ರಾಜಕೀಯ ವ್ಯಭಿಚಾರ ಮಾಡೋರು ಎಲ್ಲಾ ಕಡೆ ಸಲ್ಲುತ್ತಾರೆ; ಅಡ್ಡ ಮತದಾನಕ್ಕೆ ಸಿ.ಟಿ.ರವಿ ವಾಗ್ದಾಳಿ

ಚಿಕ್ಕಮಗಳೂರು: ಯಾವುದೇ ಪಕ್ಷವಾಗಲಿ ಅವಕಾಶವಾದಿಗಳಿಗೆ ಸಪೋರ್ಟ್ ಮಾಡೋದು ಅನೈತಿಕ ರಾಜಕಾರಣಕ್ಕೆ ವೇದಿಕೆ ಸೃಷ್ಠಿಸಿದಂತೆ. ರಾಜಕಾರಣದ ವ್ಯಭಿಚಾರ ಮಾಡೋರು ಎಲ್ಲಾ ಕಡೆ ಸಲ್ಲುತ್ತಾರೆ. ರಾಜಕೀಯ ವ್ಯಭಿಚಾರ ಮಾಡೋರು ಎಲ್ಲಾ ಕಡೆ ಹೋಗಿ ಸುಲಭವಾಗಿ ಸೆಟ್ ಆಗುತ್ತಾರೆ ಎಂದು ಮಾಜಿ ಸಚಿವ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಅವರು ಅಡ್ಡ ಮತದಾನ ಮಾಡಿದ್ದಾರೆ ಎಂಬ ವಿಚಾರದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವ್ಯಕ್ತಿ ಸಂಬಂಧಕ್ಕೋಸ್ಕರ ರಾಜೀ ರಾಜಕಾರಣ ಒಳ್ಳೆಯದ್ದಲ್ಲ. ಅವಕಾಶವಾದಿಗಳಿಗೆ ಸಪೋರ್ಟ್ ಮಾಡೋದು ಅನೈತಿಕ ರಾಜಕಾರಣಕ್ಕೆ ವೇದಿಕೆ ಸೃಷ್ಠಿಸಿದಂತೆ. ಪಕ್ಷ-ಪಕ್ಷ ಅನ್ನೋ ನಾವು ಪ್ರಶ್ನೆಗಳಿಗೆ ಒಳಗಾಗ್ತೀವಿ. ರಾಜಕಾರಣದ ವ್ಯಭಿಚಾರ ಮಾಡೋರು ಎಲ್ಲಾ ಕಡೆ ಸಲ್ಲುತ್ತಾರೆ. ರಾಜಕೀಯ ವ್ಯಭಿಚಾರ ಮಾಡೋರು ಎಲ್ಲಾ ಕಡೆ ಹೋಗಿ ಸುಲಭವಾಗಿ ಸೆಟ್ ಆಗ್ತಾರೆ ಎಂದು ಕಿಡಿಕಾರಿದರು.

ಇನ್ನು ಹಾರ್ಡ್ ಕೋರ್, ಸಿದ್ಧಾಂತಕ್ಕೆ ರಾಜಕಾರಣ ಮಾಡೋರು ನಿಷ್ಠೂರಕ್ಕೆ ಒಳಗಾಗ್ತಾರೆ. ಇಂಥವರು ನಮ್ಮ ಪಕ್ಷದ ಮುಖ್ಯಮಂತ್ರಿ ಹಾಗೂ ಬೇರೆ ಪಕ್ಷದ ಮುಖ್ಯಮಂತ್ರಿ ಬಳಿಯೂ ಚೆನ್ನಾಗಿರುತ್ತಾರೆ. ವ್ಯಭಿಚಾರದ ರಾಜಕಾರಣಕ್ಕೆ ಯಾರೂ ಮಣೆ ಹಾಕಬಾರದು. ಪಕ್ಷದೊಳಗಿದ್ದು ರಾಜಕೀಯ ವ್ಯಭಿಚಾರ ಮಾಡೋದು ಶೂನ್ಯ ಸಹನೆ ಎಂದು ಹೇಳಿದರು.

ಮತ್ತೊಂದೆಡೆ ರಾಜಕೀಯದಲ್ಲಿ ಯಾರು ಶಾಶ್ವತ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ. ಕಾಂಗ್ರೆಸ್ಸಿಗೆ ಅಂದು ಜನಾರ್ಧನ ರೆಡ್ಡಿ ವಿಲನ್ ಆಗಿದ್ದರು. ಇಂದು ಕಾಂಗ್ರೆಸ್‌ಗೆ ಅವರೇ ಹೀರೋ ಆಗಿದ್ದಾರೆ. ಕಾಂಗ್ರೆಸ್ಸಿಗರೇ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದರು. ಆವತ್ತು ಬಿಜೆಪಿಯಲ್ಲಿದ್ದಾಗ ಜನಾರ್ಧನ ರೆಡ್ಡಿ ಇಡೀ ಕಾಂಗ್ರೆಸ್‌ಗೆ ದೊಡ್ಡ ವಿಲನ್ ಆಗಿದ್ದರು. ಜೊತೆಗೆ ಬಿಜೆಪಿಯಲ್ಲಿ ಇದ್ದಾಗ ಲೂಟಿಕೋರರಾಗಿದ್ದರು. ಈಗ ರೆಡ್ಡಿ ಕಾಂಗ್ರೆಸ್‌ಗೆ ಆಪತ್ಭಾಂದವ, ಹೀರೋ ಆಗಿದ್ದಾರೆ. ಇದೆಲ್ಲಾ ಕಾಲದ ಅನಿವಾರ್ಯತೆ ಅನಿಸುತ್ತದೆ ಎಂದು ಜನಾರ್ಧನ ರೆಡ್ಡಿ ಅವರು ಕಾಂಗ್ರೆಸ್‌ಗೆ ಮತ ಹಾಕಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಡ್ಡ ಮತದಾನ ಮಾಡಿರುವುದು ಅಕ್ಷಮ್ಯ ಅಪರಾಧ:
ಕೋಲಾರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ರಾಜ್ಯಸಭಾ ಚುನಾವಣೆ ಕುರಿತು ಮಾತನಾಡಿ, ಅಡ್ಡ ಮತದಾನ ಮಾಡಿರುವುದು ಅಕ್ಷಮ್ಯ ಅಪರಾಧ. ಪಕ್ಷದ ಚಿಹ್ನೆ ಮೇಲೆ ಹಾರಿಸಿ ಬಂದಿದ್ದಾರೆ. ಎಲ್ಲಾದ್ರೂ ಒಂದು ಕಡೆ ಗಟ್ಟಿಯಾಗಿ ಇರೋದಲ್ಲಿ ಅನ್ನೋದು ಇವರ ಧೋರಣೆಯಿಂದ ತಿಳಿದಿದೆ. ಅಡ್ಡ ಮತದಾನ ಮಾಡಿರುವವರ ವಿರುದ್ಧ ಪಕ್ಷ ಕ್ರಮ ಕೈಗೊಳ್ಳಲಿದೆ. ಬೇರೆ ಪಕ್ಷಕ್ಕೆ ಸೇರ್ತಾರೋ,ಇಲ್ವೋ ನೋಡೋಣ. ರಾಜ್ಯಾಧ್ಯಕ್ಷರು ಹಾಗೂ ನಾವೆಲ್ಲ ಚರ್ಚೆ ಮಾಡಿ ತೀರ್ಮಾನ ಮಾಡಿ ಕ್ರಮ ವಹಿಸುತ್ತೇವೆ. ಮೊದಲೇ ಅವರ ಮೇಲೆ ಕ್ರಮ ವಹಿಸಲಾಗಿತ್ತು,ಆದ್ರೂ ಈ ರೀತಿ ಮಾಡಿದ್ದಾರೆ.

ಪಾರ್ಟಿಗೆ ಮೋಸ ಮಾಡಿದವರ ಮೇಲೆ ಶಿಸ್ತು ಕ್ರಮ ಆಗುತ್ತದೆ: ಇನ್ನು ಯಾವುದೇ ಆಮಿಷ ಬರಲಾರದೆ ಈ ರೀತಿ ಮಾಡೋಕೆ ಸಾಧ್ಯವಿಲ್ಲ. ಹಣಕಾಸು ಸಚಿವೆ ನಿರ್ಮಲ ಸೀತರಾಮನ್ ಭೇಟಿ ಮಾಡಲು ಪ್ರಯತ್ನ ಮಾಡಿದ್ದು ಬೋಗಸ್. ಹಾಗಾದ್ರೆ, ಈಗ ಹಾರಿಸಿ ಬಂದಿರುವವರನ್ನು ಇವರ ಮನೆಯಲ್ಲಿ ಇಟ್ಕೊಳ್ತಾರಾ? ಬಿಜೆಪಿ ಹಾಗೂ ಎನ್‌ಡಿಎ ಯಿಂದ ಅಭ್ಯರ್ಥಿ ಹಾಕಲಾಗಿತ್ತು. ಆದರೆ, ಇವರು ಪಾರ್ಟಿಗೆ ಮೋಸ ಮಾಡಿದ್ದಾರೆ. ಆದ್ದರಿಂದ ಅವರ ಮೇಲೆ ಕ್ರಮ ಆಗುತ್ತದೆ. ಇನ್ನು ಜನಾರ್ದನ ರೆಡ್ಡಿ ಮತದಾನ ಮಾಡಿರುವುದರ ಬಗ್ಗೆ ನಾನು ಏನೂ ಮಾತಾಡಲ್ಲ. ಅದು ಅವರ ವೈಯಕ್ತಿಕ ನಿರ್ಧಾರ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

Font Awesome Icons

Leave a Reply

Your email address will not be published. Required fields are marked *