ಮಾಣ ಮಾಡಿ ಸಮಸ್ಯೆ ಬಗೆಹರಿಸಲಾಗಿದೆ. ಆದರೆ ಮನೆಯ ಪಕ್ಕದಲ್ಲಿ ಕಾಂಪೌಂಡ್ ತಾಗಿ ಬೇರೆಯವರ ಕೊಳಚಿ ನೀರು ಬಂದು ನಮ್ಮ ಮನೆಯ ಪಕ್ಕದಲ್ಲಿ ನಿಂತು ದುರ್ನಾಥ ಬೀರುತ್ತಿದ್ದು ದಿನನಿತ್ಯ ಸೊಳ್ಳೆ ಕಾಟದಿಂದ ವಾಸಿಸುವುದು ಕಷ್ಟವಾಗಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಹಲವಾರು ಬಾರಿ ವಿನಂತಿಸಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಈ ಸಮಸ್ಯೆಗೆ ಶೀಘ್ರ ಪರಿಹಾರ ದೊರಕಿಸುವಂತೆ ಕೇಳಿಕೊಳ್ಳುತ್ತೇನೆ ಎಂದು ಅಡಾಲ್ ಬೆಟ್ಟು ನಿವಾಸಿ ಸೋನಿ ಶೆಟ್ಟಿ ಎವರು ಕೇಳಿಕೊಂಡಿದ್ದಾರೆ.

ಆರೋಗ್ಯ ಇಲಾಖೆ ಗಮನ ಹರಿಸಲಿ:
ಕೊಳಚೆ ನೀರು ನಿಂತು ಸೊಳ್ಳೆಗಳು ಉತ್ಪತ್ತಿಕೊಂಡು ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದ್ದು ಈ ಬಗ್ಗೆ ಆರೋಗ್ಯ ಇಲಾಖೆ ಕೂಡಲೇ ಎಚ್ಚೆತ್ತು ಕೊಂಡು ಸಂಬಂಧ ಪಟ್ಟವರಿಗೆ ತಿಳಿಸಿ, ಸಮಸ್ಯೆ ಬಗೆಹರಿಸುವಂತೆ ಈ ಭಾಗದ ಸ್ಥಳೀಯರು ಒತ್ತಾಯಿಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *