ಬೆಳಗ್ಗೆ ಖಾಲಿ ಹೊಟ್ಟೆಗೆ ಹಣ್ಣಿನ ಜ್ಯೂಸ್ ಕುಡಿಯಬಾರದು ಯಾಕೆ?

ಬೆಳಿಗ್ಗೆ ಎದ್ದ ಬಳಿಕ ಖಾಲಿಹೊಟ್ಟೆಯಲ್ಲಿ ಪ್ರಥಮ ಆಹಾರವಾಗಿ ಹಣ್ಣಿನ ರಸಗಳನ್ನು ಸೇವಿಸಿದರೆ ಇದರಿಂದ ರಕ್ತದಲ್ಲಿರುವ ಸಕ್ಕರೆಯ ಮಟ್ಟ ಥಟ್ಟನೇ ಏರುವುದು, ದಂತಕುಳಿಗಳು ಹಾಗೂ ಜೀರ್ಣವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳು ಹೆಚ್ಚುತ್ತವೆ. ಬದಲಾಗಿ ಹಣ್ಣಿನ ರಸಗಳನ್ನು ದಿನದ ಇತರ ಹೊತ್ತಿನ ಊಟಗಳೊಂದಿಗೆ ಸೇವಿಸಿದರೆ ಇದು ಪೋಷಕಾಂಶಗಳ ಹೀರಲ್ಪಡುವಿಕೆ ಮತ್ತು ಒಟ್ಟಾರೆ ಆರೋಗ್ಯ ವೃದ್ದಿಸಲು ನೆರವಾಗುತ್ತವೆ.

ನಮ್ಮ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳುವಲ್ಲಿ ನಮ್ಮ ದಿನದ ಪ್ರಥಮ ಆಹಾರ ಮಹತ್ತರ ಪಾತ್ರ ವಹಿಸುತ್ತದೆ. ಏಕೆಂದರೆ, ರಾತ್ರಿಯ ವಿಶ್ರಾಂತಿಯ ಸಮಯದಲ್ಲಿ ನಮ್ಮ ದೇಹ ಹಲವಾರು ಅನೈಚ್ಛಿಕ ಕಾರ್ಯಗಳನ್ನು ನೆರವೇರಿಸಿ ಬೆಳಗ್ಗೆದ್ದ ಬಳಿಕ ಮೆದುಳು ನಿಯಂತ್ರಿಸುವ ಐಚ್ಛಿಕ ಕಾರ್ಯಗಳು ಪ್ರಾರಂಭಗೊಳ್ಳುತ್ತವೆ.

ಸಹಜವಾಗಿ, ಜಠರ ಖಾಲಿಯಾಗಿರುವ ಕಾರಣ ಕೊಂಚ ಹಸಿವೂ ಕಾಣಿಸಿಕೊಳ್ಳುತ್ತದೆ. ಈ ಹಸಿವನ್ನು ನೀಗಿಸಲು ಹಲವರು ಸಿಹಿಯಾದ ಹಣ್ಣಿನ ರಸಗಳನ್ನು ಸೇವಿಸಲು ಇಷ್ಟಪಡುತ್ತಾರೆ. ಹಣ್ಣಿನ ರಸಗಳು ಪೋಷಕಾಂಶಗಳಿಂದ ಭರಿತವಾದ ಅದ್ಭುತ ಆಹಾರಗಳೇನೋ ಸರಿ, ಆದರೆ, ಇದನ್ನು ದಿನದ ಪ್ರಥಮ ಆಹಾರವಾಗಿ ಸೇವಿಸಿದರೆ ಇದು ಒಳ್ಳೆಯದು ಮಾಡುವುದಕ್ಕಿಂತ ಕೆಟ್ಟದ್ದು ಮಾಡುವುದೇ ಹೆಚ್ಚು. ವಾಸ್ತವದಲ್ಲಿ, ಇದು ಕೆಲವಾರು ಅನಾರೋಗ್ಯಗಳಿಗೆ ಮೂಲವೂ ಆಗಬಹುದು.

ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಧಿಡೀರನೇ ಏರಿಸುತ್ತದೆ
ತಾಜಾ ಹಣ್ಣುಗಳಲ್ಲಿ ಕರಗುವ ಮತ್ತು ಕರಗದ ನಾರಿನಂಶಗಳಿದ್ದು ಈ ಆಹಾರವನ್ನು ಜೀರ್ಣಿಸಿಕೊಳ್ಳಲು ನಮ್ಮ ಜೀರ್ಣಾಂಗಗಳಿಗೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ರಕ್ತದಲ್ಲಿ ಸಕ್ಕರೆಯ ಪ್ರಮಾಣ ನಿಧಾನವಾಗಿಯೇ ಆಗಮಿಸುತ್ತದೆ.

ಆದರೆ ಹಣ್ಣಿನ ರಸಗಳಲ್ಲಿ ಈ ನಾರಿನಂಶವನ್ನು ನಿವಾರಿಸಿರುವ ಕಾರಣ ಈ ಆಹಾರವನ್ನು ನಮ್ಮ ಜೀರ್ಣಾಂಗಗಳು ಅತಿ ಕಡಿಮೆ ಸಮಯದಲ್ಲಿ ಜೀರ್ಣಿಸಿಕೊಂಡು ಸಕ್ಕರೆಯನ್ನು ರಕ್ತಕ್ಕೆ ಬಿಡುಗಡೆ ಮಾಡುತ್ತವೆ. ಆಗ, ರಕ್ತದಲ್ಲಿ ಸಕ್ಕರೆಯ ಮಟ್ಟ ಧಿಡೀರನೇ ಏರುತ್ತದೆ. ಇದನ್ನೇ ವೈದ್ಯರು ಶುಗರ್ ಸ್ಪೈಕ್ ಎಂದು ಗುರುತಿಸುತ್ತಾರೆ. ಇದು ಅನಾರೋಗ್ಯಕರ ಬೆಳವಣಿಗೆಯಾಗಿದ್ದು ಹೃದಯ ಹಾಗೂ ಇತರ ಅಂಗಗಳಿಗೆ ಸಂಬಂಧಿಸಿದ ರೋಗಗಳು ಆವರಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

​ಅಧಿಕವಾಗುವ ಆಹಾರ ಸೇವನೆಯ ಬಯಕೆ​
ರಕ್ತದಲ್ಲಿ ಸಕ್ಕರೆಯ ಮಟ್ಟ ಧಿಡೀರನೇ ಏರಿದಂತೆಯೇ ಕೊಂಚ ಹೊತ್ತಿನ ಬಳಿಕ ಹಾಗೇ ಧಿಡೀರನೇ ಇಳಿಯುತ್ತದೆ. ಈ ಇಳಿಕೆಯಿಂದಾಗಿ ಕ್ಯಾಲೋರಿಗಳೂ ಕಡಿಮೆಯಾಗುವ ಕಾರಣ ಸುಸ್ತು ಮತ್ತು ಬಳಲಿಕೆಯ ಭಾವನೆಯನ್ನು ಮೂಡಿಸುತ್ತದೆ. ಮೆದುಳು ಈ ಬಳಲಿಕೆಯನ್ನು ಹಸಿವಿನ ಸಂಕೇತವಾಗಿ ಪರಿಗಣಿಸುವ ಕಾರಣ ಏನನ್ನಾದರೂ ತಿನ್ನುವ ಬಯಕೆ ಭುಗಿಲೇಳುತ್ತದೆ.

​ಹಲ್ಲುಗಳ ಆರೋಗ್ಯವನ್ನು ಕೆಡಿಸಬಹುದು​
ಖಾಲಿಹೊಟ್ಟೆಯಲ್ಲಿ ಹಣ್ಣಿನ ರಸದ ಸೇವನೆ ದಂತಗಳ ಆರೋಗ್ಯಕ್ಕೆ ಮಾರಕವಾಗಿದೆ. ಏಕೆಂದರೆ, ಹಣ್ಣಿನ ರಸಗಳು ಕೊಂಚ ಆಮ್ಲೀಯವಾಗಿದ್ದು ಇವು ಹಲ್ಲುಗಳ ಹೊರಕವಚವನ್ನು ಕರಗಿಸಿ ದಂತಕುಳಿ ಹಾಗೂ ಹಲ್ಲುಗಳು ಜುಮ್ಮೆನ್ನುವ ಸಂವೇದನೆ ಎದುರಾಗಲು ಕಾರಣವಾಗಬಹುದು.

ನಮ್ಮ ಜೀರ್ಣಾಂಗಗಳಲ್ಲಿ ಆಹಾರ ಜೀರ್ಣಗೊಳ್ಳಲು ಹಾಗೂ ಜೀರ್ಣಗೊಂಡ ಆಹಾರ ಮುಂದೆ ಚಲಿಸಲು ನಾರಿನಂಶ ಅತಿ ಅಗತ್ಯ. ಹಣ್ಣಿನ ರಸದಲ್ಲಿ ನಾರಿನಂಶವನ್ನು ನಿವಾರಿಸಿರುವ ಕಾರಣ ಮಲಬದ್ದತೆ ಹಾಗೂ ಜೀರ್ಣಾಂಗ ವ್ಯವಸ್ಥೆ ಏರುಪೇರುಗೊಳ್ಳಲು ಕಾರಣವಾಗಬಹುದು.

ಹಣ್ಣಿನ ರಸಗಳನ್ನು ಇತರ ಹೊತ್ತಿನಲ್ಲಿ ಸೇವಿಸುವುದು ಏಕಾಗಿ ಒಳ್ಳೆಯದು?​

ರಕ್ತದಲ್ಲಿ ಸಕ್ಕರೆಯ ಮಟ್ಟ ನಿಯಂತ್ರಿತ ಮಟ್ಟದಲ್ಲಿರುತ್ತದೆ ಹಾಗೂ ಊಟದೊಂದಿಗೆ ಸೇವಿಸಿದಾಗ ಹಸಿವಿನ ಭಾವನೆಯನ್ನು ತಗ್ಗಿಸುತ್ತದೆ.
ಇತರ ಆಹಾರಗಳೊಂದಿಗೆ ಸೇವಿಸಿದಾಗ ಪೋಷಕಾಂಶಗಳ ಹೀರಲ್ಪಡುವಿಕೆ ಉತ್ತಮಗೊಳ್ಳುತ್ತದೆ.
ಹಣ್ಣಿನ ರಸವನ್ನು ನಮ್ಮ ಊಟದ ಒಂದು ಭಾಗವಾಗಿಸುವ ಮೂಲಕ ದೇಹಕ್ಕೆ ಯಾವುದೇ ಪೋಷಕಾಂಶದ ಕೊರತೆ ಉಂಟಾಗುವುದಿಲ್ಲ
ಹಣ್ಣಿನ ರಸಗಳು ರುಚಿಯಾಗಿರುವ ಕಾರಣ ನಮ್ಮ ಊಟವನ್ನು ಇಷ್ಟಪಡುವಂತೆ ಮಾಡುತ್ತವೆ ಹಾಗೂ ಸೇವಿಸುವ ಆಹಾರದ ಪ್ರಮಾಣವೂ ಅಗತ್ಯಕ್ಕೆ ತಕ್ಕಂತಿರುತ್ತದೆ. ಇದು ಆಹಾರವನ್ನು ಆಸ್ವಾದಿಸಲು ಹಾಗೂ ಒಟ್ಟಾರೆ ಆರೋಗ್ಯ ಉತ್ತಮವಾಗಿರಲು ನೆರವಾಗುತ್ತದೆ.

Font Awesome Icons

Leave a Reply

Your email address will not be published. Required fields are marked *