ಭಾಲ್ಕಿ ಕ್ಷೇತ್ರದಲ್ಲಿ ಅತ್ಯಧಿಕ ಮತದಾನ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಬೀದರ್‌: ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಶೇ 65.45ರಷ್ಟು ಮತದಾನ ದಾಖಲಾಗಿದ್ದು, ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಭಾಲ್ಕಿಯಲ್ಲಿ ಅತಿ ಹೆಚ್ಚು ಜನ ಹಕ್ಕು ಚಲಾವಣೆ ಮಾಡಿದ್ದಾರೆ.

ಭಾಲ್ಕಿ ಕ್ಷೇತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರು ಪ್ರತಿನಿಧಿಸುತ್ತಾರೆ.

ಅವರ ಮಗ ಸಾಗರ್‌ ಖಂಡ್ರೆ ಈ ಸಲದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯೂ ಹೌದು. ಶೇ 70.05ರಷ್ಟು ಮತದಾನ ಭಾಲ್ಕಿಯಲ್ಲಾಗಿದ್ದು, ಈ ಕ್ಷೇತ್ರದಲ್ಲಿ ಯಾರಿಗೆ ಮುನ್ನಡೆ ಸಿಗಲಿದೆ ಎಂಬ ಸಹಜ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ಇನ್ನು, ಭಾಲ್ಕಿ ನಂತರ ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲೂ ಮತದಾರರಿಂದ ಉತ್ತಮ ಪ್ರಕ್ರಿಯೆ ವ್ಯಕ್ತವಾಗಿದೆ. ಶೇ 69.80ರಷ್ಟು ಮತದಾನ ದಾಖಲಾಗಿದ್ದು, ಕ್ಷೇತ್ರದಲ್ಲಿ ಅತಿ ಹೆಚ್ಚು ಮತ ಚಲಾವಣೆಯಾದ ಕ್ಷೇತ್ರಗಳಲ್ಲಿ ಎರಡನೇ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಔರಾದ್‌, ಹುಮನಾಬಾದ್‌ ಕ್ಷೇತ್ರಗಳಿವೆ. ಕ್ರಮವಾಗಿ ಎರಡೂ ಕ್ಷೇತ್ರಗಳಲ್ಲಿ ಶೇ 66.94, ಶೇ 66.28ರಷ್ಟು ಜನ ಹಕ್ಕು ಚಲಾಯಿಸಿದ್ದಾರೆ.

ಇದಾದ ಬಳಿಕ ಬೀದರ್‌ ಕ್ಷೇತ್ರವಿದ್ದು, ಶೇ 65.30ರಷ್ಟು ಮತದಾನಕ್ಕೆ ಸಾಕ್ಷಿಯಾಗಿದೆ. ಬಸವಕಲ್ಯಾಣದಲ್ಲಿ ಶೇ 63.53ರಷ್ಟು, ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಶೇ 59.06ರಷ್ಟು ಮತದಾನ ದಾಖಲಾಗಿದೆ. ಈ ಕ್ಷೇತ್ರವನ್ನು ಕಾಂಗ್ರೆಸ್‌ ಶಾಸಕರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜಕೀಯ ಸಲಹೆಗಾರ ಬಿ.ಆರ್‌. ಪಾಟೀಲ ಅವರು ಪ್ರತಿನಿಧಿಸುತ್ತಾರೆ.

ಗೆಲುವಿನ ಲೆಕ್ಕಾಚಾರ ಶುರು: ಮತದಾನ ಮುಗಿದ ಬೆನ್ನಲ್ಲೇ ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಕಣದಲ್ಲಿ ಒಟ್ಟು 18 ಅಭ್ಯರ್ಥಿಗಳಿದ್ದರು. ಆದರೆ, ಬಿಜೆಪಿ-ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ನಡೆದಿದೆ.

2019ರಲ್ಲಿ ನಡೆದ ಚುನಾವಣೆಯಲ್ಲಿ ಶೇ 62.58ರಷ್ಟು ಮತದಾನ ದಾಖಲಾಗಿತ್ತು. ಈಗ ಶೇ 65.45ರಷ್ಟು ದಾಖಲಾಗಿದ್ದು, ತುಸು ಹೆಚ್ಚಳ ಕಂಡಿದೆ.

ಅಧಿಕ ಮತದಾನ ನಡೆದಿರುವುದಕ್ಕೆ ಕಾಂಗ್ರೆಸ್‌ನವರು ಕೇಂದ್ರ ಸಚಿವ, ಬಿಜೆಪಿ ಅಭ್ಯರ್ಥಿ ಭಗವಂತ ಅವರ ವಿರೋಧಿ ಅಲೆಯೇ ಇದಕ್ಕೆ ಕಾರಣ ಎಂದು ವ್ಯಾಖ್ಯಾನಿಸುತ್ತಿದ್ದಾರೆ. ಇನ್ನು, ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯಿಂದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ಹಿಂದಿನ ಸಲಕ್ಕಿಂತ ಈ ಸಲ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲುವುದಾಗಿ ಬಿಜೆಪಿ ಮುಖಂಡರು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

Font Awesome Icons

Leave a Reply

Your email address will not be published. Required fields are marked *