23 ಸಾವಿರ ಕೋಟಿಗೂ ಹೆಚ್ಚಿನ ಬಂಡವಾಳ ಆಕರ್ಷಿಸುವಲ್ಲಿ ಕರ್ನಾಟಕ ಸಫಲ-ಸಚಿವ ಎಂ.ಬಿ ಪಾಟೀಲ್. – Just Kannada | Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್

ಬೆಂಗಳೂರು,ಜನವರಿ,24,2024(www.justkannada.in): ‘ವಿಶ್ವ ಆರ್ಥಿಕ ವೇದಿಕೆಯ ದಾವೋಸ್‌ ಶೃಂಗಸಭೆಯಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಜೊತೆಗೆ ಮಾಡಿಕೊಂಡಿರುವ ಹಲವು ಒಪ್ಪಂದಗಳ ಫಲವಾಗಿ ಕರ್ನಾಟಕ ರಾಜ್ಯಕ್ಕೆ ₹ 23 ಸಾವಿರ ಕೋಟಿಗೂ ಹೆಚ್ಚಿನ ಮೊತ್ತದ ಬಂಡವಾಳ ಹರಿದು ಬರಲಿದೆ’ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆಗಳು ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ  ಎಂ.ಬಿ.ಪಾಟೀಲ್ ಅವರು ತಿಳಿಸಿದ್ದಾರೆ.

ವಿಧಾನಸೌದದ ಸಮ್ಮೇಳನ ಸಭಾಂಗಣದಲ್ಲಿ ಬುಧವಾರ ನಡೆದ ದಾವೋಸ್ ಪ್ರವಾಸದ ಫಲಶ್ರುತಿ ತಿಳಿಸುವ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಂ.ಬಿ ಪಾಟೀಲ್ ಅವರು, ‘ನೆಸ್ಲೆ, ಎಚ್‌ಪಿ, ಎಚ್‌ಸಿಎಲ್‌, ವೋಲ್ವೊ ಗ್ರೂಪ್‌, ಐಕಿಯಾ, ಸೋನಿ, ಮೈಕ್ರೊಸಾಫ್ಟ್‌, ಹಿಟಾಚಿ ಮತ್ತಿತರ ಜಾಗತಿಕ ಉದ್ಯಮಗಳ ಪ್ರಮುಖರ ಜೊತೆಗೆ ರಾಜ್ಯದ ನಿಯೋಗವು 50ಕ್ಕೂ ಹೆಚ್ಚಿನ ಸಭೆಗಳನ್ನು ನಡೆಸಿತು. ಬೆಂಗಳೂರಿನಲ್ಲಿ 100 ಮೆಗಾವಾಟ್ ಸಾಮರ್ಥ್ಯದ ಬೃಹತ್‌ ಗಾತ್ರದ ಡೇಟಾ ಸೆಂಟರ್ ಸ್ಥಾಪಿಸಲು ವೆಬ್ ವರ್ಕ್ಸ್ ಕಂಪನಿಯು ₹ 20,000 ಕೋಟಿ ಮೊತ್ತದ ಬಂಡವಾಳ ಹೂಡಿಕೆ ಮಾಡಲು ಬದ್ಧತೆ ಪ್ರಕಟಿಸಿದೆ. ಇದರಿಂದ 1000 ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ.   ಡಿಜಿಟಲ್ ಕೌಶಲ ವೃದ್ಧಿ ಪ್ರಕ್ರಿಯೆ ಹಮ್ಮಿಕೊಳ್ಳಲು ಮೈಕ್ರೊಸಾಫ್ಟ್ ವಾಗ್ದಾನ ಮಾಡಿದೆ. ಗ್ರಾಮೀಣ ಪ್ರದೇಶ ಕೇಂದ್ರೀತ ಆರ್ಥಿಕ ಬೆಳವಣಿಗೆ ಉತ್ತೇಜಿಸಲು ಹಿಟಾಚಿ ಕಂಪನಿಯು ‘ಎಂಒಯು’ಗೆ ಸಹಿ ಹಾಕಿದೆ’ ಎಂದರು.

‘ಬೆಂಗಳೂರಿನ ಆಚೆ’ಗೂ ಕೈಗಾರಿಕೆಗಳ ಅಭಿವೃದ್ಧಿಗೆ ಸಮಾನ ಕೊಡುಗೆ ನೀಡಲು ಉತ್ತರ ಕರ್ನಾಟಕ ಭಾಗದಲ್ಲಿ ತಮ್ಮ ವಹಿವಾಟು ಆರಂಭಿಸಲು ಹಲವಾರು ಕಂಪನಿಗಳು ಆಸಕ್ತಿ ತೋರಿಸಿವೆ.  ವಿಜಯಪುರ, ಹುಬ್ಬಳ್ಳಿ – ಧಾರವಾಡ, ಬೆಳಗಾವಿ ಮತ್ತಿತರ ಸ್ಥಳಗಳಲ್ಲಿ ಕೈಗಾರಿಕೆಗಳ ಸಮಾನ ಅಭಿವೃದ್ಧಿ ಸಾಧಿಸುವುದಕ್ಕೆ ಕೊಡುಗೆ ನೀಡುವ ಹಲವಾರು ಉಪಕ್ರಮಗಳನ್ನು ಹಮ್ಮಿಕೊಳ್ಳಲಿವೆ’ ಎಂದರು.

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ

‘ಲುಲು ಗ್ರೂಪ್‌, ಬಿಎಲ್‌ ಅಗ್ರೊ ವಿಜಯಪುರದಲ್ಲಿ ತಮ್ಮ ನೆಲೆ ವಿಸ್ತರಿಸಲಿವೆ. ವಿಜಯಪುರದಲ್ಲಿ ₹ 300 ಕೋಟಿ ವೆಚ್ಚದಲ್ಲಿ ಹೊಸ ಆಹಾರ ಸಂಸ್ಕರಣಾ ಘಟಕ ಸ್ಥಾಪಿಸಲು ಹಾಗೂ ಕಲಬುರಗಿಯಲ್ಲಿನ ತನ್ನ ಘಟಕದ ಸಾಮರ್ಥ್ಯ ವಿಸ್ತರಿಸುವ ಉದ್ದೇಶಕ್ಕೆ ಬಂಡವಾಳ ಹೂಡಿಕೆ ಮಾಡಲು ಲುಲು ಸಮೂಹವು ಯೋಜಿಸಿದೆ.

‘ ಬಿಎಲ್‌ ಅಗ್ರೊ ಕಂಪನಿಯು ವಿಜಯಪುರದಲ್ಲಿ ಸುಸಜ್ಜಿತ ಆಹಾರ ಸಂಸ್ಕರಣಾ ಘಟಕವನ್ನು ಆರಂಭಿಸಲಿದೆ.  ದೇಶಿ ಮತ್ತು ರಫ್ತು ಮಾರುಕಟ್ಟೆಗಳಿಗೆ ಪೂರೈಸಲು ಸ್ಥಳೀಯ ಆಹಾರ ಉತ್ಪನ್ನಗಳನ್ನು  ಖರೀದಿಸಿ ಅವುಗಳ ಶ್ರೇಣೀಕರಣ, ವಿಂಗಡಣೆ ಮತ್ತು ಪ್ಯಾಕೇಜಿಂಗ್‌ ಉದ್ದೇಶಕ್ಕೆ ಈ ಘಟಕ ನೆರವಾಗಲಿದೆ.

‘ಸ್ಮಾರ್ಟ್ ಸಿಟಿ ಮೂಲಸೌಲಭ್ಯ, ನವೀಕರಿಸಬಹುದಾದ ಇಂಧನ ಪರಿಹಾರಗಳು, ಡೇಟಾ ಕೇಂದ್ರಗಳು ಮತ್ತು ಸಂಬಂಧಿತ ವಲಯಗಳಲ್ಲಿ ವಿವಿಧ ಕಂಪನಿಗಳಿಂದ ಒಟ್ಟಾರೆ ₹3,000 ಕೋಟಿ ಮೊತ್ತದ ಬಂಡವಾಳ ಹೂಡಿಕೆಯ ಒಳಹರಿವು ಕಂಡುಬಂದಿದೆ.

‘ಎಬಿ ಇನ್‌ಬೇವ್‌ ಇಂಡಿಯಾ ಕಂಪನಿಯು ಕರ್ನಾಟಕದಲ್ಲಿ ತನ್ನ ಮದ್ಯ ತಯಾರಿಕಾ ಘಟಕಗಳ ತಯಾರಿಕಾ ಸಾಮರ್ಥ್ಯ ಹೆಚ್ಚಿಸಲು ₹ 400 ಕೋಟಿ ಮೊತ್ತದ ಬಂಡವಾಳ ತೊಡಗಿಸುವ ಇಂಗಿತ ವ್ಯಕ್ತಪಡಿಸಿದೆ’ ಎಂದು ಸಚಿವ ಎಂ.ಬಿ ಪಾಟೀಲ್ ವಿವರ ನೀಡಿದರು.

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ ಎಸ್ ಸೆಲ್ವಕುಮಾರ್, ಐಟಿಬಿಟಿ ಕಾರ್ಯದರ್ಶಿ ಕಪೂರ್‌ಕೌರ್‌,  ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಸಿಇಒ ಡಾ. ಮಹೇಶ್‌ ಮತ್ತಿತರ ಉನ್ನತ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

Key words: Minister -MB Patil – successful –attracting- investment – 23 thousand crores.

Font Awesome Icons

Leave a Reply

Your email address will not be published. Required fields are marked *