ಜಿಲ್ಲಾಡಳಿತ ಬೀದರ್ ವತಿಯಿಂದ ಬಸವಣ್ಣ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ಬೀದರ್ : ಬಸವಣ್ಣನವರ ವಿಚಾರಗಳು ಕೇವಲ ನಮ್ಮ ರಾಜ್ಯಕ್ಕೆ ಮಾತ್ರವಲ್ಲ ಅವು ಇಡೀ ನಮ್ಮ ರಾಷ್ಟ್ರದಾದ್ಯಂತ ಇಂದು ಪ್ರಸ್ತುತ ಇವೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಹೇಳಿದರು.

ಅವರು ಶುಕ್ರವಾರ ಜಿಲ್ಲಾಡಳಿತ ಬೀದರ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಅಂಗವಾಗಿ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿದ ನಂತರ ಮಾತನಾಡಿದರು.

ಅಂದಿನ ಸಮಾಜದಲ್ಲಿ ಬೇರೂರಿದ್ದ ಅಂಧ ಶ್ರದ್ದೆಗಳನ್ನು ಹೋಗಲಾಡಿಸಲು ಬಸವಣ್ಣನವರು ತಮ್ಮ ವಚನಗಳ ಮೂಲಕ ಸಾಮಾಜಿಕ ಬದಲಾವಣೆಯನ್ನು ತಂದರು. ಬಸವಣ್ಣನವರ ಕರ್ಮಭೂಮಿಯಲ್ಲಿ ನಾವು ಜನಿಸಿದ್ದೆವೆ ಎಂದು ಹೇಳಲು ನಮಗೆ ಸಂತೋಷ ಅನಿಸುತ್ತದೆ. ಎಲ್ಲರಿಗೂ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿಯ ಶುಭಾಶಯಗಳು ಎಂದು ಹೇಳಿದರು.

ಶ್ರೀಶೈಲ ಮಲ್ಲಿಕಾರ್ಜುನನ ಪರಮ ಭಕ್ತೆಯಾಗಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರು ಬಸವ ಮಾರ್ಗವನ್ನು ಅನುಸರಿಸುವ ಮೂಲಕ ಹಲವಾರು ವಚನಗಳ ಮೂಲಕ ಹೊಸ- ಆಚಾರ ಮತ್ತು ವಿಚಾರಗಳನ್ನು ಸಮಾಜಕ್ಕೆ ನೀಡಿದ್ದರು. ಎಲ್ಲಾ ಶರಣ ಸಂತರು ಸಮಾಜದಲ್ಲಿ ಬೇರೂರಿದ್ದ ಅಂಧ ಶ್ರದ್ದೆಗಳನ್ನು ಹೋಗಲಾಡಿಸಲು ಶ್ರಮಿಸಿದ್ದಾರೆ. ಎಲ್ಲರಿಗೂ ಈ ಎರಡು ಜಯಂತಿಯ ಶುಭಾಶಯಗಳು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಅವರು ಮಾತನಾಡಿ, ಬಸವಣ್ಣನವರು ಆಧ್ಯಾತ್ಮಿಕ ಸಂತ ಮಾತ್ರವಲ್ಲದೆ ಅವರೊಬ್ಬ ಒಳ್ಳೆಯ ಆಡಳಿತಗಾರರಾಗಿದ್ದರು. ಅವರ 770 ಅಮರ ಗಣಂಗಳ ವಚನಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ನಾವು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಪೂಜೆ ಸಲ್ಲಿಸಿದ ನಂತರ ಬೀದರ ನಗರದಲ್ಲಿರುವ ಬಸವಣ್ಣನವರ ಪುತ್ಥಳಿಗೆ ತೆರಳಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಚುನಾವಣಾಧಿಕಾರಿಗಳು ಬಸವಣ್ಣನವರ ಪುತ್ಥಳಿಗೆ ಹೂಮಾಲೆಯನ್ನು ಹಾಕಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್. ಎಲ್ ಸೇರಿದಂತೆ ಇತರೆ ಗಣ್ಯರು ಬಸವಣ್ಣನವರ ಪುತ್ಥಳಿಗೆ ಹೂಮಾಲೆ ಹಾಕುವ ಮೂಲಕ ಗೌರವ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಸವ ಜಯಂತಿ ಉತ್ಸವ ಸಮಿತಿ ಗೌರವ ಅಧ್ಯಕ್ಷರಾದ ರಾಜೇಂದ್ರಕುಮಾರ ಗಂಧಗೆ, ರಾಷ್ಟ್ರೀಯ ಬಸವದಳದ ಅಧ್ಯಕ್ಷರಾದ ಸೋಮಶೇಖರ್ ಪಾಟೀಲ, ಸಚಿವರಾದ ರಹೀಂಖಾನ, ಬಸವ ಕೇಂದ್ರ ಅಧ್ಯಕ್ಷರಾದ ಶರಣಪ್ಪ ಮಿಠಾರೆ, ನಗರಸಭೆ ಅಧ್ಯಕ್ಷರಾದ ಮೊಹ್ಮದ್ ಗೌಸ್, ಲಿಂಗಾಯತ ಮಹಾಸಭಾ ಅಧ್ಯಕ್ಷರಾದ ಕುಶಾಲ ಪಾಟೀಲ ಕಾಶಂಪೂರ, ಶಿವಶರಣಪ್ಪ ವಾಲಿ, ಬಸವರಾಜ ಧನ್ನೂರ, ಸುರೇಶ ಚನ್ನಶೆಟ್ಟಿ, ರಜನೀಶ ವಾಲಿ, ಅಶೋಕ ಕರಂಜಿ, ವಿರೂಪಾಕ್ಷ ಗಾದಗಿ, ವಿಜಯಕುಮಾರ ಸೋನಾರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

Font Awesome Icons

Leave a Reply

Your email address will not be published. Required fields are marked *