ಕಾಡಾನೆ ದಾಳಿಗೆ ಬಲಿಯಾದ ವ್ಯಕ್ತಿಯ ಕುಟುಂಬಕ್ಕೆ 15 ಲಕ್ಷ ಪರಿಹಾರ

ಮಡಿಕೇರಿ: ಬೆಳ್ಳಂಬೆಳಗ್ಗೆ ತೋಟಕ್ಕೆ ತೆರಳುತ್ತಿದ್ದ ವೇಳೆ ಕಾಡಾನೆ ತುಳಿತಕ್ಕೆ ಬಲಿಯಾದ ಬೆಳೆಗಾರನ ಕುಟುಂಬಕ್ಕೆ ಅರಣ್ಯ ಇಲಾಖೆ ವತಿಯಿಂದ  ಪರಿಹಾರವಾಗಿ 15 ಲಕ್ಷ ರೂಪಾಯಿಯ ಚೆಕ್ ನ್ನು ವಿತರಿಸಲಾಯಿತು.

ಅಯ್ಯಮಾಡ ಮಾದಯ್ಯ(63) ಅವರು ಬೆಳಿಗ್ಗೆ  6.45ರ ಸಮಯದಲ್ಲಿ ತೋಟಕ್ಕೆ ತೆರಳುತ್ತಿದ್ದ ಸಂದರ್ಭ ಪೊನ್ನಂಪೇಟೆ  ತಾಲೂಕು ಬೀರುಗ ಗ್ರಾಮದ ಚಾಮುಂಡಿ ಮುತ್ತಪ್ಪ ಕೊಲ್ಲಿ ರಸ್ತೆಯಲ್ಲಿ ದಿಢೀರ್ ಆಗಿ ಬಂದ ಕಾಡಾನೆ ದಾಳಿ ಮಾಡಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದರು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಡಿ. ಎಫ್.ಓ ಭಾಸ್ಕರ್  ಅವರು 15 ಲಕ್ಷ ರೂಪಾಯಿಯ ಚೆಕ್ ನ್ನು ವಿತರಿಸಿದ್ದಾರೆ. ಈ ಸಂದರ್ಭ ವಿಧಾನಪರಿಷತ್ ಸದಸ್ಯ  ಸುಜಾ ಕುಶಾಲಪ್ಪ,  ಎ.ಸಿ.ಎಫ್  ನೆಹರು, ರೈತ ಸಂಘದ ಪ್ರಮುಖರು ಮತ್ತು ಗ್ರಾಮಸ್ಥರು ಇದ್ದರು.

ಘಟನೆ ನಡೆದ ವಿಚಾರ ತಿಳಿದ ಸ್ಥಳೀಯರು  ಸ್ಥಳಕ್ಕೆ ಆಗಮಿಸಿ ಅರಣ್ಯ ಇಲಾಖೆ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಅಲ್ಲದೆ ಹಿರಿಯ ಅಧಿಕಾರಿಗಳು ಬರುವವರೆಗೆ ಮೃತದೇಹವನ್ನು ಸ್ಥಳದಿಂದ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.

ಆ ನಂತರ ಹಿರಿಯ ಅಧಿಕಾರಿಗಳು ಆಗಮಿಸಿದ ನಂತರ ತೀವ್ರ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಕೂಡಲೇ ಕಾರ್ಯಾಚರಣೆ ನಡೆಸಿ ನಾಡಿನಿಂದ ಕಾಡಿಗೆ ಆನೆಗಳನ್ನು ಅಟ್ಟುವಂತೆ ಆಗ್ರಹಿಸಿದರು. ಪ್ರತಿಭಟನಾಕಾರರ ಒತ್ತಾಯಕ್ಕೆ ಮಣಿದ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಕಾರ್ಯಾಚರಣೆ ಆರಂಭಿಸುವುದಾಗಿ ಭರವಸೆ ನೀಡಿದ ಬಳಿಕ ಮೃತ ದೇಹವನ್ನು  ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

ಕೊಡಗಿನಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಈಗಾಗಲೇ ಹಲವರನ್ನು ಬಲಿಪಡೆದಿದೆ. ಅರಣ್ಯ ಇಲಾಖೆ ಯಾವುದೇ ರೀತಿಯ ಕ್ರಮಕೈಗೊಳ್ಳದ ಕಾರಣದಿಂದ ಮೇಲಿಂದ ಮೇಲೆ ಘಟನೆಗಳು ನಡೆಯುತ್ತಿದೆ. ಘಟನೆ ನಡೆದ ಬೀರುಗ ಹಾಗೂ ಕುರ್ಚಿ ಗ್ರಾಮಗಳ ವ್ಯಾಪ್ತಿಯಲ್ಲಿ 40ಕ್ಕೂ ಹೆಚ್ಚು ಕಾಡಾನೆಗಳು  ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದು, ಅವು ಯಾವಾಗ ಬೇಕಾದರೂ ದಾಳಿ ಮಾಡುವ ಸಾಧ್ಯತೆ ಇರುವುದರಿಂದ ಕಾಡಿಗೆ ಅಟ್ಟುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *