ನರೇಂದ್ರ ಮೋದಿಯವರಿಗೆ ಮಲ್ಲಿಕಾರ್ಜುನ ಖರ್ಗೆ ಸವಾಲ್

ಕಲಬುರಗಿ:  ನಾನು ಕೇಂದ್ರ ಸಚಿವನಾಗಿದ್ದ ವೇಳೆ ಕಲಬುರಗಿ ಭಾಗಕ್ಕೆ ಮಾಡಿದ ಅಭಿವೃದ್ಧಿ ಕಾರ್ಯಗಳಲ್ಲಿ ಶೇ 10 ರಷ್ಟು ಕೆಲಸ ಮಾಡಿದ್ದರೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಹಬ್ಬಾಶ್ ಗಿರಿ ಹೇಳುತ್ತೇನೆ ಎಂದು ರಾಜ್ಯ ಸಭೆ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಬಹಿರಂಗ ಸವಾಲು ಹಾಕಿದರು.

ಲೋಕಸಭಾ ಚುನಾವಣೆ ಹಿನ್ನೆಲೆ ಶುಕ್ರವಾರ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರು ನಾಮಪತ್ರ ಸಲ್ಲಿಸಿದ ನಂತರ‌ ಎನ್ ವಿ ಕಾಲೇಜು ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಖರ್ಗೆ ಅವರು, ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಕಲಬುರಗಿಗೆ ಮೋದಿ ಅವರು ಇಲ್ಲಿಗೆ ಬಂದು ಹೋಗಿದ್ದಾರೆ. ಅವರು ಬಂದು ಹೋಗುವುದಕ್ಕೆ ನಮ್ಮ ಅಭ್ರ್ಯಂತರ ಇಲ್ಲ. ಆದರೆ, ತಮ್ಮ ಹತ್ತು ವರ್ಷಗಳ ಅವಧಿಯಲ್ಲಿ ಈ ಭಾಗಕ್ಕೆ ಏನು ಕೊಟ್ಟಿದ್ದಾರೆ ಹೇಳಬೇಕಿತ್ತು ಎಂದು ಆಗ್ರಹಿಸಿದರು.

ನಾನು ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸಂಸದನಾಗಿ, ಸಚಿವನಾಗಿ ಸಿಕ್ಕಿರುವ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಅದೇ ರೀತಿಹತ್ತು ವರ್ಷದಲ್ಲಿ ಮೋದಿ ಏನು ಅಭಿವೃದ್ದಿ ಮಾಡಿದ್ದಾರೆ ಹೇಳಲಿ ಎಂದು ಖರ್ಗೆ ಪ್ರಶ್ನಿಸಿದರು. ನನ್ನ ಅವಧಿಯಲ್ಲಿ ಮಂಜೂರಾಗಿದ್ದ ರೇಲ್ವೆ ವಲಯ ಯೋಜನೆ ವಾಪಸ್ ಹೋಯಿತು. ನನ್ನ ಮೇಲೆ ಏನು ಸಿಟ್ಟು ಗೊತ್ತಿಲ್ಲ ನಮ್ಮ ಮನವಿಯನ್ನು ಪುರಸ್ಕರಿಸಲಿಲ್ಲ‌ ಎಂದು ಖರ್ಗೆ ಅವರು ಬೇಸರ ಹೊರಹಾಕಿದರು.

ತಮ್ಮ ಅವಧಿಯಲ್ಲಿ ಕೈಗೊಂಡ ಅಭಿವೃದ್ದಿ ಕೆಲಸಗಳ ಪಟ್ಟಿ ನೀಡಿದ ಖರ್ಗೆ, ರಾಷ್ಟ್ರೀಯ ಹೆದ್ದಾರಿ, ಕೇಂದ್ರಿಯ ವಿಶ್ವವಿದ್ಯಾಲಯ ಸ್ಥಾಪಿಸಿದ್ದೇನೆ. ಮೂವತ್ತೇಳು ಹೊಸ‌ರೈಲು ಓಡಿಸಿದ್ದೇನೆ. ಜವಳಿ ಪಾರ್ಕ್ ಮಂಜೂರು ಮಾಡಿಸಿದ್ದೇವೆ. ಕಲಬುರಗಿಯಲ್ಲಿ ಇಎಸ್ ಐ ಆಸ್ಪತ್ರೆ ಕಟ್ಟಿದ್ದೇವೆ. ಇವುಗಳನ್ನು ನೀವು ಮಾಡಿ ಎಂದು ನನಗೆ ಯಾರೂ ಹೇಳಿರಲಿಲ್ಲ. ಆದರೆ ನಮ್ಮ ಭಾಗದ ಅಭಿವೃದ್ದಿಗಾಗಿ ಕೆಲಸ ಮಾಡಿದ್ದೇನೆ ಈಗ ಓಟು ಕೇಳುತ್ತಿದ್ದೇನೆ. ಅಭಿವೃದ್ದಿ ಆಗಬೇಕೆಂದರೆ ಕಾಂಗ್ರೆಸ್ ಗೆ ಮತ ನೀಡಿ, ಕಳೆದ ಸಲದ ಸೋಲಿನ ಸೇಡು ತೀರಿಸಿಕೊಳ್ಳಿ ಎಂದು ಮತದಾರರಿಗೆಮನವಿ ಮಾಡಿಕೊಂಡರು.

ಬಿಜೆಪಿಯವರು ಈಗ ಎಲ್ಲೆಡೆ ಮೋದಿ ಗ್ಯಾರಂಟಿ ಎಂದು ಸುಳ್ಳು ಹೇಳುತ್ತಿದ್ದಾರೆ‌. ಮೊದಲು ಜನರಿಗೆ ಮೋದಿ ಗ್ಯಾರಂಟಿ ಎಂದರೆ ಏನು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು. ನಾವು ರಾಜ್ಯದಲ್ಲಿ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳ ರೀತಿಯಲ್ಲೇ ತಮ್ಮ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ ಆದರೆ ಯಾವ ಗ್ಯಾರಂಟಿ ಎಂದು ಹೇಳಿಲ್ಲ . ಸುಳ್ಳಿಗೆ ಮತ್ತೊಂದು ಹೆಸರೇ ಬಿಜೆಪಿ ಎಂದು ಖರ್ಗೆ ವಾಗ್ದಾಳಿ ನಡೆಸಿದರು.

Font Awesome Icons

Leave a Reply

Your email address will not be published. Required fields are marked *