ಅಕ್ಷಯ ತೃತೀಯದಂದು ಲಕ್ಷ್ಮಿ ಮತ್ತು ಕುಬೇರನಿಗೆ ವಿಶೇಷ ಪೂಜೆ

ಅಕ್ಷಯ ತೃತೀಯವನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಅಂದಿನ ದಿನ ಭರವಸೆ, ಸಂತೋಷ, ಯಶಸ್ಸು, ಆರೋಗ್ಯ, ಐಶ್ವರ್ಯ ಮುಂತಾದ ಸಮೃದ್ಧಿಗಳು ಕ್ಷಯವಾಗುವುದಿಲ್ಲ, ಅಂದರೆ ಕಡಿಮೆ ಆಗುವುದಿಲ್ಲ ಎಂದು ಹೇಳಲಾಗುತ್ತದೆ.

ಈ ದಿನ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯನ್ನು ಮತ್ತು ಕುಬೇರನನ್ನು ಪೂಜಿಸುವ ಸಂಪ್ರದಾಯವಿದೆ. ಇದಲ್ಲದೆ, ದಾನ-ದಕ್ಷಿಣೆಗಳನ್ನು ನೀಡಲು ಪ್ರೋತ್ಸಾಹಿಸಲಾಗುತ್ತದೆ. ನೆರವಿನ ಅಗತ್ಯ ಉಳ್ಳವರಿಗೆ ದಾನ ಮಾಡಿದಷ್ಟೂ ಸಮೃದ್ಧಿ ಹೆಚ್ಚು ಎನ್ನುವ ಪ್ರತೀತಿಯೂ ಇದೆ. ಮೊಳಕೆ ಕಾಳುಗಳು, ಹಣ್ಣುಗಳು ಮತ್ತು ಸಿಹಿ ತಿಂಡಿಗಳನ್ನು ವಿತರಿಸುವ ವಾಡಿಕೆ ಕೆಲವೆಡೆಗಳಲ್ಲಿ ಇದೆ. ಕೆಲವರು ಅನ್ನದಾನವನ್ನೂ ನಡೆಸಿ ಕೊಡುತ್ತಾರೆ.

ಅಕ್ಷಯ ತೃತೀಯದ ಹಿಂದೆ ಹಲವಾರು ಪೌರಾಣಿಕ ಕಥೆಗಳಿವೆ. ಪಾಂಡವರು ವನವಾಸದಲ್ಲಿದ್ದಾಗ ದೂರ್ವಾಸರ ಕೋಪಕ್ಕೆ ತುತ್ತಾಗುವುದನ್ನು ತಪ್ಪಿಸಿದ್ದು ಅಕ್ಷಯ ಪಾತ್ರೆ. ಸಾವಿರಾರು ಶಿಷ್ಯಂದಿರ ಜೊತೆಗೆ ದೂರ್ವಾಸರು ಪಾಂಡವರ ಆಶ್ರಮಕ್ಕೆ ಆಗಮಿಸುತ್ತಾರೆ. ಅವರೆಲ್ಲರನ್ನೂ ಸತ್ಕರಿಸಬೇಕಾದ ಪರಿಸ್ಥಿತಿ ಪಾಂಡವರ ಪಾಲಿಗೆ ಒದಗುತ್ತದೆ.

ಆದರೆ ಅಕ್ಷಯಪಾತ್ರೆಯಲ್ಲಿ ದ್ರೌಪದಿಯೂ ಉಂಡು ಮಗುಚಿದ ಮೇಲೆ, ಆ ದಿನಕ್ಕೆ ಆಹಾರ ದೊರೆಯುವುದಿಲ್ಲ. ಮುಂದಿನ ದಾರಿ ಕಾಣದೆ ಅವರು ಕೃಷ್ಣನನ್ನು ಕರೆಯುತ್ತಾರೆ. ಅಲ್ಲಿಗೆ ಆಗಮಿಸುವ ಕೃಷ್ಣ, ಅದರಲ್ಲಿದ್ದ ಅಗುಳೊಂದನ್ನು ಸೇವಿಸಿದಾಗ, ದೂರ್ವಾಸರು ಮತ್ತವರ ಶಿಷ್ಯರ ಹೊಟ್ಟೆಯೆಲ್ಲ ಭರ್ತಿಯಾದ ಕಥೆಯನ್ನು ಕೇಳಿಯೇ ಇರುತ್ತೇವೆ. ಒಂದೇ ಅಗುಳು ಅಕ್ಷಯವಾಗಿ ಎಲ್ಲರ ಹೊಟ್ಟೆ ತುಂಬಿಸಿದ್ದ ಕಥೆಯು ಈ ದಿನಕ್ಕೆ ಸಂಬಂಧಿಸಿದ್ದು ಎನ್ನಲಾಗುತ್ತದೆ.

Font Awesome Icons

Leave a Reply

Your email address will not be published. Required fields are marked *