ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿಗೆ ಭಕ್ತಾದಿಗಳು ಹರಕೆ ಹೊತ್ತು ಬಿಡುವ ಗೂಳಿಯ ಮೇಲೆ ಕಿಡಿಗೇಡಿಗಳು ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ.
ಚಾಮರಾಜನಗರ ಬೈಪಾಸ್ ರಸ್ತೆಯಲ್ಲಿ ನೆರಳಾಡುತ್ತ ಬಿದ್ದಿದ್ದ ಗೂಳಿಯನ್ನು ಕಂಡು ಮರುಗಿದ ವನ್ಯಜೀವಿ ಸಂರಕ್ಷಕ ಗೋಳೂರು ಸ್ನೇಕ್ ಬಸವರಾಜು, ಗೂಳಿಯನ್ನು ರಕ್ಷಣೆ ಮಾಡಲು ಮುಂದಾಗಿದ್ದರು. ಈ ವೇಳೆ ಗೂಳಿಯಿಂದ ತಿವಿಸಿಕೊಂಡು, ತನ್ನ ಬಲಗಾಲನ್ನು ತುಳಿಸಿಕೊಂಡು ಗಾಯ ಮಾಡಿಕೊಂಡಿದ್ದರು.
ಆದರೂ ಬಿಡದೆ ಮೂಕ ಪ್ರಾಣಿಗೆ ಆಸರೆಯಾಗಿ, ಮಚ್ಚಿನಿಂದ ಹಲ್ಲೆ ನಡೆಸಿದ ಭಾಗಕ್ಕೆ ಚಿಕಿತ್ಸೆ ನೀಡಿ, ಗೂಳಿಯನ್ನು ಒಂದು ತಿಂಗಳ ಕಾಲ ರಕ್ಷಣೆ ಮಾಡಿ ಮತ್ತೆ ದೇವಾಲಯಕ್ಕೆ ಬಿಟ್ಟು ಮಾನವೀಯತೆ ಮೆರೆದಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಶ್ರೀ ನಂಜುಂಡೇಶ್ವರ ಸ್ವಾಮಿ ದೇವರಿಗೆ ಹರಕೆ ಹೊತ್ತ ಭಕ್ತಾದಿಗಳು ಸಾಕಷ್ಟು ಹಸು, ಕರು, ಗೂಳಿಗಳನ್ನು ತಂದು ಬಿಡುತ್ತಾರೆ. ಆದರೆ, ಗೋವುಗಳಿಗೆ ಇಲ್ಲಿ ಯಾವುದೇ ರಕ್ಷಣೆ ಇಲ್ಲ. ಹಾಲು ಕುಡಿಯುವ ಕರುಗಳನ್ನು ತಂದು ಬಿಡುತ್ತಾರೆ. ಇದರಿಂದ ಸಾಕಷ್ಟು ಕರುಗಳು ಸಾವನ್ನಪ್ಪಿವೆ.
ಸರ್ಕಾರ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲಿ ಗೋಶಾಲೆಯನ್ನು ಪ್ರಾರಂಭಿಸಿದರೆ ಗೋವುಗಳನ್ನು ಉಳಿಸಬಹುದು ಎಂದು ವನ್ಯಜೀವಿ ಸಂರಕ್ಷಕ ಗೋಳೂರು ಸ್ನೇಕ್ ಬಸವರಾಜ್ ಮನವಿ ಮಾಡಿದ್ದಾರೆ.