ಬೂದಿತಿಟ್ಟು ಗ್ರಾಮದಲ್ಲಿ ಅಧಿಕಾರಿಗಳು ನೀರಿನ ಸಮಸ್ಯೆ ಪರಿಹರಿಸಿದ್ದು ಹೇಗೆ?

ಮೈಸೂರು: ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡುವ ಮೂಲಕ ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಂಡ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೂದಿತಿಟ್ಟು ಗ್ರಾಮದಲ್ಲಿ ನಡೆದಿದೆ.

ಬರದ ಕಾರಣದಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸಿದ್ದು, ಮತ ಕೇಳಲು ಬರುವ ರಾಜಕೀಯ ನಾಯಕರತ್ತ ನಮಗೆ ನೀರು ಕೊಡಿ ಆಮೇಲೆ ಮತ ನೀಡುತ್ತೇವೆ ಎಂದು ಜನ ತಮ್ಮ ಆಕ್ರೋಶಗಳನ್ನು ಹೊರ ಹಾಕುತ್ತಿದ್ದಾರೆ. ರಣಬಿಸಿಲಿಗೆ ಜಲಮೂಲಗಳು ಬತ್ತಿರುವ ಕಾರಣ ಗ್ರಾಮೀಣ ಪ್ರದೇಶದ ಅದರಲ್ಲೂ ಕಾಡಂಚಿನ ಜನರು ನೀರಿಗಾಗಿ ಹುಡುಕಾಟ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ನೀರಿಗಾಗಿ ಪರದಾಡುತ್ತಿರುವ ಬಹುತೇಕ ಗ್ರಾಮೀಣ ಭಾಗದ ಜನರು ಸಿಡಿದೆದ್ದಿದ್ದು, ನೀರಿನ ವ್ಯವಸ್ಥೆ ಮಾಡಿಕೊಡದೆ ಹೋದರೆ ಮತದಾನ ಬಹಿಷ್ಕಾರ ಮಾಡುವ ಎಚ್ಚರಿಕೆಯನ್ನು ನೀಡುತ್ತಿದ್ದಾರೆ. ಹೀಗಾಗಿ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮನೆಮನೆಗೆ ತೆರಳಿ ಪ್ರಚಾರ ಮಾಡುವ ನಾಯಕರು ಹಾಗೂ ಕಾರ್ಯಕರ್ತರಿಗೆ ಜನರನ್ನು ಸಮಾಧಾನ ಮಾಡುವುದೇ ಒಂದು ಸವಾಲ್ ಆಗಿದೆ.

ಈ ನಡುವೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೂದಿತಿಟ್ಟು ಗ್ರಾಮದಲ್ಲಿ ಜನ ಆಕ್ರೋಶಗೊಂಡಿದ್ದು, ಇಲ್ಲಿನ ತಮಿಳರ ಕಾಲೋನಿಯಲ್ಲಿ ಸುಮಾರು ಒಂದು ತಿಂಗಳಿನಿಂದ ಕುಡಿಯುವ ನೀರು ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿದ್ದರೂ ಸಮಸ್ಯೆ ಬಗೆಹರಿಸಲು ವಿಫಲವಾದ ತಾಲೂಕು ಹಾಗೂ ಸ್ಥಳೀಯ ಆಡಳಿತ ನಿರ್ಲಕ್ಷತನ ಖಂಡಿಸಿ ನಿವಾಸಿಗಳು ಪ್ರತಿಭಟನೆ ನಡೆಸಿ ಮುಂಬರುವ ಲೋಕಸಭೆ ಚುನಾವಣೆ ಬಹಿಷ್ಕಾರ ಹಾಕುವ ಎಚ್ಚರಿಕೆ ನೀಡಿದ್ದರು.

ಇನ್ನು ಗ್ರಾಮದ ಯಜಮಾನರಾದ ಮಹದೇಶ್ವರ ಅವರು ಮಾತನಾಡಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಅಡಿಯಲ್ಲಿ ಕೆಲಸ ನಡೆಯುತ್ತಿದ್ದು ಪೈಪ್ ಲೈನ್ ಕಾಮಗಾರಿ ಪೂರ್ಣಗೊಂಡಿಲ್ಲದ ಕಾರಣ ಸಂಬಂಧಿಸಿದ ಗುತ್ತಿಗೆದಾರ ಹಾಗೂ ಇಲಾಖೆಯವರು ನಿರ್ಲಕ್ಷತನ ತೋರಿದ್ದರಿಂದಾಗಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ ಯಾವುದೇ ಅಧಿಕಾರಿಗಳು ಸಹ ಇತ್ತ ಸುಳಿದಿಲ್ಲ ಪಂಚಾಯತಿ ವತಿಯಿಂದ ಒಂದೆರಡು ಬಾರಿ ಟ್ಯಾಂಕರ್ ನಲ್ಲಿ ನೀರು ಪೂರೈಕೆ ಮಾಡಿದರೂ ನಂತರ ಯಾರು ಬರಲಿಲ್ಲ ಇದರಿಂದ ಬೇಸರವಾಗಿ ನಿವಾಸಿಗಳೆಲ್ಲರೂ ಒಮ್ಮತದಿಂದ ಮುಂಬರುವ ಲೋಕಸಭಾ ಚುನಾವಣೆ ಬಹಿಷ್ಕರಿಸುವ ತೀರ್ಮಾನಕ್ಕೆ ಬಂದಿದ್ದಾಗಿ ಹೇಳಿದ್ದರು.

ಯಾವಾಗ ಗ್ರಾಮಸ್ಥರು ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದರೋ ಕೂಡಲೇ ಸ್ಥಳಕ್ಕೆ ತಹಶೀಲ್ದಾರ್ ಸುರೇಂದ್ರ ಮೂರ್ತಿ ಹಾಗೂ ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕಾಧಿಕಾರಿ ಡಿ.ಬಿ ಸುನಿಲ್ ಕುಮಾರ್ ಭೇಟಿ ನೀಡಿ ನಿವಾಸಿಗಳೊಂದಿಗೆ ಮಾತುಕತೆ ನಡೆಸಿ ಜಲ್ ಜೀವನ್ ಮಿಷನ್ ಅಡಿಯಲ್ಲಿ ನಡೆಯುತ್ತಿರುವ ಪೈಪ್ ಲೈನ್ ಕಾಮಗಾರಿ ಸರಿಪಡಿಸಿ ಒಂದು ಬೋರ್ ವೆಲ್ ಕೊರೆಸಲು ಅನುಮತಿ ನೀಡಿ ಸ್ಥಳದಲ್ಲಿಯೇ ನೀರಿನ ಸಮಸ್ಯೆ ಬಗೆಹರಿಸಿ ಗ್ರಾಮಸ್ಥರು ಚುನಾವಣೆಯಲ್ಲಿ ಮತದಾನ ಮಾಡುವಂತೆ ಜನರನ್ನು ಮನವೊಲಿಸುವಲ್ಲಿ ಸಫಲರಾಗಿದ್ದಾರೆ.

ಭೇಟಿಯ ಸಂದರ್ಭದಲ್ಲಿ ಆರ್ ಡಬ್ಲ್ಯೂಎಸ್ ಇಲಾಖೆ ಎಇಇ ಕೃಷ್ಣಮೂರ್ತಿ, ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಜಿ.ಸಿ ಮಹದೇವ್, ಗುತ್ತಿಗೆದಾರ ಬಸವರಾಜು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮೋಹನ್ ಕುಮಾರ್, ಕಂದಾಯ ಅಧಿಕಾರಿ ಪಾಂಡುರಂಗ, ಗ್ರಾಮ ಪಂಚಾಯತಿ ಸದಸ್ಯ ರವಿಚಂದ್ರ ಬೂದಿತಿಟ್ಟು ಮತ್ತು ಗ್ರಾಮಸ್ಥರು ಇದ್ದರು.

Font Awesome Icons

Leave a Reply

Your email address will not be published. Required fields are marked *