ಜನ ಜಾನುವಾರುಗಳಿಗೆ ನೀರು, ಮೇವು ವಿತರಣೆ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಚಾಮರಾಜನಗರ: ಜಿಲ್ಲೆಯಲ್ಲಿ ಬರ ನಿರ್ವಹಣೆಗೆ ಸಂಬಂಧಿಸಿದಂತೆ ಜನ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಜಾನುವಾರುಗಳ  ಮೇವಿಗೆ ಯಾವುದೇ ಕೊರತೆಯಾಗದಂತೆ ಜಿಲ್ಲಾಡಳಿತ ವತಿಯಿಂದ ಕ್ರಮವಹಿಸಲಾಗಿದೆ ಎಂದು  ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಶಿಲ್ಪಾ ನಾಗ್ ಅವರು ತಿಳಿಸಿದ್ದಾರೆ.

ಗುಂಡ್ಲುಪೇಟೆ, ಹನೂರು ಮತ್ತು ಚಾಮರಾಜನಗರ ತಾಲ್ಲೂಕುಗಳನ್ನು ತೀವ್ರ ಬರಪೀಡಿತ ತಾಲ್ಲೂಕುಗಳೆಂದು ಹಾಗೂ  ಕೊಳ್ಳೇಗಾಲ, ಯಳಂದೂರು ತಾಲ್ಲೂಕುಗಳನ್ನು ಸಾಧಾರಣ ಬರಪೀಡಿತ ತಾಲ್ಲೂಕುಗಳೆಂದು ಸರ್ಕಾರವು ಈಗಾಗಲೇ ಘೋಷಿಸಿದ್ದು, ಬರ ನಿರ್ವಹಣೆ ಸಂದರ್ಭದಲ್ಲಿ ಅನೇಕ ತುರ್ತು ಕ್ರಮಗಳನ್ನು ಜಿಲ್ಲಾಡಳಿತದಿಂದ ಕೈಗೊಳ್ಳಲಾಗಿರುವ ನಿಟ್ಟಿನಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಸಾರ್ವಜನಿಕರಿಂದ ಬರುವ ದೂರುಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ.

ಜಿಲ್ಲೆಯಲ್ಲಿ ಬರ ನಿರ್ವಹಣೆಗಾಗಿ ಇದುವರೆಗೆ 16 ಬಾರಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಿ  ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಬರ ನಿರ್ವಹಣೆ ಕುರಿತು ಚರ್ಚಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನಿರ್ದೇಶನಗಳನ್ನು ನೀಡಲಾಗಿದೆ. ಈ ಸಂಬಂಧ ಪ್ರತೀ 15 ದಿನಗಳಿಗೊಮ್ಮೆ ಸಭೆ ನಡೆಸಿ ಜನ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಕೊರತೆ ಉಂಟಾಗದಂತೆ ಅತ್ಯಗತ್ಯವಾಗಿರುವ ತುರ್ತು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ತಾಲ್ಲೂಕು ಮಟ್ಟದಲ್ಲೂ ಸಂಬಂಧಪಟ್ಟ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ ಪೋರ್ಸ್ ಸಮಿತಿ  ರಚಿಸುವುದಲ್ಲದೇ ಬರ ನಿರ್ವಹಣೆ ಕುರಿತು ಸಭೆ ನಡೆಸಿ ಆಯಾ ತಾಲ್ಲೂಕುಗಳ ಬರ ನಿರ್ವಹಣೆಗೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಿ ಅನುಷ್ಟಾನಗೊಳಿಸಲಾಗುತ್ತಿದೆ.

ಜಿಲ್ಲೆಯ ಬರ ನಿರ್ವಹಣೆಗೆ ಸಂಬಂಧಪಟ್ಟಂತೆ ಗ್ರಾಮೀಣ ಭಾಗದ ಸಾರ್ವಜನಿಕರ ಕುಡಿಯುವ ನೀರಿನ ನಿರ್ವಹಣೆಗಾಗಿ  2024ರ ಫೆಬ್ರವರಿ ಮಾಹೆಯಲ್ಲಿ ಜಿಲ್ಲೆಯಾದ್ಯಂತ ಸರ್ವೆ ಕಾರ್ಯ ನಡೆಸಿ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಂಬಂಧ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ (ಚಾಮರಾಜನಗರ-48, ಗುಂಡ್ಲುಪೇಟೆ-17, ಹನೂರು-15, ಕೊಳ್ಳೇಗಾಲ-20, ಯಳಂದೂರು-11) ಹಾಗೂ ತುರ್ತು ಸಂದರ್ಭದಲ್ಲಿ ಕುಡಿಯುವ ನೀರಿನ ಕೊರತೆಯನ್ನು ನಿವಾರಿಸಲು 69 ಖಾಸಗಿ ಹೆಚ್ಚುವರಿ ಇಳುವರಿ ಕೊಡುವ ಬೋರ್ ವೆಲ್‌ಗಳನ್ನು ಗುರುತಿಸಿ (ಚಾಮರಾಜನಗರ-17, ಗುಂಡ್ಲುಪೇಟೆ-16, ಕೊಳ್ಳೇಗಾಲ-11, ಯಳಂದೂರು 11 ಹಾಗೂ ಹನೂರು-14) ಖಾಸಗಿ ಬೋರ್ವೆಲ್‌ಗಳ ಮಾಲೀಕರಿಂದ ಈಗಾಗಲೇ ಒಪ್ಪಂದ ಪತ್ರಗಳನ್ನು ಪಡೆಯಲಾಗಿದೆ. ಅವಶ್ಯವಿರುವ ಕಡೆ ಈಗಾಗಲೇ ಖಾಸಗಿ ಬೋರ್‌ವೆಲ್‌ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಜಿಲ್ಲಾ ಕೇಂದ್ರದಲ್ಲಿ ಸಹಾಯವಾಣಿ ಕೇಂದ್ರವನ್ನು ತೆರೆದು  ಸಾರ್ವಜನಿಕರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವುಗಳ ಪೂರೈಕೆಗೆ ಸಂಬಂಧಪಟ್ಟಂತೆ ಸಂಪರ್ಕಿಸಲು ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *