ದೇವರ ಮಂಟಪೋತ್ಸವದಲ್ಲಿ ನೀರಿಗೆ ಬಿದ್ದು ಯುವಕ ಸಾವು

ಎಚ್.ಡಿ.ಕೋಟೆ: ಪಶ್ರೀ ಲಕ್ಷ್ಮಿವರದರಾಜಸ್ವಾಮಿ ಬ್ರಹ್ಮರಥೋತ್ಸವ ಅಂಗವಾಗಿ ನಡೆದ ಶ್ರೀವರದರಾಜ ದೇವರ ಮಂಟಪೋತ್ಸವದ ಅವಭೃತ ಸ್ನಾನ ಹಾಗೂ ಮಹಾಮಂಗಳಾರತಿ ಸೇವೆ ವೇಳೆ ಯುವಕನೊಬ್ಬದಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಪುರಸಭೆ ವ್ಯಾಪ್ತಿಯ ಶಾಂತಿಪುರ ಗ್ರಾಮದ ಹೆಬ್ಬಳ್ಳ ಜಲಾಶಯದಲ್ಲಿ ಸೋಮವಾರ ನಡೆದಿದೆ.

ಮೈಸೂರು ತಾಲೂಕು ಜಯಪುರ ಗ್ರಾಮದ ನಿವಾಸಿ ರಂಗರಾಜು ಎಂಬುವರ ಪುತ್ರ ಸುನಿಲ್ ಅಲಿಯಾಸ್ ಸುನಿ(19) ಮೃತ ದುರ್ದೈವಿ. ಈತ ಎಚ್.ಡಿ.ಕೋಟೆ ಪಟ್ಟಣದ ನಾಯಕರ ಬೀದಿಯಲ್ಲಿರುವ ತಮ್ಮ ಅಜ್ಜಿಯ ಮನೆಗೆ ಬಂದು ಉಳಿದುಕೊಂಡಿದ್ದನು. ಅಲ್ಲದೆ ಪಟ್ಟಣದ ಶ್ರೀ ಲಕ್ಷ್ಮಿವರದರಾಜಸ್ವಾಮಿ ದೇವಾಲಯದಲ್ಲಿ ಬ್ರಹ್ಮ ರಥೋತ್ಸವದ ಅಂಗವಾಗಿ ಕಳೆದೊಂದು ವಾರದಿಂದ ದೇವಸ್ಥಾನದಲ್ಲಿ ನಡೆಯುತ್ತಿದ್ದ ಪೂಜಾ ಕೈಂಕರ್ಯಗಳಲ್ಲಿ ದೇವಸ್ಥಾನದ ಟ್ರಸ್ಟ್‌ನವರಿಗೆ ಸಣ್ಣ ಪುಟ್ಟ ಸಹಾಯ ಮಾಡಿಕೊಂಡಿದ್ದನು ಎಂದು ಹೇಳಲಾಗುತ್ತಿದೆ.

ಸೋಮವಾರ ಪಟ್ಟಣ ಸಮೀಪದ ಹೆಬ್ಬಳ್ಳ ಜಲಾಶಯದಲ್ಲಿ ಸ್ವಾಮಿಯವರ ಮಂಟಪೋತ್ಸವ ಹಾಗೂ ಅವಭೃತ ಸ್ನಾನದ ವೇಳೆ ತೆಪ್ಪದಿಂದ ಕಾಲು ಜಾರಿ ಬಿದ್ದು ಈಜು ಬಾರದ ಕಾರಣ ಜಲಾಶಯದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ, ಈ ಸಂಬಂಧ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಯಕ ಸಮಾಜದ ಯುವಕ ದೇವರ ಮಂಟಪೋತ್ಸವದ ವೇಳೆ ತೆಪ್ಪದಿಂದ ಬಿದ್ದು ಸಾವನ್ನಪ್ಪಿದ ವಿಷಯ ತಿಳಿಯುತ್ತಿದ್ದಂತೆಯೇ ನಾಯಕ ಸಮಾಜದ ಮುಖಂಡರು, ಜನರು ಎಚ್.ಡಿ.ಕೋಟೆ ಪೊಲೀಸ್ ಠಾಣೆ ಬಳಿ ಜಮಾಯಿಸಿ ಯುವಕ ಸಾವಿಗೆ ದೇವಸ್ಥಾನದ ಟ್ರಸ್ಟ್‌ನವರ ನಿರ್ಲಕ್ಷ್ಯವೇ ಕಾರಣ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಈ ವೇಳೆ ನಾಯಕ ಸಮಾಜದ ಕೆಲ ಹಿರಿಯ ಮುಖಂಡರು ಸಭೆ ನಡೆಸಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಮೃತ ಯುವಕ ಸುನಿಲ್ ಕುಟುಂಬಕ್ಕೆ ದೇವಸ್ಥಾನದ ಟ್ರಸ್ಟ್‌ನವರು 6 ಲಕ್ಷ ರೂ ಪರಿಹಾರ ನೀಡುವಂತೆ ತೀರ್ಮಾನ ಮಾಡಲಾಗಿದೆ ಎಂದು ಹೇಳಲಾಗಿದೆ.

ಮೃತ ಯುವಕ ಸುನಿಲ್ ತಾಯಿ ಕೂಡ ಕಳೆದ ಒಂದು ತಿಂಗಳ ಹಿಂದೆ ನಿಧನರಾಗಿದ್ದ ಕಾರಣ ಎಚ್.ಡಿ.ಕೋಟೆ ಪಟ್ಟಣದಲ್ಲಿರುವ ತಮ್ಮ ಅಜ್ಜಿ ಮನೆಗೆ ಬಂದು ಅಜ್ಜಿ ಜೊತೆ ವಾಸವಿದ್ದನು. ಅಗ್ನಿಶಾಮಕ ದಳದ ಸಿಬ್ಬಂದಿ ಹೆಬ್ಬಳ್ಳ ಜಲಾಶಯದಲ್ಲಿ ಹುಡುಕಾಟ ನಡೆಸಿ ಮೃತದೇಹವನ್ನು ಹೊರತೆಗೆದ ನಂತರ ಮರಣೋತ್ತರ ಪರೀಕ್ಷೆಗಾಗಿ ಎಚ್.ಡಿ.ಕೋಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ಇತ್ಯರ್ಥಕ್ಕೆ ಸಂಜೆಯಾದ ಕಾರಣ ಮಂಗಳವಾರ ಯುವಕನ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಹಸ್ತಾಂತರ ಮಾಡಲಾಗುತ್ತದೆ.

Font Awesome Icons

Leave a Reply

Your email address will not be published. Required fields are marked *