25 ರೂಪಾಯಿಗೆ ಒಂದು ಕೆಜಿ ಅಕ್ಕಿ ವಿತರಿಸಲು ಕ್ರಮ

ನವದೆಹಲಿ: ಅಗತ್ಯ ವಸ್ತುಗಳ ಬೆಲೆಯೇರಿಕೆಗೆ ತಡೆಯೊಡ್ಡಲು ಕೇಂದ್ರ ಸರ್ಕಾರ ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ಅದರ ಭಾಗವಾಗಿಯೇ ಕೆಜಿಗೆ 25ರೂ. ರಿಯಾಯ್ತಿ ದರದಲ್ಲಿ ‘ಭಾರತ್ ಅಕ್ಕಿ’ ಒದಗಿಸಲು ಮುಂದಾಗಿದೆ. ಈಗಾಗಲೇ ಕೇಂದ್ರ ಸರ್ಕಾರ ಗೋಧಿ ಹಿಟ್ಟನ್ನು ‘ಭಾರತ್ ಅಟ್ಟಾ’ ಹಾಗೂ ಬೇಳೆ ಕಾಳುಗಳನ್ನು ‘ಭಾರತ್ ದಾಲ್’ ಎಂಬ ಹೆಸರಿನಲ್ಲಿ ರಿಯಾಯ್ತಿ ದರದಲ್ಲಿ ಮಾರಾಟ ಮಾಡುತ್ತಿದ್ದು, ಈಗ ಅದೇ ಹಾದಿಯಲ್ಲಿ ಅಕ್ಕಿಯನ್ನು ಒದಗಿಸಲು ಮುಂದಾಗಿದೆ.

ಇನ್ನು ಭಾರತ್ ಅಕ್ಕಿಯನ್ನು ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ (ನಾಫೆಡ್), ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್ ಸಿಸಿಎಫ್), ಕೇಂದ್ರೀಯ ಭಂಡಾರ್ ಮಳಿಗೆಗಳು ಹಾಗೂ ಮೊಬೈಲ್ ವ್ಯಾನ್ ಗಳು ಸೇರಿದಂತೆ ಸರ್ಕಾರಿ ಸಂಸ್ಥೆಗಳ ಮೂಲಕ ಒದಗಿಸುವ ಸಾಧ್ಯತೆಯಿದೆ.

ಅಕ್ಕಿಯ ಬೆಲೆಯಲ್ಲಿ ದೇಶಾದ್ಯಂತ ಭಾರೀ ಏರಿಕೆ ಕಂಡುಬಂದಿದೆ. ಅಖಿಲ ಭಾರತ ಮಟ್ಟದಲ್ಲಿ ಅಕ್ಕಿಯ ಸರಾಸರಿ ರಿಟೇಲ್ ಬೆಲೆ ಕೆಜಿಗೆ 43.3ರೂ. ತಲುಪಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 14.1ರಷ್ಟು ದರ ಏರಿಕೆಯಾಗಿದೆ. ಅಗತ್ಯ ವಸ್ತುಗಳ ಬೆಲೆಯೇರಿಕೆಗೆ ತಡೆ ಹಾಕೋದು ಹಾಗೂ ಹಣದುಬ್ಬರ ನಿಯಂತ್ರಿಸೋದು ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂಬ ಮಾಹಿತಿಯನ್ನು ಅಧಿಕಾರಿಯೊಬ್ಬರು ನೀಡಿದ್ದಾರೆ. ಪ್ರಸ್ತುತ ಸರ್ಕಾರ ಭಾರತ್ ಗೋಧಿ ಹಿಟ್ಟನ್ನು ಕೆಜಿಗೆ 27.50ರೂ. ದರದಲ್ಲಿ ಹಾಗೂ ಕಡಲೆ ಬೇಳೆಯನ್ನು ಕೆಜಿಗೆ 60 ರೂ. ದರದಲ್ಲಿ ಒದಗಿಸುತ್ತಿದೆ. ಇನ್ನು ಈ ಉತ್ಪನ್ನಗಳನ್ನು 2,000ಕ್ಕೂ ಅಧಿಕ ರಿಟೇಲ್ ಶಾಪ್ ಗಳಲ್ಲಿ ವಿತರಿಸಲಾಗುತ್ತಿದೆ. ಭಾರತ್ ರೈಸ್ ಮಾರಾಟ ಪ್ರಕ್ರಿಯೆ ಕೂಡ ಭಾರತ್ ದಾಲ್ ಹಾಗೂ ಭಾರತ್ ಅಟ್ಟಾ ಮಾದರಿಯಲ್ಲೇ ನಡೆಯಲಿದೆ.

Font Awesome Icons

Leave a Reply

Your email address will not be published. Required fields are marked *