ನಿಷ್ಪಕ್ಷಪಾತ ತನಿಖೆಗೆ ಹನೀಫ್ ಒತ್ತಾಯ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಶನಿವಾರಸಂತೆ: ಕಳೆದ ಚುನಾವಣಾ ದಿನದಂದು ಕ್ಷುಲ್ಲಕ ವಿಚಾರವಾಗಿ ಎರಡು ರಾಜಕೀಯ ಪಕ್ಷಗಳ ನಡುವೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಿಷ್ಪಕ್ಷಪಾತವಾದ ತನಿಖೆ ನಡೆಸಿ ಸತ್ಯಂಶವನ್ನು ಹೊರತೆಗೆಯಬೇಕು. ಅಲ್ಲದೆ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾದ ಅಕ್ಮಲ್ ಮತ್ತು ಪಕ್ಷದ ಮುಖಂಡರಾದ ಗಂಗಾಧರ್ ಅವರ ವಿರುದ್ಧ ದಾಖಲಿಸಲಾಗಿರುವ ಸುಳ್ಳು ದೂರನ್ನು ಪೊಲೀಸರು ಕೂಡಲೇ ರದ್ದುಪಡಿಸಬೇಕು ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾದ ಪಿ.ಎ. ಹನೀಫ್ ಅವರು ಒತ್ತಾಯಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಪದಾಧಿಕಾರಿಗಳೊಂದಿಗೆ ಶನಿವಾರಸಂತೆಯ ಗುಂಡೂರಾವ್ ಬಡಾವಣೆಯಲ್ಲಿರುವ ಅಕ್ಮಲ್ ಅವರ ನಿವಾಸಕ್ಕೆ ತೆರಳಿ ಅವರಿಗೆ ಧೈರ್ಯ ತುಂಬಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹನೀಫ್, ಶನಿವಾರಸಂತೆಯ ಮತಗಟ್ಟೆ ಬಳಿ ನಡೆದ ಈ ಹಲ್ಲೆ ಪ್ರಕರಣ ವ್ಯವಸ್ಥಿತ ಸಂಚಿನ ಒಂದು ಭಾಗವಾಗಿದೆ. ಮತದಾನದಂದು ಅಹಿತಕರ ಘಟನೆ ನಡೆಸಿ ಅದನ್ನು ಕಾಂಗ್ರೆಸ್ ಕಾರ್ಯಕರ್ತರ ತಲೆ ಮೇಲೆ ಕಟ್ಟಿ ಪಕ್ಷಕ್ಕೆ ಮಸಿ ಬಳಿಯುವ ಷಡ್ಯಂತ್ರವನ್ನು ಸ್ಥಳೀಯ ಬಿಜೆಪಿ ಮುಖಂಡರ ನೇತೃತ್ವದಲ್ಲಿ ರೂಪಿಸಲಾಗಿತ್ತು ಎಂದು ಇದೀಗ ತಿಳಿದು ಬಂದಿದೆ. ಆದ್ದರಿಂದ ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುವಂತೆ ಆಗ್ರಹಿಸಿದರು.

ಚುನಾವಣೆ ಪ್ರಕ್ರಿಯೆ ಬಹುತೇಕ ಪೂರ್ಣ ಗೊಳ್ಳುತ್ತಿದ್ದಂತೆ ಮತಗಟ್ಟೆ ಬಳಿ ಬಂದ ಬಿಜೆಪಿ ಕಾರ್ಯಕರ್ತರು ಅವಾಚ್ಯ ಶಬ್ದಗಳಿಂದ ಕಾಂಗ್ರೆಸ್ ಕಾರ್ಯಕರ್ತರನ್ನು ನಿಂದಿಸಿದ್ದಾರೆ. ಅಲ್ಲದೆ ಕೋಮು ಪ್ರಚೋದನೆಯ ಘೋಷಣೆ ಮೂಲಕ ಗಲಭೆ ಸೃಷ್ಟಿಸುವ ಹುನ್ನಾರವನ್ನೂ ನಡೆಸಿದ್ದಾರೆ. ಮತಗಟ್ಟೆ ಆವರಣದಲ್ಲಿದ್ದ ಗಂಗಾಧರ್ ಅವರ ಮೇಲೆ ಬಿಜೆಪಿ ಕಾರ್ಯಕರ್ತರು ಏಕಾಏಕಿ ಹಲ್ಲೆ ನಡೆಸಿದ ಸಂದರ್ಭದಲ್ಲಿ ಪರಿಸ್ಥಿತಿ ತಿಳಿಗೊಳಿಸಲು ಸ್ಥಳಕ್ಕೆ ಬಂದ ಅಧ್ಯಕ್ಷರಾದ ಅಕ್ಮಲ್ ಅವರನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿ ಪದಗಳಿಂದ ಅಹಿತಕರ ಘಟನೆಗೆ ಪ್ರಚೋದಿಸಿದ್ದಾರೆ. ಆದ್ದರಿಂದ ಬಿಜೆಪಿಯವರೇ ಈ ಘಟನೆಗೆ ನೇರಾ ಕಾರಣರಾಗಿದ್ದರೂ ಇದೀಗ ಕಾಂಗ್ರೆಸಿನ ಅಕ್ಮಲ್ ಮತ್ತು ಗಂಗಾಧರ ಅವರ ಮೇಲೆಯೇ ಸುಳ್ಳು ದೂರು ದಾಖಲಾಗಿರುವುದು ತೀರಾ ಖಂಡನೀಯ. ಹೀಗಾಗಿ ಇದನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಹನೀಫ್ ಅವರು ಹೇಳಿದರು.

ಘಟನೆ ಸಂದರ್ಭ ನಡೆದ ಎಲ್ಲಾ ದೃಶ್ಯಾವಳಿಗಳು ಸ್ಥಳದಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಅಲ್ಲದೆ ಹಲ್ಲೆಗೊಳಗಾದ ಕಾಂಗ್ರೆಸ್ ಕಾರ್ಯಕರ್ತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲೂ ಬಿಜೆಪಿ ಕಾರ್ಯಕರ್ತರು ಗಲಭೆಗೆ ಪ್ರಚೋದಿಸುತ್ತಿದ್ದ ದೃಶ್ಯವೂ ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದ್ದರಿಂದ ಇವುಗಳ ಸಿಸಿಟಿವಿ ಫುಟೇಜ್ ಪೊಲೀಸರು ವಶಪಡಿಸಿಕೊಂಡು ನಿಷ್ಪಕ್ಷಪಾತವಾದ ತನಿಖೆ ನಡೆಸಬೇಕು. ತನಿಖೆಯ ಮೂಲಕ ಬಯಲಾಗುವ ಸತ್ಯಾಂಶದ ಆಧಾರದಲ್ಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಜೊತೆಗೆ ಸುಳ್ಳು ದೂರು ನೀಡಿದವರ ಮೇಲೆಯೂ ಪೊಲೀಸರು ಪ್ರಕರಣ ದಾಖಲಿಸಬೇಕು ಎಂದು ಪೋಲಿಸ್ ಇಲಾಖೆಯನ್ನು ಒತ್ತಾಯಿಸಿದ ಹನೀಫ್, ಬಿಜೆಪಿ ಯವರ ಸುಳ್ಳು ದೂರಿನ ಆಧಾರದಲ್ಲಿ ಕಾಂಗ್ರೆಸ್ ಮುಖಂಡರನ್ನು ಮತ್ತು ಕಾರ್ಯಕರ್ತರನ್ನು ಪೊಲೀಸರು ಬಂಧಿಸಲು ಮುಂದಾದರೆ ಪಕ್ಷದ ವತಿಯಿಂದ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಅಧ್ಯಕ್ಷರ ಈ ಭೇಟಿ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಟಿ. ಈ. ಸುರೇಶ್, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎಂ. ಸಯ್ಯದ್ ಭಾವ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾದ ಕೆ.ಜೆ. ಪೀಟರ್, ಪ್ರಮುಖರಾದ ಈರಪ್ಪ, ಅಶೋಕ್, ರಫೀಕ್ ಖಾನ್, ಮೊಹಮ್ಮದ್ ಅಲಿ ಸಿದ್ದಾಪುರ ಮೊದಲಾದವರಿದ್ದರು.

Font Awesome Icons

Leave a Reply

Your email address will not be published. Required fields are marked *