ನವೀನ್‌  ನಾಯಕ್ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಕಾರ್ಕಳ: ಪರಶುರಾಮ ಮೂರ್ತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಕಾಮಗಾರಿ ನಡೆಸಲು ಹೈಕೋರ್ಟ್ ಅನುಮತಿ ನೀಡಿದ್ದು, ಕಾಮಗಾರಿ ಆರಂಭಕ್ಕೆ ಜಿಲ್ಲಾಡಳಿತ ತಡೆಯೊಡ್ಡುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ನವೀನ್ ನಾಯಕ್ ಆರೋಪಿಸಿದ್ದಾರೆ.

ಅವರು ಕಾರ್ಕಳದ ಪ್ರಕಾಶ್ ಹೊಟೇಲ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ,ಪರಶುರಾಮ ಮೂರ್ತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಮೂರ್ತಿಯ ಉಳಿದ ಭಾಗವನ್ನು ತೆರವುಗೊಳಿಸಿ ಮೂರ್ತಿಯನ್ನು ಮರು ಸ್ಥಾಪಿಸಲು ಗುತ್ತಿಗೆದಾರ ಕೃಷ್ಣ ನಾಯಕ್ ಅವರು ಹೈಕೋರ್ಟ್’ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ 2 ವಾರದೊಳಗೆ ಮೂರ್ತಿ ತೆರವುಗೊಳಿಸಿ 4 ತಿಂಗಳೊಳಗಾಗಿ ಪರಶುರಾಮ ಮೂರ್ತಿ ಮರುಸ್ಥಾಪಿಸಲು ಗಡುವು‌ ವಿಧಿಸಿ ಅನುಮತಿ ನೀಡಿದೆ. ಆದರೆ ನ್ಯಾಯಾಲಯದ ಆದೇಶಕ್ಕೆ ಬೆಲೆ ನೀಡದೇ ಕೃಷ್ಣ ನಾಯಕ್ ಅವರು ಮೂರ್ತಿ ತೆರವು ಕಾಮಗಾರಿ ಆರಂಭಿಸಲು ಮುಂದಾದಾಗ ರಸ್ತೆಗೆ ಮಣ್ಣು ಸುರಿಯುವ ಹೇಯ ಕೃತ್ಯ ಮಾಡಿದ ಕಾಂಗ್ರೆಸ್ ಕೇವಲ ರಸ್ತೆಗೆ ಮಣ್ಣು ಸುರಿದಿಲ್ಲ ಬದಲಾಗಿ ಕಾರ್ಕಳದ ಸಮಗ್ರ ಅಭಿವೃದ್ಧಿಗೆ ಮಣ್ಣು ಹಾಕಿದೆ ಎಂದು ನವೀನ್ ನಾಯಕ್ ಆರೋಪಿಸಿದ್ದಾರೆ.

ಜಿಲ್ಲಾಧಿಕಾರಿಯವರಾಗಿರಲಿ ಅಥವಾ ಪೊಲೀಸ್‌ ವರಿಷ್ಟಾಧಿಕಾರಿಯವರಾಗಿರಲಿ ಸರಕಾರದ ಕೈಗೊಂಬೆಯಾಗಿ ಕೆಲಸ ಮಾಡಬಾರದು. ಹೈಕೋರ್ಟ್‌ ಆದೇಶ ಉಲ್ಲಂಘಿಸಿರುವುದು ಅಕ್ಷಮ್ಯ ಅಪರಾಧ. ಮೌಖಿಕ ಆದೇಶದ ಮೂಲಕ ಭದ್ರತೆಯನ್ನು ಹಿಂಪಡೆದಿದ್ದೀರಿ. ಇದು ನ್ಯಾಯಾಂಗ ನಿಂದನೆ ಯಾಗುತ್ತದೆ ಎಂದರು.

ಕಳೆದ ಒಂದು ವರ್ಷದಿಂದ ಈಚೆಗೆ ಪರಶುರಾಮ ಥೀಂ ಪಾರ್ಕ್‌ ಬಗ್ಗೆ ಸಾಕಷ್ಟು ಅಪವಾದಗಳು ಬಂದಿದೆ. ಪರಶುರಾಂ ಥೀಂ ಪಾರ್ಕ್‌ ಉಧ್ಘಾಟನೆಗೊಂಡ ಸಂಧರ್ಭದಲ್ಲೇ ಮೂರ್ತಿಯ ಮರುವಿನ್ಯಾಸ ಮಾಡಬೇಕೆಂದು ಹೇಳಿದ್ದರು. ಮೂರ್ತಿಯ ಮರುವಿನ್ಯಾಸ ಹಾಗೂ ಬಲಪಡಿಸುವ ಕುರಿತು ಕಳೆದ ಸೆಪ್ಟೆಂಬರ್26 ರಂದು ಕೃಷ್ಣ ನಾಯ್ಕರವರು ಜಿಲ್ಲಾಧಿಕಾರಿಯವರಲ್ಲಿ ಅನುಮತಿಯನ್ನು ಕೇಳಿದ್ದರು.ಈ ಮನವಿಯ ಮೇರೆಗೆ ಅ.3 ರಂದು ಜಿಲ್ಲಾಧಿಕಾರಿಗಳು ಮೂರ್ತಿಯ ಬಲವರ್ಧನೆ ಹಾಗೂ ವಿನ್ಯಾಸದಲ್ಲಿ ಮಾರ್ಪಾಡು ಮಾಡುವ ಬಗ್ಗೆ ಅನುಮೋದನೆ ನೀಡಿದ್ದರು.ಇದಲ್ಲದೇ
ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಉಡುಪಿ ಜಿಲ್ಲೆಗೆ ಭೇಟಿ ನೀಡಿದ ಸಮಯದಲ್ಲಿ ಸಾರ್ವಜನಿಕರ ಹಾಗೂ ಪ್ರವಾಸಿಗರ ಹಿತದೃಷ್ಟಿಯಿಂದ ಮೂರ್ತಿ ಮಾರ್ಪಾಡು ಮಾಡಿ ಬಲಪಡಿಸುವಂತೆ ಆದೇಶಿಸಿದ್ದಾರೆ.ಸಚಿವರ ಸೂಚನೆ ಮೇರೆಗೆ ಅ. 7 ರಂದು ಉಡುಪಿಯ ನಿರ್ಮಿತಿ ಕೇಂದ್ರದ ಎರಡು ತಿಂಗಳ ಒಳಗಾಗಿ ಕಾಮಗಾರಿ ಮುಗಿಸಿಕೊಡುವಂತೆ ಕೃಷ್ಣ ನಾಯ್ಕ ರವರಿಗೆ ಸೂಚನೆ ನೀಡಿದ್ದರು.

ಇದಾದ ಬಳಿಕ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನವರು ಬೇರೆ ಬೇರೆ ಸುಳ್ಳುಗಳನ್ನು ಹೇಳಿಕೊಂಡು ಹೋರಾಟಗಳನ್ನು ಮಾಡಿದ್ದಾರೆ.ಜಿಲ್ಲಾಡಳಿತದ ಆದೇಶದ ಮೇರೆಗೆ ಮೂರ್ತಿಯನ್ನು ತೆರವುಗೊಳಿಸುವ ಕಾಮಗಾರಿಯನ್ನು ಆರಂಭಿಸಿದ್ದರು.ಅದಕ್ಕೆ ತಡೆಯೊಡ್ಡಿ ಕಾಮಗಾರಿ ನಡೆಯದಂತೆ ಮಾಡಿದ ಕಾರ್ಕಳದ ಕಾಂಗ್ರೆಸ್‌ ನವರಿಗೆ ಇಲ್ಲಿನ ಅಭಿವೃದ್ದಿ ಸಹಿಸಲು ಆಗುವುದಿಲ್ಲ. ಪ್ರವಾಸಿ ತಾಣವಾಗಿ ಮಾರ್ಪಾಡಾದ ಬಳಿಕ ರಾಜ್ಯದ ಬೇರೆ ಭಾಗಗಳಿಂದ ಜನರು ಬರುವುದನ್ನು ಸಹಿಸಲು ಆಗದೇ, ಯೋಜನೆಯನ್ನು ಮೊಟಕುಗೊಳಿಸಬೇಕು ಎಂಬ ಒಂದೇ ಉದ್ದೇಶದಿಂದ ನಿರಂತರವಾಗಿ ಅಡ್ಡಗಾಲು ಹಾಕುತ್ತಿದೆ.

ಜಿಲ್ಲಾಧಿಕಾರಿಯವರು ನಿರ್ಬಂಧಿತ ಪ್ರದೇಶ ಎಂದು ಆದೇಶ ಹೊರಡಿಸಿದ್ದರೂ ಸಹ ಮೇಲೆ ಹೋಗಿ ಅಲ್ಲಿಗೆ ಹೋಗಿ ಇದು ಕಂಚಿನ ಮೂರ್ತಿ ಅಲ್ಲ, ಫೈಬರ್‌ ಮೂರ್ತಿ, ಪ್ಲಾಸ್ಟಿಕ್‌ ಮೂರ್ತಿ, ಎಂದೆಲ್ಲಾ ಸುಳ್ಳು ಕಥೆ ಕಟ್ಟಿದ್ದಾರೆ. ನಿರ್ಬಂಧಿತ ಪ್ರದೇಶದ ಒಳಗೆ ಹೋದರೂ ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಜಿಲ್ಲಾಡಳಿತ ಕ್ರಮ ಕೈಗೊಂಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ‌

ಮುಂದಿನ ವಿಧಾನಸಭೆಯಲ್ಲಿ ಕಾಂಗ್ರೆಸ್‌ ನವರಿಗೆ ಹೇಳಿಕೊಳ್ಳಲು ಯಾವುದೇ ವಿಚಾರ ಇಲ್ಲ. ಈ ವಿಚಾರವನ್ನು ಜೀವಂತವಾಗಿಟ್ಟು ಇನ್ನು ನಾಲ್ಕು ವರ್ಷದಲ್ಲಿ ಪರಶುರಾಮನ ವಿವಾದ ಮುಕ್ತಾಯಗೊಳಿಸಬಾರದು ಎನ್ನುವುದು ಇವರ ಉದ್ದೇಶವಾಗಿದೆ. ಹಿಂದಿನ ಬಿಜೆಪಿ ಸರಕಾರ ಇರುವಾಗ 14 ಕೋಟಿ ಹಣವನ್ನು ಪ್ರವಾಸೋದ್ಯಮ ಇಲಾಖೆ ವತಿಯಿಂದ ಮಂಜೂರು ಮಾಡಿದ್ದು ಈವರೆಗೆ 4.50 ಕೋಟಿ ಹಣ ಮಾತ್ರ ಮಂಜೂರಾಗಿದೆ. ಕಾಮಗಾರಿ ಮುಗಿಸಲು ಬಾಕಿ ಇರುವ ಹಣವನ್ನು ಬಿಡುಗಡೆ ಮಾಡಿಸಿ. ಅದುಬಿಟ್ಟು ಚಿಲ್ಲರೆ ರಾಜಕೀಯ ಮಾಡಬೇಡಿ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು

ಪರಶುರಾಮ ಮೂರ್ತಿ ಕಂಚಿನ ಮೂರ್ತಿಯೇ,ಕಾಂಗ್ರೆಸ್ ನ ಅತೃಪ್ತ ಆತ್ಮಗಳು ಅದನ್ನು ಫೈಬರ್ ಮೂರ್ತಿ ಎನ್ನುತ್ತಾರೆ. ರಾಜ್ಯದಲ್ಲಿ ನಿಮ್ಮದೇ ಸರ್ಕಾರವಿದೆ, ಸಿಐಡಿ ತನಿಖೆಗೆ ಆದೇಶಿಸಲಾಗಿದೆ ಎಂದು ಸುಳ್ಳು ಹೇಳಿಕೊಂಡು ಯಾಕೆ ಈವರೆಗೂ ಸಿಐಡಿ ತನಿಖೆಗೆ ನೀಡಿಲ್ಲ? ಇಲಾಖೆ ತಪ್ಪು ಮಾಡಿದ್ದರೆ ಶಿಕ್ಷೆ ನೀಡಲಿ. ಮುಂದಿನ ಚುನಾವಣೆಯವರೆಗೆ ಬೇರೆ ವಿಷಯ ಇರದ ಕಾರಣದಿಂದ ಈ ವಿಷಯ ಜೀವಂತವಾಗಿರಿಸಲು ಕಾಂಗ್ರೆಸ್ ನ ತಂತ್ರಗಾರಿಕೆಯಾಗಿದೆ ಎಂದು ನವೀನ್ ನಾಯಕ್ ಆರೋಪಿಸಿದರು. ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಮುಖಂಡರಾದ ಮಣಿರಾಜ ಶೆಟ್ಟಿ, ರವೀಂದ್ರ ಮೊಯ್ಲಿ, ಸತೀಶ್ ಪೂಜಾರಿ ಬೋಳ, ಸುರೇಶ್ ಶೆಟ್ಟಿ ಶಿವಪುರ ಉಪಸ್ಥಿತರಿದ್ದರು.

Font Awesome Icons

Leave a Reply

Your email address will not be published. Required fields are marked *